ಸಾರಾಂಶ
ಈರಣ್ಣ ಬುಡ್ಡಾಗೋಳ
ಕನ್ನಡಪ್ರಭ ವಾರ್ತೆ ರಾಮದುರ್ಗಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗುವ ಕಟ್ಟಡಗಳು ಎರಡ್ಮೂರು ವರ್ಷಗಳಲ್ಲಿ ಮುಗಿಯದಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೆ ಇರುವಾಗ ತಾಲೂಕಿನ ಶಿಕ್ಷಕರ ವಂತಿಗೆ ಮತ್ತು ಶಿಕ್ಷಕರ ಕಲ್ಯಾಣ ನಿಧಿಯ ಹಣದಲ್ಲಿ ಕೇವಲ 8 ತಿಂಗಳಲ್ಲಿ ಸುಸಜ್ಜಿತ ಗುರು ಭವನ ಕಟ್ಟಡ ನಿರ್ಮಾಣಗೊಂಡು ಜು.12 ರಂದು ಉದ್ಘಾಟನೆಗೆ ಸಜ್ಜಾಗಿದೆ. ಈ ಮೂಲಕ ಜಿಲ್ಲೆಯಲ್ಲಿಯೇ ಅತೀ ಕಡಿಮೆ ಅವಧಿಯಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಳ್ಳುತ್ತಿರುವ 3ನೇ ಗುರು ಭವನ ಎನ್ನುವ ಹಿರಿಮೆ ಪಾತ್ರವಾಗಿದೆ.
ಶಿಕ್ಷಣ ಇಲಾಖೆ ತಾಲೂಕಿನಲ್ಲಿ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲು ಮತ್ತು ಶಿಕ್ಷಕರ ಸಾಮರ್ಥ್ಯ ವೃದ್ಧಿಗೆ ಸರ್ಕಾರದ ತರಬೇತಿಯಂತಹ ಕಾರ್ಯಕ್ರಮ ಸೂಕ್ತ ಸ್ಥಳಾವಕಾಶದ ಕೊರತೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಎದುರಿಸುವುದು ಗಮನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ ಬಳಿಗಾರ ಅವರು ಕಾಮಗಾರಿಯ ಉಸ್ತುವಾರಿ ಹಾಗೂ ನೇತೃತ್ವ ವಹಿಸಿ ಪಟ್ಟಣದ ಕೇಂದ್ರ ಸ್ಥಳದಲ್ಲಿ ₹1.20 ಕೋಟಿ ವೆಚ್ಚದಲ್ಲಿ ಗುರುಭವನ ನಿರ್ಮಾಣ ಕಾರ್ಯಕೈಗೊಳ್ಳಲು ಶಿಕ್ಷಕರನ್ನು ಮನವೊಲಿಸಿ ವಂತಿಗೆ ಸಂಗ್ರಹಿಸಿ ಯಶಸ್ವಿಗೊಳಿಸಿರುವುದು ಪ್ರಶಂಸೆಗೆ ಪಾತ್ರರಾಗಿದ್ದಾರೆ.300ಕ್ಕೂ ಅಧಿಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಸಮಾರು 1.5 ಸಾವಿರದಷ್ಟು ಶಿಕ್ಷಕರನ್ನು ಹೊಂದಿರುವ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳ ವಿವಿಧ ವೃಂದಗಳ ಶಿಕ್ಷಕರು, ನಿವೃತ್ತ ಶಿಕ್ಷಕರು ಒಟ್ಟು ₹48 ಲಕ್ಷ ದೇಣಿಗೆ ನೀಡಿದ್ದಾರೆ. ₹19 ಲಕ್ಷಗಳ ವಿವಿಧ ಪರಿಕರಗಳನ್ನು ಶಿಕ್ಷಕರು ದೇಣಿಗೆ ನೀಡಿದ್ದಾರೆ. 2400 ಅಡಿ ಅಗಲ, 3000 ಅಡಿ ಉದ್ದ ವಿಸ್ತೀರ್ಣದ ಗುರುಭವನ:ಪಟ್ಟಣದ ವಿದ್ಯಾಚೇತನ ಆವರಣದಲ್ಲಿ ಒಟ್ಟು 2400 ಅಡಿ ಅಗಲ, 3000 ಅಡಿ ಉದ್ದ ವಿಸ್ತೀರ್ಣದಲ್ಲಿ ಗುರುಭವನ ನಿರ್ಮಾಣವಾಗಿದ್ದು, ತಾಲೂಕಿನ ಎಲ್ಲ ಶಾಲಾ ಶಿಕ್ಷಕರ ಶಕ್ತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ. ಮಕ್ಕಳ ಕಾರ್ಯಕ್ರಮಗಳು, ಶಿಕ್ಷಕರ ದಿನಾಚರಣೆ, ಸಭೆ, ಸಮಾರಂಭ ಮತ್ತು ಸಾರ್ವಜನಿಕ ಉದ್ದೇಶಗಳ ಈಡೇರಿಕೆಗೆ ಮುಖ್ಯ ವೇದಿಕೆಯಾಗಿ ಗುರುಭವನ ಕಾರ್ಯ ನಿರ್ವಹಿಸಲಿದೆ.
ಶಿಕ್ಷಕರ ವಂತಿಕೆ, ಶಿಕ್ಷಕರ ಕ್ಷೇಮಾವೃದ್ಧಿ ಸಂಘದ ನಿಧಿಯಿಂದ ₹35 ಲಕ್ಷ:
ಸರ್ಕಾರದ ಯಾವುದೇ ಅನುದಾನ ಬಳಸಿಕೊಳ್ಳದೇ ಕೇವಲ ಶಿಕ್ಷಕರ ವಂತಿಕೆ, ಶಿಕ್ಷಕರ ಕ್ಷೇಮಾವೃದ್ಧಿ ಸಂಘದ ನಿಧಿಯಿಂದ ₹35 ಲಕ್ಷ ಸಹಾಯಧನದಿಂದ ಈ ನಿರ್ಮಾಣವಾಗಿರುವ ಗುರು ಭವನದಲ್ಲಿ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ. ಸಭೆ, ಸಮಾರಂಭಗಳನ್ನು ಮಾಡಲು ಶಿಕ್ಷಕರು ಅನುಭವಿಸುತ್ತಿದ್ದ ಶಿಕ್ಷಣ ಇಲಾಖೆ ಮುಕ್ತಿ ಪಡೆದಿದೆ.ಹೈಟೆಕ್ ಸೌಲಭ್ಯಗಳುಗುರು ಭವನದಲ್ಲಿ ಮುಖ್ಯ ವೇದಿಕೆ, ವಿಐಪಿ ಖುರ್ಚಿಗಳು, ಒಂದು ಸಾವಿರ ಪ್ಲಾಸ್ಟಿಕ್ ಖುರ್ಚಿಗಳು, ಟೇಬಲ್, ವಾಲ್‌ಫ್ಯಾನ್, ಸೀಲಿಂಗ್ ಫ್ಯಾನ್, ಆಕರ್ಷಕ ಅಲಂಕಾರಿಕ ದೀಪಗಳು, ಬೆಳಕಿನ ದೀಪಗಳಿವೆ. ಒಟ್ಟು ₹88 ಲಕ್ಷ ಕಟ್ಟಡ, ಉಳಿದ ₹42 ಲಕ್ಷದಲ್ಲಿ ವಿವಿಧ ಪರಿಕರಗಳನ್ನು ಅಳವಡಿಸಲಾಗಿದೆ.ಲೋಕಾರ್ಪಣೆ ಮಾಡಲಿರುವ ಶಾಸಕ ಪಟ್ಟಣವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಜು.12 ರಂದು ಲೋಕಾರ್ಪಣೆ ಮಾಡಲಿದ್ದಾರೆ. ಬಿಇಒ ಆರ್.ಟಿ.ಬಳಿಗಾರ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಉಪಾಧ್ಯಕ್ಷೆ ಸರಿತಾ ಧೂತ್, ಡಿಡಿಪಿಐ ಲೀಲಾವತಿ ಹಿರೇಮಠ, ಡಯಟ್ ಉಪನಿರ್ದೇಶಕ ಬಸವರಾಜ ನಲವತವಾಡ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಸಮಾಜಕ್ಕೆ ವಿಶೇಷವಾಗಿ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲು ಅಗತ್ಯವಿರುವ ಗುರುಭವನ ನಿರ್ಮಾಣಕ್ಕೆ ಸ್ವಇಚ್ಛೆಯಿಂದ ಶಿಕ್ಷಕರು ನೀಡಿದ ದೇಣಿಗೆ ನೀಡಿದ್ದರಿಂದ ಕಡಿಮೆ ಅವಧಿಯಲ್ಲಿ ಗುರುಭವನ ನಿರ್ಮಾಣ ಸಾಧ್ಯವಾಗಿದ್ದು, ಇದರ ಶ್ರೇಯಸ್ ತಾಲೂಕಿನ ಶಿಕ್ಷಕರಿಗೆ ಸಲ್ಲುತ್ತದೆ.
-ಆರ್.ಟಿ.ಬಳಿಗಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಾಮದುರ್ಗ.