ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಂತ್ರಾಲಯದಲ್ಲಿ ನೆಲೆ ನಿಂತು ಶತಮಾನಗಳಿಂದ ತಮ್ಮನ್ನು ಭಜಿಸುವ ಭಕ್ತರನ್ನು ಹರಸುತ್ತಿರುವ ಗುರು ಸಾರ್ವಭೌಮರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ದಿನವಾದ ಬುಧವಾರ ಕಲಬುರಗಿಯಲ್ಲಿರುವ ವಿವಿಧ ರಾಯರ ಮಠಗಳಲ್ಲಿ ವೈಭವದಿಂದ ಕಾರ್ಯಕ್ರಮಗಳು ನಡೆದವು.ಇಲ್ಲಿನ ಬ್ರಹ್ಮಪೂರದಲ್ಲಿರುವ ರುಕ್ಮಿಣಿ ಪಾಂಡುರಂಗ ಮಂದಿರ ಉತ್ತರಾದಿ ಮಠದಲ್ಲಿ ಆರಾಧನೆಯ ಅಂಗವಾಗಿ ಗಾಮ ಪ್ರದಕ್ಷಿಣೆ ಹಾಗೂ ಹೋಮ ಹವನಗಳು ನಡೆದವು. ನಂತರ ಉತ್ಸವ ಮೂರುತಿಯನ್ನು ರಥದಲ್ಲಿ ಕುಳ್ಳಿರಿಸಿ ಭಜನಾದಿಗಳಿಂದ ಭಕ್ತರು ಗುರುಗಳನ್ನು ಭಜಿಸಿದರು. ಉತ್ತರಾದಿ ಮಠಾಧಿಕಾರಿ ರಾಮಾಚಾರ್ ಘಂಟಿ, ಪಂ. ವಿನೋದಾಚಾರ್ಯ ಗಲಗಲಿ, ಪಂ. ಆಕಾಶಾಚಾರ್ಯ ಸೇರಿದಂತೆ ಅನೇಕ ಪಂಡಿತರು ಆರಾಧನೆಯಲ್ಲಿ ಪಾಲ್ಗೊಂಡು ಗುರುಗಳ ಮಹಿಮೆ ಸಾರಿದರು.
ಜೇವರ್ಗಿ ಕಾಲೋನಿ ರಾಯರ ಮಠದಲ್ಲಿಂದು ನಡೆದ ರಥಾಂಗ ಹೋಮ ಹಾಗೂ ರಥೋತ್ಸವದಲ್ಲಿ ಸಾವಿರಾರು ಭಕ್ತರು ಸೇರಿದ್ದರು. ಗಾಯತ್ರಿ ಯುಕ ಸಂಘದಿಂದ 2 ಗಂಟೆಗೂ ಹೆಚ್ಚುಕಾಲ ಭಜನೆ ನಡೆಯಿತು. ಸುಮಂಗಲೀಯರು ಒಂದೇ ಬಣ್ಣದ ಸೀರೆ ತೊಟ್ಟು ರಥೋತ್ಸವದ ಮುಂದೆ ನೀಡಿದ ದಾಸರ ಪದಗಳ ಕೋಲಾಟ ಪ್ರದರ್ಶನ ಗಮನ ಸೆಳೆಯಿತು.ಜಗತ್ ಬಡಾವಣೆಯ ಗೋಮುಖ ರಾಯರ ಮಠದಲ್ಲಿಯೂ ಭಕ್ತರೆಲ್ಲರೂ ಸೇರಿ ನಡೆಸಿದ ರಥೋತ್ಸದಲ್ಲಿ ಸಾವಿರಾರು ಜನ ಸೇರಿದ್ದರು. ಗುರುಗಳನ್ನು ರಥದಲ್ಲಿ, ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಆರಾಧಿಸಿದರು. ಲೋಕ ಕಲ್ಯಾಣ ಬಯಸಿ ಗುರುಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಾಣೇಶ ಗಂಗಾವತಿ, ನರಸಿಂಹ್ ಜೋಡಿಯಿಂದ ನಡೆದ ಹಾಸ್ಯ ಕಾರ್ಯಕ್ರಮವೂ ಇಲ್ಲಿ ಭಕ್ತರನ್ನು ನಗೆಗಡಲಲ್ಲಿ ತೇಲಿಸಿತು.
ಬಿದ್ದಾಪುರದಲ್ಲಿರುವ ನಂಜನಗೂಡು ಗುರುರಾಯರ ಮಠದಲ್ಲಿಯೂ ಆರಾಧನೆ ವೈಭವದಿಂದ ನಡೆಯಿತು. ಪೈನಾಪಲ್, ಬಾಳೆ ಸೇರಿದಂತೆ ತರಹೇವಾರಿ ಹಣ್ಣುಗಳನ್ನು ಬಳಸಿ ಮಾಡಿದ ಅಲಂಕಾರ ಮಧ್ಯಾರಾಧನೆಯ ವಿಶೇಷವಾಗಿ ಕಂಗೊಳಿಸಿತು. ಆಕರ್ಷಕ ಅಲಂಕಾರವನ್ನ ಭಕ್ತರು ಕಣ್ಣು ತುಂಬಿಕೊಂಡರು.ಮಠದ ವ್ಯವಸ್ಥಾಪಕರಾದ ಕನಕಗಿರಿ ಆಚಾರ್ಯರ ಉಸ್ತುವಾರಿಯಲ್ಲಿ ನಡೆದ ಗುರುಗಳ ಆರಾಧನೆಯಲ್ಲಿ ಬಂದ ಭಕ್ತರೆಲ್ಲರಿಗೂ ಸಾಮೂಹಿಕವಾಗಿ ಅನ್ನ ಸಂತರ್ಪಣೆ ಮಾಡಲಾಯ್ತು. ಎಲ್ಲಾ ರಾಯರ ಮಠಗಳಲ್ಲಿ ಸಂಜೆ ಹೊತ್ತು ದಾಸವಾಣಿಯಂತಹ ಸಾಂಸ್ಕತಿಕ ಕಾರ್ಯಕ್ರಮಗಳು, ಭರತ ನಾಟ್ಯ ಸೇರಿದಂತೆ ಹಲವು ಸಮಾರಂಭಗಳು ಭಕ್ತರ ಮನ ಸೆಳೆದವು.