ಗುರುಪೂರ್ಣಿಮೆ ಹಿನ್ನೆಲೆ ನಗರದ ರಾಮಕೃಷ್ಣಾಶ್ರಮ ಹಾಗೂ ಗುರುಕುಲಕ್ಕೆ ಭೇಟಿ ನೀಡಿ, ಗುರುಗಳ ಆಶೀರ್ವಾದ ಪಡೆದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಗುರುವಿನ ಜ್ಞಾನ, ಸೇವೆ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳು ನಮ್ಮ ಸಮಾಜದ ಶಾಶ್ವತ ಸಂಪತ್ತು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಕಾರವಾರ
ಗುರುಪೂರ್ಣಿಮೆ ಹಿನ್ನೆಲೆ ನಗರದ ರಾಮಕೃಷ್ಣಾಶ್ರಮ ಹಾಗೂ ಗುರುಕುಲಕ್ಕೆ ಭೇಟಿ ನೀಡಿ, ಗುರುಗಳ ಆಶೀರ್ವಾದ ಪಡೆದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಗುರುವಿನ ಜ್ಞಾನ, ಸೇವೆ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳು ನಮ್ಮ ಸಮಾಜದ ಶಾಶ್ವತ ಸಂಪತ್ತು ಎಂದು ಹೇಳಿದರು.ನಗರದ ರಾಮಕೃಷ್ಣಾಶ್ರಮಕ್ಕೆ ಭೇಟಿ ನೀಡಿದ ರೂಪಾಲಿ ಎಸ್.ನಾಯ್ಕ, ಗುರುಗಳಾದ ಶ್ರೀ ಭಾವೇಶಾನಂದ ಸ್ವಾಮೀಜಿಗಳ ದರ್ಶನ, ಆಶೀರ್ವಾದ ಪಡೆದು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಗುರುಗಳನ್ನು ಗೌರವಪೂರ್ವಕವಾಗಿ ಗೌರವಿಸಿ, ಅವರ ಸಮಾಜಮುಖಿ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ರೂಪಾಲಿ ಎಸ್.ನಾಯ್ಕ, ಆಧ್ಯಾತ್ಮಿಕ ಸಂಸ್ಥೆಗಳು ಸಮಾಜದಲ್ಲಿ ಸಂಸ್ಕಾರ, ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳೊಂದಿಗೆ ನಿರಂತರವಾಗಿ ಕೈಜೋಡಿಸಿ, ಸಮಾಜದ ಒಳಿತಿಗಾಗಿ ಕೆಲಸ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗುರುವಿನ ಕೃಪೆ ಎಲ್ಲರ ಮೇಲಿರಲಿ. ಸಮಾಜದಲ್ಲಿ ಶಾಂತಿ ಸೌಹಾರ್ದತೆ, ಸಮೃದ್ಧಿ ನೆಲೆಸಲಿ ಎಂದು ಹೇಳಿದರು.ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನ್ನ ಸಾರ್ವಜನಿಕ ಸೇವೆಯ ದೊಡ್ಡ ಶಕ್ತಿ. ಅಧಿಕಾರ ಇರಲಿ ಅಥವಾ ಇರದಿರಲಿ, ಜನರೊಂದಿಗೆ ಬೆರೆತು ಅವರ ಸಂತೋಷ-ಸಂಕಷ್ಟಗಳಲ್ಲಿ ಪಾಲುದಾರಳಾಗಿರುವುದು ನನ್ನ ಬದ್ಧತೆ ಎಂದು ನುಡಿದರು.
ಆಶ್ರಮದಲ್ಲಿ ಸೇರಿದ್ದ ಕಾರ್ಯಕರ್ತರು, ಭಕ್ತರು ಹಾಗೂ ಸಾರ್ವಜನಿಕರೊಂದಿಗೆ ಆತ್ಮೀಯತೆಯಿಂದ ಗುರುಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್ಲರೊಂದಿಗೆ ಹಣ್ಣು-ಹಂಪಲು ಹಾಗೂ ಪ್ರಸಾದವನ್ನು ಸ್ವೀಕರಿಸಿ, ಪರಸ್ಪರ ಶುಭಾಶಯಗಳನ್ನು ಸಂತಸದಿಂದ ವಿನಿಮಯ ಮಾಡಿಕೊಂಡರು.ಗುರುಕುಲಕ್ಕೆ ಭೇಟಿ:
ಕಾರವಾರದ ಪುಣ್ಯಕ್ಷೇತ್ರ ಹಿರೇಶಿಟ್ಟಾದಲ್ಲಿರುವ ಗುರುಕುಲಕ್ಕೆ ಭೇಟಿ ನೀಡಿದ ರೂಪಾಲಿ ಎಸ್.ನಾಯ್ಕ, ಶ್ರದ್ಧೆ, ಭಕ್ತಿಯಿಂದ ಹೋಮ ಹವನಗಳಲ್ಲಿ ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದರು. ಫಲ ಪುಷ್ಪಗಳನ್ನು ಸಮರ್ಪಿಸಿ ಗುರುಗಳನ್ನು ಗೌರವಿಸಿ, ಆಶೀರ್ವಾದ ಪಡೆದು, ಗುರುಗಳ ಕೃಪೆ ಎಲ್ಲರ ಮೇಲಿರಲಿ ಎಂದು ಆಶಿಸಿದರು.