ಸಾರಾಂಶ
ಬಡವರು, ಕಾರ್ಮಿಕರು, ವಿದ್ಯಾರ್ಥಿಗಳ ಪಾಲಿಗೆ ಆಸರೆಯಾಗಿದ್ದ ಪಟ್ಟಣದ ಇಂದಿರಾ ಕ್ಯಾಂಟೀನ್ ದಿಢೀರ್ ಬಂದಾಗಿ ಮೂರು ದಿನಗಳಾಗಿದೆ.
ರಂಗೂಪುರ ಶಿವಕುಮಾರ್
ಗುಂಡ್ಲುಪೇಟೆ : ಬಡವರು, ಕಾರ್ಮಿಕರು, ವಿದ್ಯಾರ್ಥಿಗಳ ಪಾಲಿಗೆ ಆಸರೆಯಾಗಿದ್ದ ಪಟ್ಟಣದ ಇಂದಿರಾ ಕ್ಯಾಂಟೀನ್ ದಿಢೀರ್ ಬಂದಾಗಿ ಮೂರು ದಿನಗಳಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೧೩ರಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾದ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಗುಂಡ್ಲುಪೇಟೆ ಪಟ್ಟಣದಲ್ಲೂ ಆರಂಭಗೊಂಡಿತ್ತು. ಈಗ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದಿದೆ. ಮತ್ತೆ ೨ ನೇ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸುವ ಹಂತದಲ್ಲಿದ್ದಾರೆ. ಅಲ್ಲದೆ, ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಾಪ್ತ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಕ್ಷೇತ್ರದ ಇಂದಿರಾ ಕ್ಯಾಂಟೀನ್ ಅನುದಾನವಿಲ್ಲದೆ ಬಾಗಿಲು ಮುಚ್ಚಿದೆ.
ಮೈಸೂರು-ಊಟಿ ಹೆದ್ದಾರಿಯ ಲೋಕೋಪಯೋಗಿ ಇಲಾಖೆಯ ಕಚೇರಿಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಗೇಟಿಗೆ ಬೀಗ ಜಡಿಯಲಾಗಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಓರ್ವ ಕುಕ್, ಇಬ್ಬರು ಸಪ್ಲೈಯರ್, ಇಬ್ಬರು ವಾಶಿಂಗ್ ಮಾಡುವ ಕಾರ್ಮಿಕರಿಗೆ 6 ತಿಂಗಳಿನಿಂದ ಸಂಬಳ ನೀಡಿಲ್ಲ. ಅಲ್ಲದೆ ರೇಷನ್, ಗ್ಯಾಸ್‌ಗೆ ಅನುದಾನ ನೀಡಿದ ಕಾರಣ ಬಂದ್ ಆಗಿದೆ ಎನ್ನಲಾಗುತ್ತಿದೆ.
ಇಂದಿರಾ ಕ್ಯಾಂಟೀನ್ ನಡೆಸುತ್ತಿದ್ದ ಗುತ್ತಿಗೆದಾರರ ಟೆಂಡರ್ ಅವಧಿ ಮುಗಿದಿದೆ. ಸಿಬ್ಬಂದಿಗೆ ಸಂಬಳ ನೀಡಿಲ್ಲ ಹಾಗೂ ಆಹಾರ ಪದಾರ್ಥಗಳಿಗೆ ಬಿಲ್ ಆಗದ ಕಾರಣ ಸಿಬ್ಬಂದಿ ಇಂದಿರಾ ಕ್ಯಾಂಟೀನ್ ಮುಚ್ಚಿ, ಗೇಟಿಗೆ ಬೀಗ ಹಾಕಿದ್ದಾರೆ. ಪ್ರತಿ ದಿನ ಕೂಲಿ ಕಾರ್ಮಿಕರು, ಬಡವರು ಹಾಗೂ ವಿದ್ಯಾರ್ಥಿಗಳು ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರ ಹಾಗೂ ಊಟವನ್ನು ಕಡಿಮೆ ಹಣದಲ್ಲಿ ಸೇವಿಸುತ್ತಿದ್ದರು. ಈಗ ಇಂದಿರಾ ಕ್ಯಾಂಟೀನ್‌ಗೆ ಬೀಗ ಬಿದ್ದಾಗಿದೆ.
ವಾಪಸ್ ತೆರಳುತ್ತಿರುವ ಸಾರ್ವಜನಿಕರು:
ಇಂದಿರಾ ಕ್ಯಾಂಟೀನ್ ಬೆಳಗ್ಗೆ ಬಂದಾಗಿ, ಗೇಟ್‌ಗೆ ಬೀಗ ಜಡಿದಿದ್ದ ಕಾರಣ ಬೆಳಗ್ಗೆ ಹಾಗೂ ಮಧ್ಯಾಹ್ನ ತಿಂಡಿ, ಊಟಕ್ಕಾಗಿ ಬಂದ ಜನರು ಇಂದಿರಾ ಕ್ಯಾಂಟೀನ್‌ಗೆ ಬಂದು ವಾಪಸ್ ತೆರಳಿದರು.
ಇದೇನಪ್ಪ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಜೊತೆಗೆ ಶಾಸಕರೂ ಕೂಡ ಕಾಂಗ್ರೆಸ್ ಪಕ್ಷದವರಾದರೂ ಬಡವರ ಪಾಲಿನ ಇಂದಿರಾ ಕ್ಯಾಂಟೀನ್ ಮುಚ್ಚಿರುವುದು ನನ್ನಂತ ಬಡವನಿಗೆ ದುಬಾರಿ ಹಣ ಕೊಟ್ಟು ಹೋಟೆಲ್‌ಗೆ ಹೋಗಕ್ಕಾಗಲ್ಲ ಎಂದು ಕೂಲಿ ಕಾರ್ಮಿಕ ಮಹದೇವಸ್ವಾಮಿ ಹೇಳಿದ್ದಾರೆ.
ಯಾರು ಹೊಣೆ:
ಬಡವರ ಪಾಲಿನ ಇಂದಿರಾ ಕ್ಯಾಂಟೀನ್ ಮುಚ್ಚಿದೆ. ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ತಿಂಡಿ, ಊಟ ಸಿಗದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಇಂದಿರಾ ಕ್ಯಾಂಟೀನ್ ನಡೆಸುತ್ತಿದ್ದ ಗುತ್ತಿಗೆದಾರರ ಅವಧಿ ಮುಗಿದಿದ್ದು, ಮತ್ತೊಬ್ಬರಿಗೆ ಟೆಂಡರ್ ಆಗಿದೆ. ವರ್ಕ್ ಆರ್ಡರ್ ಕೂಡ ನೀಡಲಾಗಿದೆ. ಒಂದೆರಡು ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ.-ಕೆ.ಪಿ.ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ, ಗುಂಡ್ಲುಪೇಟೆ