ಬದುಕನ್ನು ಬೆಳಗಲು ಗುರು ಬೋಧಾಮೃತ ಅವಶ್ಯಕ

| Published : Oct 05 2024, 01:39 AM IST

ಸಾರಾಂಶ

ಬಾಳಿಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು

ನರೇಗಲ್ಲ: ಮನುಷ್ಯ ಜೀವನದಲ್ಲಿ ಧರ್ಮ ದೇವರು ಮತ್ತು ಗುರುವನ್ನು ಎಂದೂ ಮರೆಯಬಾರದು. ರವಿ ಕಿರಣದಿಂದ ಹೂ ಅರಳಿದರೆ ಗುರು ಕರುಣದಿಂದ ಆತ್ಮಜ್ಞಾನ ದೊರಕುತ್ತದೆ. ಜಗತ್ತು ಬೆಳಗಲು ಸೂರ್ಯ ಬೇಕು. ಬದುಕನ್ನು ಬೆಳಗಲು ಗುರು ಬೋಧಾಮೃತ ಅವಶ್ಯಕ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಎರಡನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಬಾಳಿಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಆ ಗುರಿ ಮುಟ್ಟಿಸಲು ಶ್ರೀಗುರುವಿನ ಮಾರ್ಗದರ್ಶನ ಬೇಕು. ಗುರುವಿಲ್ಲದೇ ಅರಿವು ವಿದ್ಯಾ ಬುದ್ಧಿ ಸಿದ್ಧಿಸದು. ಸನ್ನಡತೆ ವಿನಯ ವಿಧೇಯತೆ ದೊರಕದು. ತಂದೆ ಮೆಚ್ಚಿದರೆ ಮಗನ ಶ್ರೇಯಸ್ಸು. ಗುರು ಮೆಚ್ಚಿದರೆ ಶಿಷ್ಯನ ಉದ್ಧಾರ ಸಾಧ್ಯ ಗುರು ಕಾರುಣ್ಯವಿಲ್ಲದೇ ಕರ್ಮ ಕಳಚುವುದಿಲ್ಲ. ಗುರು ದೇವನ ಕರುಣೆ ಕಿರಿದಲ್ಲ. ಆ ಹೃದಯ ಹರಕೆಗೆ ಸರಿ ಸಾಟಿಯಾದುದು ಇನ್ನೊಂದಿಲ್ಲ. ಶ್ರೀ ಗುರು ಪರಶಿವನ ಸಾಕಾರ ರೂಪವೆಂದು ಶಾಸ್ತ್ರಗಳು ಸಾರಿ ಹೇಳುತ್ತವೆ. ಪ್ರಾಪಂಚಿಕ ಸಂಬಂಧಗಳು ಕಾಲಾಂತರದಲ್ಲಿ ಶಿಥಿಲಗೊಳ್ಳುತ್ತವೆ. ಆದರೆ ಗುರು ಶಿಷ್ಯರ ಸಂಬಂಧ ಹಾಗಲ್ಲ. ಚಿರಂತನ ನಿತ್ಯ ನೂತನ ಎಂಬುದನ್ನು ಯಾರೂ ಮರೆಯಬಾರದು. ಗುರು ಕಾರುಣ್ಯದ ಸಾಗರದಲ್ಲಿ ಮಿಂದು ಮಡಿವಂತನಾಗಲು ಬಾಳು ಬಂಗಾರವಾಗುತ್ತದೆ. ಹಿಂದೆ ಗುರು ಮುಂದೆ ಗುರಿಯಿದ್ದರೆ ಬಾಳಿನಲ್ಲಿ ಏನೆಲ್ಲವನ್ನು ಸಾಧಿಸಲು ಸಾಧ್ಯವಾಗುತ್ತದೆ. ನವರಾತ್ರಿಯ ಎರಡನೆಯ ದಿನದಲ್ಲಿ ಬ್ರಹ್ಮಚಾರಿಣಿ ಹೆಸರಿನಲ್ಲಿ ದೇವಿ ಪೂಜಿಸುತ್ತಾರೆ. ಮನಸ್ಸು ದೇಹ ಮತ್ತು ಇಂದ್ರಿಯಗಳ ಮೇಲೆ ಪ್ರಭುತ್ವ ಸಾಧಿಸುವುದರಲ್ಲಿ ಶಕ್ತಿ ದೊರಕುತ್ತದೆ. ಕಷ್ಟ ಕಾಲದಲ್ಲಿ ಕೂಡಾ ಮಾನಸಿಕ ಸಮತೋಲನ ಮತ್ತು ಆತ್ಮ ವಿಶ್ವಾಸ ಉಳಿಸಿಕೊಳ್ಳಲು ನೆರವಾಗುತ್ತದೆ ಎಂದರು.

ನೇತೃತ್ವ ವಹಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಮಾತನಾಡಿ, ಸುಖದ ಬದುಕಿಗೆ ಪಯತ್ನ ಬೇಕು. ಸಾಧನೆ ಪ್ರಯತ್ನವಿಲ್ಲದೇ ಉನ್ನತಿ ಸಾಧ್ಯವಿಲ್ಲ. ಬದುಕು ವಿಕಾಸಗೊಳ್ಳಲು ಶ್ರೀ ಗುರುವಿನ ಮಾರ್ಗದರ್ಶನ ಅವಶ್ಯಕವೆಂದರು.

ರಂಭಾಪುರಿ ಬೆಳಗು ಮಾಸ ಪತ್ರಿಕೆ ಬಿಡುಗಡೆ ಮಾಡಿದ ಶಾಸಕ ಮಾಜಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಮಾನವ ಧರ್ಮಕ್ಕೆ ಜಯವಾಗಲಿ-ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದರೆ ಪ್ರಸ್ತುತ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ''''ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಸಾರ್ವತ್ರಿಕ ಘೋಷಣೆ ಮಾಡಿದ್ದಾರೆ. ಈ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕೆಂಬುದು ಶ್ರೀ ರಂಭಾಪುರಿ ಜಗದ್ಗುರುಗಳ ಆಶಯವಾಗಿದೆ ಎಂದರು.

ಭಂಡಿವಾಡದ ಖ್ಯಾತ ಸಾಹಿತ್ಯ ಸಂಶೋಧಕ ಡಾ.ಅಡಿವೆಪ್ಪ ಸಿ.ವಾಲಿ “ಗುರು ಮಹಿಮೆಯ ಮಹತ್ವ” ಕುರಿತು ಉಪನ್ಯಾಸ ನೀಡುತ್ತ ಮನುಷ್ಯನಲ್ಲಿ ಅಡಗಿರುವ ಅಜ್ಞಾನ ಕಳೆಯಲು ಜಗದಲ್ಲಿ ಗುರುವಿನಿಂದ ಮಾತ್ರ ಸಾಧ್ಯ. ಎಷ್ಟು ಜನ ಮಹಾತ್ಮರು ಆಗಿ ಹೋಗಿದ್ದಾರೆಯೋ ಅವರೆಲ್ಲರ ಜೀವನ ಒಳಹೊಕ್ಕು ನೋಡಿದಾಗ ಅವರೆಲ್ಲರ ಬಾಳಿನ ಬೆಳಕು ಶ್ರೀ ಗುರು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಎಸ್‌. ಪಾಟೀಲ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ್, ಭಾಗವಹಿಸಿದ್ದರು. ಎಡೆಯೂರು, ನರೇಗಲ್ಲ, ಮಳಲಿ, ಕೆಂಭಾವಿ, ಲಕ್ಷ್ಮೀಶ್ವರ, ದೊಡ್ಡಸಗರ, ವಡ್ಡಟ್ಟಿ, ಸಂಗೊಳ್ಳಿ, ಸವಡಿ ಶ್ರೀಗಳು ವೇದಿಕೆಯಲ್ಲಿದ್ದರು.

ಅಬ್ಬಿಗೇರಿಯ ಎಪಿಎಂಸಿ ಮಾಜಿ ಸದಸ್ಯ ಅಂದಪ್ಪ ವೀರಾಪುರ ಸರ್ವರನ್ನು ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ಮಹಿಳಾ ರುದ್ರ ಬಳಗ ಗದಗ ಇವರಿಂದ ಸಂಗೀತ ಮತ್ತು ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಗಜೇಂದ್ರಗಡದ ಚಂಬಣ್ಣ ನಿಂಗಪ್ಪ ಚವಡಿ ಇವರಿಂದ ಅನ್ನ ದಾಸೋಹದ ಸೇವೆ ಜರುಗಿತು.