ಗುಂಡ್ಲುಪೇಟೆ ಪುರಸಭೆ ಮತ್ತೆ ಕೈತೆಕ್ಕೆಗೆ

| Published : Sep 05 2024, 12:33 AM IST

ಸಾರಾಂಶ

ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಬಿಜೆಪಿಯಿಂದ ಕಾಂಗ್ರೆಸ್‌ ಕಿತ್ತುಕೊಳ್ಳುವ ಮೂಲಕ ಪುರಸಭೆ ಅಧಿಕಾರವನ್ನು ಕಾಂಗ್ರೆಸ್‌ ಪಕ್ಷ ಮತ್ತೆ ವಶಪಡಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಬಿಜೆಪಿಯಿಂದ ಕಾಂಗ್ರೆಸ್‌ ಕಿತ್ತುಕೊಳ್ಳುವ ಮೂಲಕ ಪುರಸಭೆ ಅಧಿಕಾರವನ್ನು ಕಾಂಗ್ರೆಸ್‌ ಪಕ್ಷ ಮತ್ತೆ ವಶಪಡಿಸಿಕೊಂಡಿದೆ.

ನೂತನ ಅಧ್ಯಕ್ಷರಾಗಿ ಬಿಜೆಪಿ ಸದಸ್ಯ ಕಿರಣ್‌ ಗೌಡ, ಉಪಾಧ್ಯಕ್ಷರಾಗಿ ಹೀನಾ ಕೌಸರ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಹಿನ್ನೆಲೆ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದೆ. ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಪುರಸಭೆಯಲ್ಲಿ ಸ್ಪಷ್ಟ ಬಹುಮತ ಬಿಜೆಪಿಗೆ ಇದ್ದರೂ ಪುರಸಭೆ ಅಧಿಕಾರ ಹಿಡಿಯಲಾಗಲಿಲ್ಲ. ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ಸಿ.ಎಸ್. ನಿರಂಜನ್‌ ಕುಮಾರ್‌ಗೆ ಪಟ್ಟಣದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಹಾಗೂ ಮುಖಭಂಗ ಅನುಭವಿಸಿದ್ದಾರೆ.

ಅವಿರೋಧ ಆಯ್ಕೆ: ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯ ಕಿರಣ್‌ ಗೌಡ ಕಾಂಗ್ರೆಸ್‌ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ನಾಮಪತ್ರ ಸಲ್ಲಿಸದ ಕಾರಣ ಕಿರಣ್‌ಗೌಡ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯೆ ಹೀನಾ ಕೌಸರ್‌ ಕಾಂಗ್ರೆಸ್‌ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಸದಸ್ಯ ಕುಮಾರ್‌ ಎಸ್‌.ನಾಮಪತ್ರ ಸಲ್ಲಿಸಿ ಚುನಾವಣೆ ಎದುರಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌, ಸಂಸದ ಸುನೀಲ್‌ ಬೋಸ್‌, ಕಾಂಗ್ರೆಸ್‌ 8 ಮಂದಿ ಸದಸ್ಯರು, ಎಸ್‌ಡಿಪಿಐ ಸದಸ್ಯ ರಾಜಗೋಪಾಲ್‌, ಪಕ್ಷೇತರ ಸದಸ್ಯ ಪಿ. ಶಶಿಧರ್‌ ದೀಪು, ಬಿಜೆಪಿ ಸದಸ್ಯರಾದ ಕಿರಣ್‌ ಗೌಡ, ಹೀನಾ ಕೌಸರ್‌ ಮತ ಚಲಾಯಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಸದಸ್ಯ ಕುಮಾರ್‌ ಎಸ್‌ಗೆ ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್‌, ಮಾಜಿ ಉಪಾಧ್ಯಕ್ಷ ದೀಪಿಕಾ ಅಶ್ವಿನ್‌ ಸೇರಿದಂತೆ 8 ಮಂದಿ ಮತ ಚಲಾಯಿಸಿದರೆ, ಬಿಜೆಪಿ ಸದಸ್ಯರಾದ ರಮೇಶ್‌, ವೀಣಾ ಮಂಜುನಾಥ್‌, ರಾಣಿ ಲಕ್ಷ್ಮೀ ದೇವಿ ಚುನಾವಣೆಯಲ್ಲಿ ಮತ ಚಲಾಯಿಸದೆ ಕಾಂಗ್ರೆಸ್‌ ಗೆಲುವಿಗೆ ಪರೋಕ್ಷವಾಗಿ ಕಾರಣರಾದರು.

ಕಾಂಗ್ರೆಸ್‌ ಭರ್ಜರಿ ಗೆಲವು: ಕಾಂಗ್ರೆಸ್‌ ಬೆಂಬಲಿತ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೀನಾ ಕೌಸರ್‌ 14 ಮತ ಪಡೆದು 6 ಮತಗಳಿಂದ ಗೆಲುವು ಸಾಧಿಸಿದರು ಎಂದು ಚುನಾವಣಾಧಿಕಾರಿ ಟಿ.ರಮೇಶ್‌ ಬಾಬು ಘೋಷಿಸಿದರು. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಘೋಷಣೆ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್‌ ಕಾರ್ಯಕರ್ತರು ಪುರಸಭೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ಗೆ ಜೈಕಾರ ಮೊಳಗಿಸಿದರು.

ಅಧ್ಯಕ್ಷ, ಉಪಾಧ್ಯಕ್ಷರ ಪ್ರಕ್ರಿಯೆ ಮುಗಿದ ಬಳಿಕ ಪಟ್ಟಣದ ಕಾಂಗ್ರೆಸ್‌ ಕಾರ್ಯಾಲಯಕ್ಕೆ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌, ಸಂಸದ ಸುನೀಲ್‌ ಬೋಸ್‌ ಜೊತೆ ನೂತನ ಅಧ್ಯಕ್ಷ ಕಿರಣ್‌ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್‌ ಹಾಗೂ ಕಾಂಗ್ರೆಸ್‌ ಪುರಸಭೆ ಸದಸ್ಯರು, ಕಾಂಗ್ರೆಸ್‌ ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿದರು.

ನೂತನ ಅಧ್ಯಕ್ಷ ಕಿರಣ್‌ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್‌ಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ. ಮರಿಸ್ವಾಮಿ ಸನ್ಮಾನಿಸಿದರು. ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಸಂಸದ ಸುನೀಲ್‌ ಬೋಸ್‌ಗೆ ಸನ್ಮಾನಿಸಿದರು. ಈ ವೇಳೆ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಮಹೇಶ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ. ರಾಜಶೇಖರ್‌, ಪುರಸಭೆ ಮಾಜಿ ಅಧ್ಯಕ್ಷ ರಮೇಶ್‌, ಪುರಸಭೆ ಉಪಾಧ್ಯಕ್ಷೆ ಹೀನಾ ಕೌಸರ್‌ ಪತಿ ನವೀದ್‌ ಖಾನ್ ಸೇರಿದಂತೆ ಪುರಸಭೆ ಸದಸ್ಯರು,‌ ನೂರಾರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.

ಬಿಜೆಪಿ ಸದಸ್ಯರ ಪಕ್ಷಾಂತರ

ಕಾಂಗ್ರೆಸ್‌ ಗೆಲುವಿಗೆ ಕಾರಣ!ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಾದ ರಮೇಶ್‌, ವೀಣಾ ಮಂಜುನಾಥ್‌, ರಾಣಿ ಲಕ್ಷ್ಮೀ ದೇವಿ ಕಾಂಗ್ರೆಸ್‌ ಸೇರಿದ ಬಳಿಕವೂ ಚುನಾವಣೆಯಲ್ಲಿ ಗೈರಾಗುವ ಮೂಲಕ ಕಾಂಗ್ರೆಸ್‌ಗೆ ಅಧಿಕಾರ ತಂದು ಕೊಟ್ಟಿದ್ದಾರೆ. ಪುರಸಭೆ ಬಿಜೆಪಿ ಸದಸ್ಯರಾದ ಕಿರಣ್‌ ಗೌಡ, ಹೀನಾ ಕೌಸರ್‌ ಕಾಂಗ್ರೆಸ್‌ ಪಕ್ಷ ಸೇರಿದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಕಿರಣ್‌ ಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಹೀನಾ ಕೌಸರ್‌ ಸ್ಪರ್ಧಿಸಿದರು. ಆದರೂ ಪುರಸಭೆ ಸದಸ್ಯರಾದ ರಮೇಶ್‌, ವೀಣಾ ಮಂಜುನಾಥ್‌, ರಾಣಿ ಲಕ್ಷ್ಮೀದೇವಿ ಚುನಾವಣೆಯಲ್ಲಿ ಭಾಗವಹಿಸಲಿಲ್ಲ.

ಪುರಸಭೆಯ ಒಟ್ಟು 23 ಸದಸ್ಯರು ಹಾಗೂ ಸಂಸದ, ಶಾಸಕರ ಓಟು ಸೇರಿ 25 ಆದರೂ ಪುರಸಭೆ ಅಧ್ಯಕ್ಷ ಕಿರಣ್‌ ಗೌಡ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಹೀನಾ ಕೌಸರ್‌ ಸ್ಪರ್ಧಿಸಿ 14 ಮತ ಪಡೆದು ಗೆಲುವಿನ ನಗೆ ಬೀರಿದರು.

ವಿಪ್ ಉಲ್ಲಂಘನೆ:

ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮತ ಹಾಕಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್‌ ನೀಡಿದ ವಿಪ್ ಉಲ್ಲಂಘಿಸಿ ಐವರು ಬಿಜೆಪಿ ಸದಸ್ಯರಲ್ಲಿ ಇಬ್ಬರು ಸದಸ್ಯರು ಕಾಂಗ್ರೆಸ್‌ಗ ಮತ ಚಲಾಯಿಸಿದರೆ, ಮೂವರು ಸದಸ್ಯರು ಚುನಾವಣೆಯಲ್ಲಿ ಗೈರಾಗಿದ್ದಾರೆ. ಪುರಸಭೆ ಬಿಜೆಪಿ ಸದಸ್ಯರಾದ ಕಿರಣ್‌ ಗೌಡ, ಹೀನಾ ಕೌಸರ್‌ ಪುರಸಭೆ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಕುಮಾರ್‌ ಎಸ್‌ ವಿರುದ್ಧ ಮತ ಚಲಾಯಿಸಿ ವಿಪ್ ಉಲ್ಲಂಘಿಸಿದರೆ, ಪುರಸಭೆ ಬಿಜೆಪಿ ಸದಸ್ಯರಾದ ರಮೇಶ್‌, ವೀಣಾ ಮಂಜುನಾಥ್‌, ರಾಣಿ ಲಕ್ಷ್ಮೀದೇವಿ ಕೂಡ ಗೈರಾಗುವ ಮೂಲಕ ವಿಪ್‌ ಉಲ್ಲಂಘಿಸಿದ್ದಾರೆ.

ಪುರಸಭೆ ಅಧಿಕಾರದಗುದ್ದುಗೆ ಏರಿದ ಕಾಂಗ್ರೆಸ್‌ ಇಲ್ಲಿನ ಪುರಸಭೆ ಅಧಿಕಾರ ಹಿಡಿಯಬೇಕು ಎಂದು ಕೊನೆ ಕ್ಷಣದಲ್ಲಿ ಹಠಕ್ಕೆ ಬಿದ್ದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಆಡಿದ ಮಾತಿನಂತೆ ಪುರಸಭೆ ಅಧಿಕಾರದ ಗುದ್ದುಗೆ ಹಿಡಿಯಲು ಸಫಲರಾಗಿದ್ದಾರೆ. ಕಾಂಗ್ರೆಸ್‌ ಪುರಸಭೆ ಅಧಿಕಾರವನ್ನು ಹಿಡಿಯಲು ಬಹುಮತದ ಕೊರತೆಯಿತ್ತು. ನಂತರ ಆಪರೇಷನ್‌ ಹಸ್ತದ ಮೂಲಕ ಐವರು ಬಿಜೆಪಿ ಸದಸ್ಯರ ಮನವೊಲಿಸಿ ಅಧಿಕಾರ ದಕ್ಕಿಸಿಕೊಂಡಿದ್ದಾರೆ. ಬಿಜೆಪಿ ಸದಸ್ಯರಾದ ಕಿರಣ್‌ ಗೌಡ, ಹೀನಾ ಕೌಸರ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಕೆಲ ತಿಂಗಳು ನೀಡುವುದಾಗಿ ಪುರಸಭೆ ಸದಸ್ಯರಿಗೆ ಮಾತು ಕೊಟ್ಟಿದ್ದರಂತೆ, ಕೊಟ್ಟ ಮಾತಿನಂತೆ ಪುರಸಭೆ ಅಧ್ಯಕ್ಷರಾಗಿ ಕಿರಣ್‌ ಗೌಡ, ಹೀನಾ ಕೌಸರ್‌ರನ್ನು ಗೆಲ್ಲಿಸಿ ಮಾತು ಉಳಿಸಿಕೊಂಡಿದ್ದಾರೆ.