ಸಾರಾಂಶ
ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಹಾಲವರ್ತಿ ಮಠದಲ್ಲಿ ನಡೆದ ತಿಂಗಳ ಬೆಳಕಿನ ಅರಿವಿನ ಬೆಳಕು ಹಾಗೂ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಲಿಂಗನಾಯಕನಹಳ್ಳಿ ಮಠದ ಚನ್ನವೀರ ಶಿವಯೋಗಿ ಸ್ವಾಮೀಜಿ ಮಾತನಾಡಿದರು.
ಹರಪನಹಳ್ಳಿ: ಸಾಮಾನ್ಯರಿಗೆ ಶಕ್ತಿ ತುಂಬುವ ದೈವ ಸ್ವರೂಪಿಯೇ ಗುರು, ಬುದ್ಧ, ಬಸವ, ಮಹಾವೀರರು ಮನುಕುಲದ ಉದ್ಧಾರಕ್ಕಾಗಿ ಜನಿಸಿದ್ದರು ಎಂದು ಲಿಂಗನಾಯಕನಹಳ್ಳಿ ಮಠದ ಚನ್ನವೀರ ಶಿವಯೋಗಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದಲ್ಲಿರುವ ಹಾಲವರ್ತಿ ಮಠದಲ್ಲಿ ನಡೆದ ತಿಂಗಳ ಬೆಳಕಿನ ಅರಿವಿನ ಬೆಳಕು ಹಾಗೂ ಶಿವಾನುಭವ ಸಂಪದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ನಮ್ಮಲ್ಲಿನ ಬುದ್ಧಿಶಕ್ತಿಯನ್ನು ಒಳ್ಳೆಯ ಸನ್ಮಾರ್ಗಕ್ಕಾಗಿ ಖರ್ಚು ಮಾಡಬೇಕು. ಹಾಲಿನಲ್ಲಿ ತುಪ್ಪದ ನೊರೆಯನ್ನು ತೆಗೆದಂತೆ ನಮ್ಮ ಜೀವನ ಸರಿಯಾಗಿ ಉತ್ತಮ ಮಾರ್ಗದಲ್ಲಿ ಸವೆಸಿದರೆ ಜೀವನ ಸಾರ್ಥಕವಾಗುತ್ತದೆ. ಮನುಷ್ಯನ ಜೀವಿತಾವಧಿಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದಾಗ ಅವರ ಸಾವಿನ ಆನಂತರ ಅವರ ವಿಚಾರಧಾರೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.ಹುಟ್ಟಿದಾಗ ನಮಗೆ ಹೆಸರು ಇರುವುದಿಲ್ಲ, ನಾವು ನಮ್ಮ ವಿಚಾರಧಾರೆಗಳ ಮೂಲಕ ಸಮಾಜದಲ್ಲಿ ಹೆಸರು ಮಾಡಬೇಕು. ಸಾವು ಇರುವುದು ದೇಹಕ್ಕೆ, ಹೊರತು ಆತ್ಮಕ್ಕಲ್ಲ ಎಂದರು.
ಹಾವನೂರಿನ ದಳವಾಯಿ ಮಠಶಿವಕುಮಾರ ಸ್ವಾಮೀಜಿ ಮಾತನಾಡಿ, ಜೀವನವೆಂಬ ಸಂಸಾರದಲ್ಲಿ ಹೊಂದಾಣಿಕೆ ಅತಿ ಮುಖ್ಯವಾಗಿದೆ. ಬದುಕು ಕ್ರಿಕೆಟ್ ರಣರಂಗವಿದ್ದಂತೆ, ನಮ್ಮ ಸುತ್ತಲಿರುವವರು ನಮ್ಮವರಂತೆ ಕಂಡರೂ ನಮ್ಮ ಸೋಲಿಗಾಗಿ ಕಾದು ಕುಳಿತಿರುತ್ತಾರೆ ಎಂದರು.ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ, ಶಿಕ್ಷಕ ಎನ್.ಜಿ. ಮನೋಹರ್ ಮಾತನಾಡಿದರು.
ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಜಯಶ್ರೀ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಕಾರ್ಯದರ್ಶಿ ಬಣಕಾರ ರಾಜಶೇಖರ್, ಗಣೇಶ್ ಹವಾಲ್ದಾರ್, ವಿ.ಬಿ. ಮಲ್ಲೇಶ, ನಿವೃತ್ತ ಮುಖ್ಯ ಶಿಕ್ಷಕ ವಿಜಯ್ ದಿವಾಕರ್, ಕೆ.ಎಂ. ಗುರುಸಿದ್ದಯ್ಯ, ಶಶಿಧರ ಪೂಜಾರ, ಚಂದ್ರಶೇಖರ ಪೂಜಾರ, ಕರಿಬಸವರಾಜ, ದಾನ ಚಿಂತಾಮಣಿ ಲಲಿತಮ್ಮ, ಮಂಜುನಾಥ ಉಳ್ಳಾಗಡ್ಡಿ, ಕೆ.ಎಂ. ಕೊಟ್ರಯ್ಯ, ಕೆ. ಬಸವರಾಜ, ಎಸ್.ಎಂ. ಮಲ್ಲಯ್ಯ, ವಿಕಾಸ್ ಪೂಜಾರ ಮತ್ತಿತರರಿದ್ದರು.