ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಶಿಕ್ಷಣ ಇಲ್ಲದೇ ಯಾವುದೇ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಮಾತ್ರವಲ್ಲದೇ ಶಿಕ್ಷಕರಿಗೆ ಜಗತ್ತನ್ನೇ ಬದಲಾಯಿಸುವ ಶಕ್ತಿ ಇದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಗುರುಭವನದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 2025ನೇ ಸಾಲಿನ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಹೊಸ ಆವಿಷ್ಕಾರಗಳು ಆಗುತ್ತಿರುತ್ತವೆ. ಆವಿಷ್ಕಾರಗಳು ಮನುಷ್ಯನ ಬದುಕಿನ ರೀತಿಯನ್ನು ಬದಲಿಸುತ್ತವೆ. ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಆದರೆ ಶಿಕ್ಷಕನಿಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ. ಈ ನೆಲದಲ್ಲಿರುವ ಗುರುಪರಂಪರೆಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಕಲಿಸಿರಿ ಎಂದರು.ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತಕ್ಕೆ ಸಿಸಿ ಕ್ಯಾಮರಾ, ವೆಬ್ ಕ್ಯಾಮರ ಮುಂತಾದ ಕಾರಣಗಳನ್ನು ಹೇಳುವುದು ಸರಿಯಲ್ಲ. ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ನೀವು ವಿದ್ಯಾರ್ಥಿಗಳಿಗೆ ನೀಡಬೇಕು. ಹಾಗೆಂದು ಅಂಕಗಳ ಹಿಂದೆಯೇ ಹೋಗಬೇಕೆಂದಿಲ್ಲ. ಮಕ್ಕಳಲ್ಲಿ ಆಲೋಚನಾ ಶಕ್ತಿ ಬೆಳಸಿ. ಸಾಧನೆಗಾಗಿ, ಜೀವನ ಸಾಧನೆಗಾಗಿ ಅವರನ್ನು ಹುರಿದುಂಬಿಸಿ. ತಾಲೂಕಿನ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇರುವುದು ಬಲ್ಲೆ. ಹಂತ ಹಂತವಾಗಿ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುತ್ತೇನೆ ಎಂದು ಅವರು ತಿಳಿಸಿದರು.
ಶಿಕ್ಷಕರು ಎದುರಿಸುತ್ತಿರುವ ಟಿಇಟಿ ಕುರಿತಾದ ಸಮಸ್ಯೆ ಬಗ್ಗೆ ಮಾಹಿತಿ ಅರಿತಿದ್ದೇನೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಶಿಕ್ಷಕರ ಸಮಸ್ಯೆ ಕುರಿತು ಚರ್ಚಿಸಲಿದ್ದೇನೆ. ನ್ಯಾಯಾಲಯ ಶಿಕ್ಷಕರ ಟಿಇಟಿ ಸಮಸ್ಯೆ ಕುರಿತಾಗಿ ನೀಡಿರುವ ತೀರ್ಪು ಶಿಕ್ಷಕ ವೃಂದಕ್ಕೆ ಮಾರಕವಾಗಿದ್ದು, ಈ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ಶಿಕ್ಷಕರ ನಿಯೋಗವೊಂದನ್ನು ಕರೆದೊಯ್ಯುವ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಮಾತನಾಡಿ, ರಾಜ್ಯದಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಹೊರತುಪಡಿಸಿ ಮಿಕ್ಕೆಲ್ಲ ಕೆಲಸಗಳನ್ನೂ ಮಾಡುತ್ತಿದ್ದಾರೆ. ನಮ್ಮನ್ನು ಕಲಿಸಲು ಬಿಡಿ ಎಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ನಲಿಕಲಿ ಮುಂಬರುವ ಸಾಲಿನಲ್ಲಿ ರದ್ದಾಗುವತ್ತ ಹೋರಾಟ ನಡೆಸಿದ್ದೇವೆ. ಈ ನಡುವೆ ಟಿಇಟಿ ಸಮಸ್ಯೆ ಶಿಕ್ಷಕರನ್ನು ಕಾಡುತ್ತಿದ್ದು, ಯುವನಾಯಕ ಜಿ.ಡಿ. ಹರೀಶ್‌ಗೌಡ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ವಿಷಯದ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ದೇಶದ 70 ಲಕ್ಷ ಶಿಕ್ಷಕರ ಭವಿಷ್ಯವನ್ನು ಕಾಪಾಡಲು ಕೋರುತ್ತೇನೆ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ. ನಾಗಣ್ಣ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ, ಬದುಕು ಮತ್ತು ಸಾಧನೆಗಳ ಕುರಿತು ಮಾತನಾಡಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಚೇತನ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ. ಶಶಿಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ರಂಗಸ್ವಾಮಿ ಮಾತನಾಡಿದರು.
ಇದೇ ವೇಳೆ ಪ್ರಸ್ತುತ ಸಾಲಿನಲ್ಲಿ ನಿವೃತ್ತಗೊಂಡ 60 ಶಿಕ್ಷಕರನ್ನು ಸನ್ಮಾನಿಸಲಾಯಿತು. 2024-25ನೇ ಸಾಲಿನಲ್ಲಿ ಅತಿಹೆಚ್ಚು ಅಂಕ ಗಳಿಸಿ ತಾಲೂಕಿನ ಟಾಪರ್ ಗಳಾದ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡಸಿ ಶಾಸಕ ಹರೀಶ್‌ಗೌಡ ವೈಯಕ್ತಿಕವಾಗಿ 5 ಲಕ್ಷಕ್ಕೂ ಹೆಚ್ಚು ಮೊತ್ತದ ಪ್ರೋತ್ಸಾಹಧನ ನೀಡಿದರು.ನಗರಸಭಾಧ್ಯಕ್ಷ ಮಾಲಿಕ್ ಪಾಷಾ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಪಿ.ಹೇಮಲತ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಸಿ.ಪ್ರಸನ್ನ, ಉಪಾಧ್ಯಕ್ಷ ಎಚ್.ಬಿ.ಚನ್ನವೀರಪ್ಪ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಕಲ್ಕುಣಿಕೆ ರಾಘು ಮತ್ತು ಶಿಕ್ಷಕರು ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ್ ಗಣ್ಯರನ್ನು ಸ್ವಾಗತಿಸಿದರು.