ಶ್ರೀ ಶಾಂತಾದುರ್ಗೆಗೆ ತೊಟ್ಟಿಲು ತೂಗಿದ ಗುನಗರು

| Published : Jun 23 2024, 02:06 AM IST

ಶ್ರೀ ಶಾಂತಾದುರ್ಗೆಗೆ ತೊಟ್ಟಿಲು ತೂಗಿದ ಗುನಗರು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಶಾಂತಾದುರ್ಗೆಯ ಪ್ರತೀಕವಾದ ಶಿಶುವನ್ನು ತೊಟ್ಟಿಲಿನಲ್ಲಿಟ್ಟು ತೂಗಿ ಸಾಂಪ್ರದಾಯಿಕ ಆಚರಣೆ ನಡೆಸಲಾಯಿತು.

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕಿನ ಒಡತಿ ಭೂಮ್ತಾಯಿ ಶ್ರೀ ಶಾಂತಾದುರ್ಗಾ ದೇವರಿಗೆ ಶನಿವಾರದಂದು ಹುಟ್ಟಿದ ವೈಭವದ ಸಂಭ್ರಮ. ಈ ಸಂಭ್ರಮದಲ್ಲಿ ಶ್ರೀ ಶಾಂತಾದುರ್ಗೆಯ ಪ್ರತೀಕವಾದ ಶಿಶುವನ್ನು ತೊಟ್ಟಿಲಿನಲ್ಲಿಟ್ಟು ತೂಗಿ ಸಾಂಪ್ರದಾಯಿಕ ಆಚರಣೆ ನಡೆಸಲಾಯಿತು.

ಹೌದು.. ಅಂಕೋಲೆಯ ಅಧಿದೇವತೆ ಶ್ರೀ ಶಾಂತಾದುರ್ಗೆಗೆ ತನ್ನದೇ ಆದ ಮಹತ್ವಪೂರ್ಣ ಇತಿಹಾಸವಿದೆ. ಶಾಂತಾದುರ್ಗೆ ಎಂದೊಡನೆ ನಮಗೆ ಬಂಡಿಹಬ್ಬದ ವೈಭವ ಕಳೆ ಕಟ್ಟುತ್ತದೆ. ಇಂಥ ಭವ್ಯ ಪರಂಪರೆಯ ಇತಿಹಾಸವಿರುವ ಶ್ರೀ ಶಾಂತಾದುರ್ಗೆ ದೇವತೆಯ ಹುಟ್ಟಿದ ದಿನದ ಆಚರಣೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ವೈಶಿಷ್ಟಪೂರ್ಣ ಪದ್ಧತಿಯನ್ನು ಕುಂಬಾರಕೇರಿಯ ಕಳಸ ದೇವಸ್ಥಾನದ ಪಕ್ಕದಲ್ಲಿ ಜಟಗನ ಆವಾಸ ಸ್ಥಾನದಲ್ಲಿ ಸಾಕ್ಷೀಕರಿಸುತ್ತದೆ.

ತೊಟ್ಟಿಲ ಜಟಗನ ಹಬ್ಬದಂದು ಭೂಮ್ತಾಯಿ ಶ್ರೀ ಶಾಂತಾದುರ್ಗಾ ದೇವರ ಕಳಸದ ಬಂಗಾರದ ಗಿಂಡಿಯನ್ನು ಕಳಸ ದೇವಸ್ಥಾನಕ್ಕೆ ತರಲಾಗುತ್ತದೆ. ಕಳಸ ದೇವಸ್ಥಾನದಲ್ಲಿ ಸಿದ್ಧಪಡಿಸಿದ ಉಪಹಾರದೊಂದಿಗೆ ಕಳಸದ ಗಿಂಡಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ತೊಟ್ಟಿಲ ಜಟಗನ ಎದುರಿನಲ್ಲಿ ಕಟ್ಟಿದ ಬಾಳೆ ಹಂಬೆಯ ತೊಟ್ಟಿಲಿನಲ್ಲಿ ಅಕ್ಕಿ ಹಿಟ್ಟಿನಿಂದ ರೂಪಿಸಿದ ಭೂತಾಯಿಯ ಪ್ರತೀಕದ ಶಿಶುವನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಭೂತಾಯಿಯು ಹುಟ್ಟಿದ ದಿನವನ್ನು ತೊಟ್ಟಿಲ ಜಟಗನ ಹಬ್ಬವೆಂಬ ನಂಬಿಕೆ ಇದೆ.

ಶ್ರದ್ಧಾ ಭಕ್ತಿಯೊಂದಿಗೆ ಆಚರಣೆಗೊಳ್ಳುವ ತೊಟ್ಟಿಲ ಜಟಗನ ಹಬ್ಬದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಹರಕೆಯನ್ನು ಒಪ್ಪಿಸುತ್ತಾರೆ. ಮಕ್ಕಳಾಗದವರು ಪೂಜಿಸಿದಲ್ಲಿ ಮಕ್ಕಳಾಗುತ್ತವೆ ಎಂಬ ನಂಬಿಕೆ ಎಲ್ಲರಲ್ಲಿದೆ. ತೊಟ್ಟಿಲ ಜಟಗನ ಹಬ್ಬ ಆರಂಭವಾದ ನಂತರ ಭೂತಾಯಿಯ ದೇವಸ್ಥಾನದಲ್ಲಿ ಸೋಮವಾರದ ಪೂಜೆ ಸೇರಿದಂತೆ ಇತರೇ ಸೇವಾ ಕಾರ್ಯಗಳು ಆರಂಭಗೊಳ್ಳುವ ಪರಿಪಾಠ ರೂಢಿಯಲ್ಲಿದೆ.

ಕಳಸ ಹೊರುವ ಉದಯ ಗುನಗಾ ಹಾಗೂ ಬಿಡಿ ಗುನಗಾ, ವಾಸುದೇವ ಗುನಗಾ ಹಾಗೂ ಜಟಕನ ತೊಟ್ಟಿಲ ಜಟಗನ ಪೂಜೆಯನ್ನು ಅಲಗೇರಿಯ ಅಣ್ಣಪ್ಪ ಕೃಷ್ಣಾ ಗುನಗಾ ನೆರವೇರಿಸಿದರು. ವಿಘ್ನೇಶ್ವರ ಗುನಗಾ, ನಾರಾಯಣ ಗುನಗಾ, ಅರುಣ ಗುನಗಾ ಸಹಕರಿಸಿದರು.

ಏನಿದು ತೊಟ್ಟಿಲ ಜಟಗನ ಹಬ್ಬ

ಅಂಕೋಲೆಯ ಸಮಸ್ತ ಜನರ ಗ್ರಾಮ ದೇವತೆಯಾಗಿ ಭೂಮ್ತಾಯಿ ಶ್ರೀ ಶಾಂತಾದುರ್ಗಾ ಗುರುತಿಸಿಕೊಂಡಿದ್ದಾಳೆ. ಭೂಮಿ ದೇವತೆ, ಶ್ರೀ ಶಾಂತಾದುರ್ಗಾ ಎಂದು ಭಕ್ತರು ಭಕ್ತಿ ಭಾವದಿಂದ ಪೂಜಿಸುವ ಭೂಮ್ತಾಯಿ ದೇವರ ಬಂಡಿಹಬ್ಬ ಬುದ್ಧ ಪೂರ್ಣಿಮೆಯಂದು ನಡೆಯುತ್ತದೆ. ಸುಮಾರು 15 ದಿನಗಳ ಕಾಲ ನಡೆಯುವ ಬಂಡಿಹಬ್ಬದ ಆಚರಣೆಯ ಆರಂಭ ಆವಾರೆಯೊಂದಿಗೆ ಚಾಲನೆಗೊಳ್ಳುತ್ತದೆ. ಆವಾರೆಯೊಂದಿಗೆ ಭೂಮ್ತಾಯಿ ದೇವರ ಉಪಹಾರ ಸೇವೆ, ಪ್ರಸಾದ ಹಚ್ಚುವುದು, ಸುವರ್ಣಾಲಂಕಾರ ಪೂಜೆ ಪದ್ಧತಿಗಳು ಕೊನೆಗೊಂಡರೆ, ತೊಟ್ಟಿಲ ಜಟಗನ ಹಬ್ಬದೊಂದಿಗೆ ಮತ್ತೆ ಸೇವೆಗಳು ಆರಂಭಗೊಳ್ಳುವುದು ವಾಡಿಕೆ.ಸಂಕಲ್ಪ ಈಡೇರಿಸಲಿ

ತೊಟ್ಟಿಲ ಜಟಗ ಹಬ್ಬವೆಂದರೆ ಶ್ರೀ ಭೂಮ್ತಾಯಿ ಶ್ರೀ ಶಾಂತಾದುರ್ಗೆ ಹುಟ್ಟಿದ ದಿನ ಎಂದು ನಮೆಲ್ಲರ ನಂಬಿಕೆಯಾಗಿದೆ. ಶ್ರೀ ದೇವರನ್ನು ತೊಟ್ಟಿಲಿನಲ್ಲಿಟ್ಟು ತೂಗಿ ಸಂಭ್ರಮಿಸಲಾಗುತ್ತದೆ. ಸಂತಾನ ಇಲ್ಲದವರು ತೊಟ್ಟಿಲು ತೂಗಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ. ಶ್ರೀ ದೇವರು ಎಲ್ಲರ ಸಂಕಲ್ಪಗಳನ್ನು ಈಡೇರಿಸಲಿ

ವಾಸುದೇವ ನೀಲಪ್ಪ ಗುನಗಾ. ಬಿಡಿ ಗುನಗಾ.