ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುಶಿಕ್ಷಕರ ಅನುಕೂಲಕ್ಕೆಂದು ತಾಲೂಕಿನ ಶಿಕ್ಷಕರೆಲ್ಲರಿಂದ ದೇಣಿಗೆ ಪಡೆದು ನಗರದ ಪ್ರಧಾನ ರಸ್ತೆಯಲ್ಲಿ ನಿರ್ಮಾಣ ಮಾಡಲಾದ ಗುರುಭವನ ಇಂದು ನಿರ್ವಹಣೆಯ ಕೊರತೆಯಿಂದ ನಲುಗುತ್ತಿದೆ.
ಸರ್ಕಾರಿ ಕಾರ್ಯಕ್ರಮಗಳಿಗೆ, ಶಿಕ್ಷಕರ ಕಾರ್ಯಕ್ರಮಗಳಿಗೆಂದು ಇಡೀ ತಾಲೂಕಿನ ಶಿಕ್ಷಕರೆಲ್ಲರೂ 500 ರು. ನಿಂದ 5 ಸಾವಿರ ರು. ವರೆಗೆ ದೇಣಿಗೆ ಕಲೆಹಾಕಿ 98×150 ಅಡಿ ಅಳತೆಯಲ್ಲಿ ನಿರ್ಮಿಸಲಾದ ಕಟ್ಟಡ ಇಂದಿಗೂ ಸುಭದ್ರವಾಗಿದೆ. ಆದರೆ ಸಭಾಂಗಣದ ಮೇಲಿನ ಶೀಟುಗಳು ಅಲ್ಲಲ್ಲಿ ಕಿಂಡಿ ಬಿದ್ದು ಮಳೆ ಬಂದರೆ ಗುರುಭವನದ ತುಂಬಾ ನೀರು ನಿಲ್ಲುತ್ತವೆ. ಒಂದೇ ಒಂದು ಕಿಟಕಿಯಲ್ಲೂ ಗ್ಲಾಸುಗಳಿಲ್ಲ. ಗ್ಲಾಸ್ ಹಾಕಿದ್ದು ಒಡೆದು ಹೋದವಾ ಇಲ್ಲವೇ ಕಿಟಕಿಗೆ ಗ್ಲಾಸ್ ಅಳವಡಿಸದೇ ಬಿಲ್ಲುಗಳಾದವಾ ಎಂಬುದಕ್ಕೆ ಯಾರಲ್ಲೂ ಉತ್ತರವಿಲ್ಲ. ಕಡಿಮೆ ಬಾಡಿಗೆಯಲ್ಲಿ ತಾಲೂಕಿನ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಸಿಗಬೇಕಿದ್ದ ಗುರುಭವನದ ವಿದ್ಯುತ್ ಕನೆಕ್ಷನ್ ರೆಗ್ಯೂಲರ್ ಆಗಿಲ್ಲ. ಟಿಪಿ ಕನೆಕ್ಷನ್ ನಲ್ಲಿಯೇ ವಿದ್ಯುತ್ ಬಳಸಲಾಗುತ್ತಿದೆ. 1996ರಲ್ಲಿ ಡಿ ಮಂಜುನಾಥ್ ರವರು ಶಾಸಕರಾಗಿದ್ದಾಗ ಗುರುಭವನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಲಾಗಿತ್ತು. ಆನಂತರ ಸತತವಾಗಿ 15 ವರ್ಷಗಳ ಕಾಲ ಕುಂಟುತ್ತಾ ಸಾಗಿದ ಕಟ್ಟಡ ನಿರ್ಮಾಣ ಜುಲೈ 12-2011ರಲ್ಲಿ ಮುಕ್ತಾಯಗೊಂಡು ಆಗಿನ ಶಾಸಕರಾಗಿದ್ದ ಡಿ.ಸುಧಾಕರ್ ರವರಿಂದ ಉದ್ಘಾಟನೆಗೊಂಡಿತ್ತು. ಆಗ ಡಿ.ಸುಧಾಕರ್ ರವರು ಕಟ್ಟಡ ನಿರ್ಮಾಣದ ಮುಂದುವರಿದ ಕಾಮಗಾರಿಗೆ 8 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿಯವರು ಎರಡೂವರೆ ಲಕ್ಷ ಹಣವನ್ನು ದೇಣಿಗೆ ನೀಡಿದ್ದರು. ಎರಡು ಅಂತಸ್ಥಿನ ಗುರುಭವನದಲ್ಲಿ ಮೇಲಿನ ಅಂತಸ್ಥಿನಲ್ಲಿ ಸುಮಾರು 500 ಜನ ಕುಳಿತುಕೊಳ್ಳುವ ಸಭಾಂಗಣವಿದ್ದು ಕೆಳ ಅಂತಸ್ಥಿನಲ್ಲಿ ಭೋಜನ ಶಾಲೆ ನಿರ್ಮಿಸಲಾಗಿದೆ. ಆದರೆ ಮದುವೆ ಮುಂತಾದ ಶುಭ ಕಾರ್ಯಗಳಿಗೆ ಬಾಡಿಗೆ ನೀಡಲು ವಿದ್ಯುತ್ ಸಮಸ್ಯೆ, ಆಸನ ಸಮಸ್ಯೆಯಂತಹ ಕೆಲವು ಸಮಸ್ಯೆಗಳಿರುವುದರಿಂದ ಯಾರೂ ಬಾಡಿಗೆ ಪಡೆಯುತ್ತಿಲ್ಲ. ಇದೀಗ ಕೆಳ ಅಂತಸ್ಥಿನ ಭೋಜನ ಶಾಲೆಯನ್ನು ಬಟ್ಟೆ ಅಂಗಡಿಗೆ ದಿನಕ್ಕೆ 4500 ರು. ನಂತೆ ವಾಣಿಜ್ಯ ಉದ್ದೇಶಕ್ಕೆ ತಾತ್ಕಾಲಿಕ ಬಾಡಿಗೆ ನೀಡಲಾಗಿದೆ. ಮೇಲಿನ ಸಭಾಂಗಣದಲ್ಲಿ ಶಿಕ್ಷಕರ ಸಭೆಗಳು, ಶೈಕ್ಷಣಿಕ ತರಬೇತಿಯಂತಹ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧ್ಯಕ್ಷರಾಗಿದ್ದು ಅವರೂ ಸೇರಿ 9 ಜನ ಸಮಿತಿಯಲ್ಲಿದ್ದಾರೆ. ಇಷ್ಟು ವರ್ಷದ ಬಾಡಿಗೆ ಮೊತ್ತ 1.30 ಕೋಟಿ ಹಣವಿದ್ದು ಗುರುಭವನದ ಮೂಲ ಸೌಕರ್ಯಗಳನ್ನು ಪುನರ್ ನವೀಕರಣ ಮಾಡಬೇಕಾಗಿದೆ. ಗುರುಭವನ ನಿರ್ಮಾಣ ಸಮಿತಿಯ ಹೆಸರಿಗೆ ಖಾತೆ ಇದ್ದು ಗುರುಭವನದ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ನೀಡಲಾಗಿದ್ದು ಇದೀಗ 18,55,189 ರು. ಗಳ ಕಂದಾಯ ಬಾಕಿ ಇದ್ದು ಅದನ್ನು ನಗರಸಭೆಗೆ ಪಾವತಿಸಿ ಎಂದು ನಗರಸಭೆಯವರು ಪಟ್ಟು ಹಿಡಿದಿದ್ದು ನಾವು ಸರ್ಕಾರಿ ಕಾರ್ಯಕ್ರಮಗಳ ಬಳಕೆಗೆ ಕಟ್ಟಿಕೊಂಡಿರುವ ಕಟ್ಟಡ ಅದು. ಹಾಗಾಗಿ ಕಂದಾಯ ಪಾವತಿಯಲ್ಲಿ ವಿನಾಯಿತಿ ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ನಾಲ್ಕು ಮನವಿ ನಗರಸಭೆಗೆ ಹೋಗಿವೆ. ಇದೀಗ ಕಂದಾಯ ಪಾವತಿ ಆಗುವ ತನಕ ವಿದ್ಯುತ್ ಸಮಸ್ಯೆ ಬಗೆಹರಿಯುತ್ತಿಲ್ಲ. ಕಂದಾಯದ ಹಗ್ಗಜಗ್ಗಾಟ ಕಳೆದ ಒಂದು ವರ್ಷದಿಂದ ನಡೆಯುತ್ತಲೇ ಇದ್ದು ಸಾರ್ವಜನಿಕರಿಗೆ, ಶಿಕ್ಷಕರಿಗೆ, ಸರ್ಕಾರಿ ಕಾರ್ಯಕ್ರಮಗಳಿಗೆ ಉಪಯೋಗ ವಾಗಬೇಕಿದ್ದ ಬೃಹತ್ ಕಟ್ಟಡವೊಂದು ನಿರುಪಯುಕ್ತವಾಗುವತ್ತ ಸಾಗುತ್ತಿದೆ. ಆದಷ್ಟು ಬೇಗ ಸರ್ಕಾರಿ ಇಲಾಖೆ ಮಟ್ಟದ ಈ ಸಮಸ್ಯೆಗಳನ್ನು ಪರಿಹರಿಸಿ ತಾಲೂಕಿನ ಜನರಿಗೆ ಉಪಯೋಗವಾಗುವಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಿ ಎಂಬುದು ತಾಲೂಕಿನ ಜನರ ಒತ್ತಾಯವಾಗಿದೆ.ನೆಲ ಮಹಡಿಗೆ ಮಾತ್ರ ಸೇವಾ ಶುಲ್ಕ ನಿಗದಿ
ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ ಪ್ರತಿಕ್ರಿಯೆ ನೀಡಿ, ಗುರುಭವನ ಕಟ್ಟಡ ಸರ್ಕಾರಿ ಕಟ್ಟಡವಾಗಿದ್ದು ಇದರಲ್ಲಿ ಎರಡು ಅಂತಸ್ತುಗಳಿವೆ. ಮೇಲಿನ ಅಂತಸ್ಥಿನಲ್ಲಿ ಇಲಾಖೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಕೆಳಗಿನ ಭೋಜನಾಲಯದ ಭಾಗವನ್ನು ಮಾತ್ರ ತಾತ್ಕಾಲಿಕವಾಗಿ ಬಾಡಿಗೆ ನೀಡಲಾಗಿದೆ. ಆದ್ದರಿಂದ ನೆಲ ಮಹಡಿಗೆ ಮಾತ್ರ ಸೇವಾ ಶುಲ್ಕ ನಿಗದಿಮಾಡಿ ಎಂದು ಕೇಳಿದ್ದೇವೆ. ಸಭಾಂಗಣದಲ್ಲಿ ಪ್ರತಿಧ್ವನಿ ಬರುತ್ತಿದ್ದುದರಿಂದ ಧ್ವನಿ ಸರಿಯಾಗಿ ಕೇಳುತ್ತಿರಲಿಲ್ಲ. ಇದೀಗ ಅದಕ್ಕೂ ಪರಿಹಾರ ಹುಡುಕಲಾಗಿದೆ.
ಫ್ಯಾನ್‌ಗಳ ರಿಪೇರಿ ಮಾಡಿಸಲಾಗಿದೆ. ಕಂದಾಯ ಪಾವತಿ ಸಮಸ್ಯೆ ಬಗೆಹರಿದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿವೆ ಎಂದರು.