ಮಾದಿಗ ಸಮಾಜಕ್ಕೆ ಗುರುಗಳ ಮಾರ್ಗದರ್ಶನ, ಶಿಕ್ಷಣ ಮುಖ್ಯ

| Published : Nov 24 2025, 01:45 AM IST

ಮಾದಿಗ ಸಮಾಜಕ್ಕೆ ಗುರುಗಳ ಮಾರ್ಗದರ್ಶನ, ಶಿಕ್ಷಣ ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಸಮಾಜ ಗುರಿಮುಟ್ಟಬೇಕಾದರೆ ಗುರುಗಳ ಮಾರ್ಗದರ್ಶನ ಮತ್ತು ಶಿಕ್ಷಣ ಮುಖ್ಯವಾಗಿದೆ. ಇವೆರಡನ್ನು ಹಿಂಬಾಲಿಸಿದಾಗ ಮಾದಿಗ ಸಮಾಜ ಮುಖ್ಯವಾಹಿನಿಗೆ ಬರಲಿದೆ ಎಂದು ಚಿತ್ರದುರ್ಗದ ಶ್ರೀ ಶಿವಶರಣ ಡಾ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು ನುಡಿದಿದ್ದಾರೆ.

- ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ ಉದ್ಘಾಟನೆಯಲ್ಲಿ ಡಾ.ಬಸವಮೂರ್ತಿ ಶ್ರೀ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಯಾವುದೇ ಸಮಾಜ ಗುರಿಮುಟ್ಟಬೇಕಾದರೆ ಗುರುಗಳ ಮಾರ್ಗದರ್ಶನ ಮತ್ತು ಶಿಕ್ಷಣ ಮುಖ್ಯವಾಗಿದೆ. ಇವೆರಡನ್ನು ಹಿಂಬಾಲಿಸಿದಾಗ ಮಾದಿಗ ಸಮಾಜ ಮುಖ್ಯವಾಹಿನಿಗೆ ಬರಲಿದೆ ಎಂದು ಚಿತ್ರದುರ್ಗದ ಶ್ರೀ ಶಿವಶರಣ ಡಾ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು ನುಡಿದರು.

ಪಟ್ಟಣದ ದುರ್ಗಾಂಬಿಕಾ ನಗರದ ಡಾ.ಬಾಬು ಜಗಜೀವನ್ ರಾಮ್ ಭವನದಲ್ಲಿ ಶ್ರೀ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿಯ ನಗರ ಶಾಖೆಯ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಾದಿಗ ಸಮಾಜದ ಪರಿವರ್ತನೆ, ಸಮಾಜದ ಮಕ್ಕಳಿಗೆ ಶಿಕ್ಷಣ, ರಾಜಕೀಯ ಸ್ಥಾನಮಾನ ಮತ್ತು ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವುದು ಈ ಸಮಿತಿ ಮೂಲ ಉದ್ದೇಶವಾಗಿದೆ ಎಂದರು.

ಈ ಸಮಿತಿ ರಾಜ್ಯದಲ್ಲಿಯೇ ಪ್ರಥಮವಾಗಿ ಚನ್ನಗಿರಿ ತಾಲೂಕಿನಲ್ಲಿ ಪ್ರಾರಂಭ ಆಗುತ್ತಿರುವುದು ಈ ಭಾಗದ ಸಮಾಜ ಬಾಂಧವರ ಸೌಭಾಗ್ಯ. ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿಯೇ ಸಾಯುವುದು ನಮ್ಮ ತಪ್ಪಾಗುತ್ತದೆ. ನೀವು ಮಾಡುವ ಕಾಯಕದಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯನ್ನು ಹೊಂದಿರಬೇಕು. ಆಗ ಶ್ರೇಯಸ್ಸು, ಯಶಸ್ಸು ಗಳಿಸುವಿರಿ ಎಂದರು.

ತಾಲೂಕು ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ರಾಜ್ಯದಲ್ಲಿ ಮಾದಿಗ ಸಮಾಜ ದೊಡ್ಡ ಸಂಖ್ಯೆಯಲ್ಲಿ ದೆ. ನೀವುಗಳು ಜಾಗೃತರಾಗಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಿನ ಅಡಿಯಲ್ಲಿ ಬದುಕುತ್ತಿರುವ ನಾವುಗಳು ಚುನಾವಣೆ ಸಂದರ್ಭದಲ್ಲಿ ಯಾವ ಪಕ್ಷದಲ್ಲಿಯೇ ಗುರುತಿಸಿಕೊಂಡಿರಲಿ, ಸಮಾಜದ ವಿಚಾರ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿದ್ದಾಗ ಮಾತ್ರ ಸಮಾಜ ಮುಂದುವರಿಯಲು ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿ ತಾಲೂಕು ಅಧ್ಯಕ್ಷ ಜಿ.ನಿಂಗಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಿತಿಯ ಪ್ರಮುಖರಾದ ರಾಕೇಶ್, ಬಿ.ಎಂ.ಶಿವಪ್ಪ, ಸಿ.ಆರ್.ನಾಗೇಂದ್ರಪ್ಪ, ಲಕ್ಷ್ಮಿದೇವಮ್ಮ, ಎನ್.ಮಂಜಪ್ಪ, ಪರಶುರಾಮ್, ಶಿವಲಿಂಗಪ್ಪ ಸೇರಿದಂತೆ ಮೊದಲಾದವರು ಹಾಜರಿದ್ದರು.

- - -

(ಬಾಕ್ಸ್‌) * ಸಂವಿಧಾನದಿಂದಾಗಿ ಸಾಮಾಜಿಕ ನ್ಯಾಯ: ವಿರೂಪಾಕ್ಷಪ್ಪ ಸಮಾರಂಭದ ಉದ್ಘಾಟನೆಯನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನೆರವೇರಿಸಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯ ತರದಿದ್ದರೆ ತಳಸಮುದಾಯಗಳಿಗೆ ಸಾಮಾಜಿಕ ನ್ಯಾಯ ಇಂದಿಗೂ ಸಿಗುತ್ತಿರಲಿಲ್ಲ. ಒಂದು ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆದರೆ ಸಮಾಜದ ಮುಖ್ಯವಾಹಿನಿಗೆ ಬರುತ್ತದೆ. ಆ ನಿಟ್ಟಿನಲ್ಲಿ ನನ್ನ ಅಧಿಕಾರದ ಎರಡು ಅವಧಿಗಳಲ್ಲಿ ಮಾದಿಗ ಸಮಾಜಕ್ಕೆ ರಾಜಕೀಯ ಶಕ್ತಿಯನ್ನು ತುಂಬುವ ಕೆಲಸ ಮಾಡಿದ್ದೇನೆ ಎಂದರು. ರಾಜ್ಯದಲ್ಲಿ ಮಾದಿಗ ಸಮಾಜವನ್ನು ಜಾಗೃತಗೊಳಿಸುವಲ್ಲಿ ಮಾದಾರ ಚನ್ನಯ್ಯ ಶ್ರೀಗಳು ರಾಜ್ಯದ ಮೂಲೆ ಮೂಲೆಗಳನ್ನು ಸುತ್ತುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನೀವುಗಳು ಸಾಗಬೇಕು. ನನ್ನ ಅಧಿಕಾರ ಅವಧಿಯಲ್ಲಿ ತಾಲೂಕಿನ ಎಲ್ಲ ಪರಿಶಿಷ್ಟ ಜಾತಿಗಳ ಕೇರಿಗಳಿಗೆ ಸಿ.ಸಿ. ರಸ್ತೆ, ಕುಡಿಯುವ ನೀರಿನ ಸಂಪರ್ಕ, ಚರಂಡಿಗಳನ್ನು ಮಾಡಿಸಿ ಸಮುದಾಯ ಭವನಗಳನ್ನು ನಿರ್ಮಿಸಿಕೊಟ್ಟಿದ್ದೇನೆ ಎಂದರು.

- - -

-23ಕೆಸಿಎನ್ಜಿ1: ಸಮಾರಂಭದಲ್ಲಿ ಶಿವಶರಣ ಡಾ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿದರು.

-23ಕೆಸಿಎನ್ಜಿ2: ಸಮಾರಂಭವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು. ಮಾದಾರ ಚನ್ನಯ್ಯ ಶ್ರೀ, ಇನ್ನಿತರ ಗಣ್ಯರು ಇದ್ದರು.