ಗುರು ಶಿಷ್ಯರ ಸಂಬಂಧ ಗಟ್ಟಿಯಾಗಿ ಇರಬೇಕು: ಮಾಜಿ ಸಚಿವ ಎಂ.ಸಿ.ನಾಣಯ್ಯ

| Published : Apr 02 2024, 01:03 AM IST

ಗುರು ಶಿಷ್ಯರ ಸಂಬಂಧ ಗಟ್ಟಿಯಾಗಿ ಇರಬೇಕು: ಮಾಜಿ ಸಚಿವ ಎಂ.ಸಿ.ನಾಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 25ನೇ ವರ್ಷದ ಬೆಳ್ಳಿಮಹೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮ ಸೋಮವಾರ ನಡೆಯಿತು. ಸಮಾರಂಭ ಉದ್ಘಾಟಿಸಿದ ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, ಶಾಲೆಗಳಲ್ಲಿ ಮೊದಲು ಗುರು ಶಿಷ್ಯರ ಸಂಬಂಧ ಗಟ್ಟಿಯಾಗುವಂತೆ ಮಾಡಬೇಕು ಎಂದು ಆಶಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಇಂದಿನ ತಾಂತ್ರಿಕ ಯುಗದಲ್ಲಿ ಗುರು ಶಿಷ್ಯರ ಸಂಬಂಧವನ್ನು ಮರೆಯುವಂತ ಪರಿಸ್ಥಿತಿಯಾಗಿದ್ದು, ಶಾಲೆಗಳಲ್ಲಿ ಮೊದಲು ಗುರು ಶಿಷ್ಯರ ಸಂಬಂಧ ಗಟ್ಟಿಯಾಗುವಂತೆ ಮಾಡಬೇಕು ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿದರು.ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 25ನೇ ವರ್ಷದ ಬೆಳ್ಳಿಮಹೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆರ್ಟಿಫಿಶಲ್ ಇಂಟಲಿಜೆಂಟ್ ತಂತ್ರಜ್ಞಾನ ಬಳಕೆ ಒಂದೆಡೆಯಾದರೆ ಮಕ್ಕಳಲ್ಲಿ ಮೊಬೈಲ್‌ಗಳ ಬಳಕೆ ಹೆಚ್ಚಾಗುತ್ತಿರುವುದು ವಿಷಾದನೀಯ ಎಂದರು.25ನೇ ಸಂಭ್ರಮದಲ್ಲಿರುವ ಜನರಲ್ ತಿಮ್ಮಯ್ಯ ಶಾಲೆಯು ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಹೆಸರನ್ನು ಎಲ್ಲೆಡೆ ಅಜರಾಮರ ವಾಗಿರುವಂತೆ ಮಾಡುತ್ತಿದ್ದು, ಶಾಲೆಯು ಉತ್ತುಂಗಕ್ಕೆ ಏರಲೆಂದು ಆರೈಸಿದರು. ಮಡಿಕೇರಿಯ ಮುಖ್ಯ ರಸ್ತೆಯಲ್ಲಿ 1973ರಲ್ಲಿ ಪ್ರತಿಷ್ಠಾಪಿಸಲಾದ ಜನರಲ್ ತಿಮ್ಮಯ್ಯ ಪ್ರತಿಮೆ ಕಳೆದ ನಾಲ್ಕೈದು ತಿಂಗಳ ಹಿಂದೆ ಹಾನಿಗೊಳಗಾಗಿದ್ದು, ಅದನ್ನು ಮರುಸ್ಥಾಪನೆ ಮಾಡಲಾಗಿರುವುದು ಶ್ಲಾಘನೀಯ ಎಂದರು.ಕಾಫಿ ಬೆಳೆಗಾರ ಹಾಗೂ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಮಾತನಾಡಿ, ಜನರಲ್ ತಿಮ್ಮಯ್ಯ ಅವರ ಸೇವೆಯನ್ನು ಸ್ಮರಿಸಿದರು. ಹಿಂದಿನ ಇತಿಹಾಸವನ್ನು ಕಲಿಯುವ ಬದಲು ಬದುಕಿನಲ್ಲಿ ಶಿಸ್ತು, ಸಂಯಮ ಹಾಗೂ ಭಾರತೀಯ ಸಂಸ್ಕೃತಿಯ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಶಾಲೆಗೆ ಜನರಲ್ ತಿಮ್ಮಯ್ಯ ಅವರ ಹೆಸರಿಡುವ ಮೂಲಕ ವಿದ್ಯಾರ್ಥಿಗಳನ್ನು ಶಿಸ್ತು, ದೇಶ ಸೇವೆ ಹಾಗೂ ದೇಶದ ಮೇಲೆ ಅಭಿಮಾನ ಮೂಡಿಸುವ ಸಲುವಾಗಿ ಪ್ರೇರೇಪಿಸಲಾಗುತ್ತಿದೆ. ಇದೀಗ ಈ ಶಾಲೆ 25 ವರ್ಷ ಪೂರೈಸಿದ್ದು, ವೀರ ಸೇನಾನಿಯ ಹೆಸರು ಅಜರಾಮರವಾಗುವಂತೆ ಶಾಲೆಯೊಳಗೆ ಜನರಲ್ ತಿಮ್ಮಯ್ಯನವರ ಪುತ್ಥಳಿಯನ್ನು ಪ್ರತಿಷ್ಟಾಪಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಾಗೂ ಸೇವೆ ಸಲ್ಲಿಸುತ್ತಿರುವ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಕರೆಸ್ಪಾಂಡೆಂಟ್, ನಿರ್ದೇಶಕರು, ಶಾಲಾ ಮುಖ್ಯೋಪಧ್ಯಾಯರು, ಶಿಕ್ಷಕರು ಹಾಗೂ ಸಿಬ್ಬಂದಿ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭ ಮಾಜಿ ಸಚಿವ ಎಂ.ಸಿ.ನಾಣಯ್ಯ, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ, ಶಾಲೆಯ ಬೆಳ್ಳಿ ಮಹೋತ್ಸವದ ಸ್ಮರಣ ಸಂಚಿಕೆ ಹಾಗೂ ಶಾಲಾ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಮೊದಲಿಗೆ ಅತಿಥಿಗಳಾಗಿ ಭಾಗವಹಿಸಿದ ಎಂ.ಸಿ.ನಾಣಯ್ಯ ಹಾಗೂ ಬೋಸ್ ಮಂದಣ್ಣ ಜನರಲ್ ತಿಮ್ಮಯ್ಯ ಪುತ್ತಳಿಗೆ ಪುಪ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದರು. ವಿವಿಧ ಪಠ್ಯ ಹಾಗೂ ಪಠ್ಯೇತರ ವಿಷಯಗಳ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಡಿಕೇರಿ ಕೊಡವ ಸಮಾಜದ ಕಾರ್ಯಾಧ್ಯಕ್ಷ ಕೇಕಡ ವಿಜು ದೇವಯ್ಯ, ಸಂಚಾಲಕರಾದ ಕನ್ನಂಡ ಕವಿತಾ ಬೊಳ್ಳಪ್ಪ, ನಿರ್ದೇಶಕರಾದ ಕನ್ನಂಡ ಸಂಪತ್, ನಂದಿನೆರವಂಡ ದಿನೇಶ್, ಪುತ್ತರಿರ ಕರುಣ್ ಕಾಳಯ್ಯ, ನಂದಿನೆರವಂಡ ರವಿಬಸಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಮಂಡಿರ ಸದಾಮುದ್ದಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಕಾಂಡೇರ ಲಲ್ಲುಕುಟ್ಟಪ್ಪ, ಆಡಳಿತಾಧಿಕಾರಿಗಳಾದ ಮುಕ್ಕಾಟಿರ ಪೊನಮ್ಮ, ಚೌರಿರ ಕಾವೇರಿ ಪೂವಯ್ಯ, ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ ಸುಬ್ಬಯ್ಯ ಸ್ವಾಗತಿಸಿದರು. ಶಿಕ್ಷಕಿಯರಾದ ಸವಿ, ದಿವ್ಯಾ, ಹೇಮಾವತಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.