ಸಾರಾಂಶ
ಗುರು ನಿತ್ಯಾನಂದ ಸೊಸೈಟಿಯ ಸರ್ವ ಸದಸ್ಯರ ಮಹಾಸಭೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭ ಸೊಸೈಟಿಯ ಮಾಜಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಗುರು ನಿತ್ಯಾನಂದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2023-24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಿತು.ಸೊಸೈಟಿಯ ಮಾಜಿ ಅಧ್ಯಕ್ಷ, ನಿರ್ದೇಶಕರಾಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸೊಸೈಟಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಗುರು ನಿತ್ಯಾನಂದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾದ ಶ್ರೀ ಕೃಷ್ಣ ಎಂ ಆಳ್ವ, ನಿರ್ದೇಶಕರಾದ ಮೋಹನ್ ಶೆಟ್ಟಿ ಮೂಡನಿಡಂಬೂರು, ಜಯರಾಮ ಶೆಟ್ಟಿ ಕೊಡಂಕೂರು, ಶ್ವೇತಾ ಜಯಕರ ಶೆಟ್ಟಿ, ಮನೋಹರ ಶೆಟ್ಟಿ ತೋನ್ಸೆ, ವಿ. ಚಂದ್ರಹಾಸ ಶೆಟ್ಟಿ, ಸುಲೋಚನ ಶೆಟ್ಟಿ, ಸಂತೋಷ್ ಆರ್ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಹಾಗೂ ಸೊಸೈಟಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಜಾನಪದ ಕ್ಷೇತ್ರ, ನಾಟಕ ಕ್ಷೇತ್ರ, ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವುದು ಮಾತ್ರವಲ್ಲದೇ, ವಿದ್ಯಾನಿಧಿ, ವಿಕಲಚೇತನ ಕಲ್ಯಾಣ ನಿಧಿ, ಆರೋಗ್ಯ ನಿಧಿ, ಬಡ ವಿದ್ಯಾರ್ಥಿಗಳ ಮನೆಗೆ ಉಚಿತ ಸೋಲಾರ್ ದೀಪ ಹೀಗೆ ಹಲವು ಬಗೆಗಳಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಕಳೆದ 18 ವರ್ಷಗಳಿಂದ ಚಿಟ್ಟಾಣಿ, ಕೆ. ಗೋವಿಂದ ಭಟ್ ಗೌರವಾರ್ಥ ಸಪ್ತಾಹ, 10 ವರ್ಷಗಳಿಂದ ಸುಬ್ರಹ್ಮಣ್ಯ ಧಾರೇಶ್ವರ ಅವರ ಅಷ್ಟಾಹ, 6 ವರ್ಷಗಳಿಂದ ‘ಯಕ್ಷಪಂಚಮಿ’ಯಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.
ತಮ್ಮ ಪೂಜ್ಯ ಮಾತಾಪಿತರ ಸ್ಮೃತಿಯಲ್ಲಿ ‘ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ’ಯನ್ನು 18 ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ಜಾನಪದ ವಿದ್ವಾಂಸರನ್ನು ಗುರುತಿಸಿ ‘ಸಾಹಿತ್ಯ ಸಾಂಸ್ಕೃತಿಕ ಜಾನಪದ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದ್ದಾರೆ. ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿಯನ್ನು ಸ್ಥಾಪಿಸಿ ಅದನ್ನು ಕಳೆದ 8 ವರ್ಷಗಳಿಂದ ಗಣ್ಯಮಾನ್ಯರಿಗೆ ನೀಡಿದ್ದಾರೆ.