ಗುರು ಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ

ಯಲಬುರ್ಗಾ: ಪ್ರತಿಯೊಬ್ಬರ ಬಾಳಿನಲ್ಲಿ ಅಜ್ಞಾನದ ಕತ್ತಲೆ ಕಳೆದು ದೈವಿಕ ಜ್ಞಾನದ ಬೆಳಕು ಮೂಡಿಸುವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವೇ ಗುರು ಪೂರ್ಣಿಮೆ ಎಂದು ಶ್ರೀಧರ ಮುರಡಿ ಹಿರೇಮಠದ ಶ್ರೀಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಬುಧವಾರ ನಡೆದ ಗುರುಪೂರ್ಣಿಮೆ ಅಂಗವಾಗಿ ಇನ್ನರ್ ವಿಲ್ ಕ್ಲಬ್ ಹಾಗೂ ಬಸವಲಿಂಗೇಶ್ವರ ಅಕ್ಕನ ಬಳಗದಿಂದ ಗುರುಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗುರುಪೂರ್ಣಿಮೆಯನ್ನು ಆಷಾಢ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದಲ್ಲಿ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರು ಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ. ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ ಎಂದರು.

ನಂತರ ಅಕ್ಕನ ಬಳಗದ ಹಾಗೂ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ಸವಿತಾ ಮುರಡಿಮಠ ಮಾತನಾಡಿ, ಜಗತ್ತಿನಲ್ಲಿ ಗುರುವಿನ ಶಕ್ತಿ ದೊಡ್ದದು. ಗುರುವಿಲ್ಲದೆ ಯಾವುದೇ ವಿದ್ಯೆ, ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಸುನೀತಾ ಎಂ.ಪತಂಗರಾಯ್, ಜ್ಯೋತಿ ಪಲ್ಲೆದ, ಶ್ರೀದೇವಿ ಭೀಮನಗೌಡ್ರು, ಲತಾ ಕಲ್ಯಾಣಿ, ಕವಿತಾ ಕಳಕನಗೌಡ್ರು, ಶಾರದಾ ಕೊಣ್ಣೂರ ಹಾಗೂ ಸದಸ್ಯರು ಇದ್ದರು.