ನಗರದ ವಿವಿಧೆಡೆ ಸಂಭ್ರಮದ ಗುರು ಪೂರ್ಣಿಮೆ

| Published : Jul 22 2024, 01:25 AM IST

ಸಾರಾಂಶ

ಗುರು ಪೂರ್ಣಿಮೆ ಪ್ರಯುಕ್ತ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಅಲಂಕಾರ, ಪೂಜೆ, ಧಾರ್ಮಿಕ ಕಾರ್ಯಗಳು ನಡೆದವು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಜ್ಞಾನದ ಅಂಧಕಾರ ದೂರ ಮಾಡಿ, ಸರಿ ದಾರಿ ತೋರಿಸುವ ಗುರುವಿಗೆ ಗೌರವ ಸಲ್ಲಿಸುವ ‘ಗುರುಪೂರ್ಣಿಮೆ’ ಯನ್ನು ನಗರದ ಹಲವೆಡೆ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ನಗರದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಅಲಂಕಾರ, ಪೂಜೆ, ಧಾರ್ಮಿಕ ಕಾರ್ಯಗಳು ನಡೆದವು, ಹಲವು ಕಡೆ ಸ್ವಾಮೀಜಿಗಳು ಸೇರಿದಂತೆ ಅಕ್ಷರ ಕಲಿಸಿದ ಶಿಕ್ಷಕ-ಶಿಕ್ಷಕಿಯರನ್ನು ಗೌರವಿಸಲಾಯಿತು. ಬೆಳಗ್ಗೆಯಿಂದಲೇ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜಿಸಿದರು. ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾಜಾಜಿನಗರದ ಗಣೇಶ, ಕನ್ನಿಕಾ ಪರಮೇಶ್ವರಿ, ಶಿರಡಿ ಸಾಯಿ ಬಾಬಾ ದೇವಾಲಯದಲ್ಲಿ ಶಿರಡಿ ಸಾಯಿ ಬಾಬಾಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಜಿ.ಪಿ.ನಗರ, ಕಾಳಿದಾಸ ಲೇಔಟ್‌ನಲ್ಲಿ ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ಅಲಂಕಾರ, ವಿಶೇಷ ಪೂಜೆ ಆಯೋಜಿಸಲಾಗಿತ್ತು.

ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿಗೆ ಭಕ್ತಿ

ರಾಜಾಜಿನಗರ ಪ್ರವೇಶ ದ್ವಾರದ ಬಳಿ ಇರುವ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಪುತ್ಥಳಿಗೆ ಗುರುವಣ್ಣ ದೇವರ ಮಠದ ನಂಜುಂಡ ಸ್ವಾಮೀಜಿ, ಬಿಜೆಪಿ ಮುಖಂಡ ಡಾ.ಅರುಣ್‌ ಸೋಮಣ್ಣ, ಕನ್ನಡಪರ ಹೋರಾಟಗಾರ ಪಾಲನೇತ್ರ ಮತ್ತಿತರರು ಭಕ್ತಿ ಸಮರ್ಪಿಸಿದರು. ಭಾರತೀಯ ವಿದ್ಯಾ ಭವನದಲ್ಲಿ ಜ್ಯೋತಿ ಚಾರಿಟಬಲ್‌ ಟ್ರಸ್ಟ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ವಾನ್‌ ಅನಂತ್‌ ನಾರಾಯಣ ಗಣಪತಿ ಅವರನ್ನು ಗೌರವಿಸಲಾಯಿತು.

ಸ್ವಾಮೀಜಿಗೆ ಗುರುವಂದನೆ

ಕುರುಬರಹಳ್ಳಿಯ ಉಮಾಮಹೇಶ್ವರ ಶಂಭುಲಿಂಗೇಶ್ವರ, ಶಿವ, ಸಾಯಿಬಾಬಾ, ಮಾರುತಿ ಮಂದಿರದಲ್ಲಿ ಯಡಿಯೂರು ಮಠದ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗುರು ವಂದನೆ ಸಲ್ಲಿಸಲಾಯಿತು. ಚಾಮರಾಜಪೇಟೆಯ ಶೃಂಗೇರಿ ಶಾರದಾ ಮಠದಲ್ಲಿ ಬಾಲ ಭಾರತಿ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಪೀಣ್ಯ ದಾಸಹಳ್ಳಿಯ ಸ್ಟ್ಯಾಂಡರ್ಡ್‌ ಪಬ್ಲಿಕ್‌ ಸ್ಕೂಲ್‌, ಭೂಮಿಕಾ ಸೇವಾ ಫೌಂಡೇಷನ್‌ನಲ್ಲಿಯೂ ಗುರು ಪೂರ್ಣಿಮೆ ಆಚರಿಸಲಾಯಿತು.ವಿಜಯನಗರದ ಸರ್ವಜ್ಞ ಹೈಸ್ಕೂಲ್‌ನಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹಿಂದೂ ಜನ ಜಾಗೃತಿ ಸಮಿತಿಯಿಂದ ಗುರು ಪೂರ್ಣಿಮೆ

ಹಿಂದೂ ಜನ ಜಾಗೃತಿ ಸಮಿತಿಯಿಂದ ವಿವಿಧ ಸ್ಥಳಗಳಲ್ಲಿ ಗುರುಪೂರ್ಣಿ ಆಚರಿಸಲಾಯಿತು. ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕ ಸಂತೋಷ ಕೆಂಚಾಂಬ, ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎನ್ ಮಹೇಶ್, ಆನೇಕಲ್‌ನ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷ ಸೋಮೇಶ್ ರೆಡ್ಡಿ, ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಸ್ಥಾನದ ಟ್ರಸ್ಟಿ ಶಶಾಂಕ ಆಚಾರ್ ಮತ್ತಿತರರು ಪಾಲ್ಗೊಂಡಿದ್ದರು.

ಬಸವನಗುಡಿಯ ಭವಾನಿ ಕಲ್ಯಾಣ ಮಂಟಪ, ಯಲಹಂಕದ ಆರ್.ವಿ.ಕಲ್ಯಾಣ ಮಂಟಪ ಹಾಗೂ ಚಂದಾಪುರದ ಯಾರೆಂಡಳ್ಳಿಯ ಸಾಯಿಬಾಬಾ ಯೋಗ ಕೇಂದ್ರದಲ್ಲೂ ಗುರುಪೂರ್ಣಿಮೆ ಆಚರಿಸಲಾಯಿತು.