ಗುರುಲಿಂಗ ಕಾಪಸೆ ಕನ್ನಡದ ಆಸ್ತಿ: ಶರಣು ಸಬರದ

| Published : Mar 29 2024, 12:52 AM IST

ಸಾರಾಂಶ

ಅನುಭಾವ ಸಾಹಿತ್ಯ ಹಾಗೂ ಹಲಸಂಗಿ ಗೆಳೆಯರ ಸಾಹಿತ್ಯದ ಕುರಿತು ವಿಶೇಷ ಅಧ್ಯಯನ ಮಾಡಿದ ಹಿರಿಯ ಸಂಶೋಧಕ ಗುರುಲಿಂಗ ಕಾಪಸೆ ಕನ್ನಡದ ಆಸ್ತಿ ಆಗಿದ್ದಾರೆಂದು ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅನುಭಾವ ಸಾಹಿತ್ಯ ಹಾಗೂ ಹಲಸಂಗಿ ಗೆಳೆಯರ ಸಾಹಿತ್ಯದ ಕುರಿತು ವಿಶೇಷ ಅಧ್ಯಯನ ಮಾಡಿದ ಹಿರಿಯ ಸಂಶೋಧಕ ಗುರುಲಿಂಗ ಕಾಪಸೆ ಕನ್ನಡದ ಆಸ್ತಿ ಆಗಿದ್ದಾರೆಂದು ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಹೇಳಿದರು.

ನಗರದ ಜಿಲ್ಲಾ ಯುವ ಪರಿಷತ್ ಕಚೇರಿಯಲ್ಲಿ ಆಯೋಜಿಸಿದ ಡಾ.ಗುರುಲಿಂಗ ಕಾಪಸೆ ಅವರ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರುಲಿಂಗ ಕಾಪಸೆ ಅವರು ಜಿಲ್ಲೆಯ ಇಂಡಿ ತಾಲ್ಲೂಕಿನ ಬಿ.ಕೆ.ಲೋಣಿ ಗ್ರಾಮದಲ್ಲಿ ಜನಿಸಿ, ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಸಂಶೋಧನಾ ಕ್ಷೇತ್ರಕ್ಕೆ ಹತ್ತಾರು ಅಮೂಲ್ಯ ಗ್ರಂಥಗಳನ್ನು ನೀಡಿದ್ದಾರೆಂದು ಹೇಳಿದರು.

ಚಡಚಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ. ಎಸ್. ಮಾಗಣಗೇರಿ ಮಾತನಾಡಿ, ಗುರುಲಿಂಗ ಕಾಪಸೆ ಅವರು ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿಯಾಗಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಅಪಾರವಾಗಿದೆ. ವಿಜಯಪುರದ ಸಿದ್ದೇಶ್ವರ ಸ್ವಾಮಿಗಳೊಂದಿಗೆ ಪ್ರೀತಿಯ ಒಡನಾಟ ಹೊಂದಿದ್ದರು. ಅಪಾರ ನೆನಪಿನ ಶಕ್ತಿ ಹೊಂದಿದ ಕಾಪಸೆ ಅವರನ್ನು ಕಳೆದುಕೊಂಡ ಸಂಶೋಧನಾ ಕ್ಷೇತ್ರ ಇಂದು ಬಡವಾಗಿದೆ ಎಂದು ಹೇಳಿದರು.

ಸಾಹಿತಿ ಮನು ಪತ್ತಾರ ಕಲಕೇರಿ ಮಾತನಾಡಿ ಗುರುಲಿಂಗ ಕಾಪಸೆ ಅವರು ಮಧುರ ಚೆನ್ನರ ಜೀವನ ಹಾಗೂ ಸಾಹಿತ್ಯದ ಕುರಿತು ರಚಿಸಿದ ಪ್ರಬಂಧಗಳು ಉತ್ಕೃಷ್ಟವಾಗಿವೆ ಹಾಗೂ ಅಕ್ಕಮಹಾದೇವಿ, ಮಧುರಚೆನ್ನ, ಶ್ರೀ ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು, ಶಾಲ್ಮಲೆಯಿಂದ ಗೋದಾವರಿ ವರೆಗೆ ಮೊದಲಾದ ಕೃತಿಗಳಿಂದ ಕನ್ನಡ ಸಾಹಿತ್ಯ ಚರಿತ್ರೆಯನ್ನು ಶ್ರೀಮಂತಗೊಳಿಸಿದ್ದಲ್ಲದೆ ಅವರೊಬ್ಬ ಜಾನಪದ ವಿಶ್ವವಿದ್ಯಾಲಯವೇ ಆಗಿದ್ದರು. ಇವರ ಅಗಲಿಕೆಯಿಂದ ಜಿಲ್ಲೆಯ ಹಿರಿಯ ಸಂಶೋಧನಾಕೊಂಡಿಯೊಂದು ಕಳಚಿದಂತಾಗಿದೆ ಎಂದರು.

ನುಡಿ ನಮನ ಕಾರ್ಯಕ್ರಮದಲ್ಲಿ ಜಗದೀಶ್ ಬೊಳಸೂರ, ಚಾಣಕ್ಯ ಕಲಾ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಬಿ. ವಿ. ಹಿರೇಮಠ, ವಿನೋದ್ ಮಣೂರ, ಉಪಸ್ಥಿತರಿದ್ದರು.