ಗುರುಪೀಠಗಳು ರಾಜಕಾರಣ ಮಾಡಬಾರದು

| Published : Jun 30 2024, 12:51 AM IST

ಸಾರಾಂಶ

ಗುರುಪೀಠಗಳ ಸ್ವಾಮೀಜಿಗಳು ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕೆ ಹೊರತು ರಾಜಕಾರಣ ಮಾಡಬಾರದು ಎಂದು ಕಾಯಕ ಸಮಾಜದ ಮುಖಂಡ ಪು.ಶ್ರೀನಿವಾಸನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಗುರುಪೀಠಗಳ ಸ್ವಾಮೀಜಿಗಳು ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕೆ ಹೊರತು ರಾಜಕಾರಣ ಮಾಡಬಾರದು ಎಂದು ಕಾಯಕ ಸಮಾಜದ ಮುಖಂಡ ಪು.ಶ್ರೀನಿವಾಸನಾಯಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠಾಧೀಶರು ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು ಎಂದು ಚಂದ್ರಶೇಖರನಾಥ ಸ್ವಾಮೀಜಿಗೆ ತಿರುಗೇಟು ನೀಡಿದರು. ಗುರುಪೀಠ ಇರುವುದು ದೇಶದಲ್ಲಿ ಶಾಂತಿ, ಸಮಾನತೆ ತರಲು, ಎಲ್ಲರಿಗೂ ಸಾಮಾಜಿಕ ನ್ಯಾಯದಿಂದ ನೋಡಲು. ಒಂದು ವೇಳೆ ರಾಜಕಾರಣ ಮಾಡುವುದೇ ಆದರೆ ಪೀಠ ತ್ಯಾಗ ಮಾಡಿ, ಕಾವಿ ಕಳಚಿ ಮಾಡಲಿ ನಮ್ಮದೇನು ತಂಟೆ ತಕರಾರು ಇಲ್ಲ. ಕಾವಿತೊಟ್ಟವರನ್ನು ನಾವು ದೇವರೆಂದು ನಂಬುತ್ತೇವೆ. ಮಠಾಧೀಶರು ಸಮಾಜವನ್ನು ತಿದ್ದುವ ಮೂಲಕ ಸದೃಢವಾಗಿ ಕೆಲಸಮಾಡಬೇಕು ಹೊರತು ಸಮಾಜದಲ್ಲಿ ಜಾತಿಯ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದರು.ಈ ಹಿಂದೆ ಬಲಿಷ್ಟ ಜನಾಂಗದವರು ಮುಖ್ಯಮಂತ್ರಿಗಳಾಗಿದ್ದಾಗ ಸಿಎಂ ಸ್ಥಾನ ಕೇಳಲು ಸ್ವಾಮೀಜಿಗಳಿಗೆ ಧ್ವನಿ ಇರಲಿಲ್ಲವೇ. ನಿಮ್ಮ ಮಾತು ಹೀಗೆ ಮುಂದುವರಿದರೆ ಪ್ರತ್ಯೇಕ ರಾಷ್ಟ್ರ, ಪ್ರತ್ಯೇಕ ರಾಜ್ಯವನ್ನು ಕೇಳಬೇಕಾಗುತ್ತದೆ. ಕಾಯಕ ಸಮಾಜಗಳು ನಿಸ್ಸಾಯಕರಲ್ಲ. ಈ ಸಮಾಜಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಸಿಎಂ ಹುದ್ದೆ ನೀಡಬೇಕು. ಸ್ವಾಮೀಜಿಗಳು ಇಂತಹ ಹೇಳಿಕೆಗಳಿಂದ ಸಾಮಾಜಿಕ ವ್ಯವಸ್ಥೆ, ಶಾಂತಿ ಹಾಳಾಗುತ್ತದೆ ಎಂದರು. ಎಲ್ಲ ಸಮಾಜದವರನ್ನು ಮುಖ್ಯಮಂತ್ರಿ ಮಾಡಿ ಅಂತ ಕೇಳಿ ಇದಕ್ಕೆ ನಮ್ಮ ತಕರಾರಿಲ್ಲ. ಆದರೆ ಒಂದು ಜನಾಂಗದವರಿಗೆ ಸಿಎಂ ಹುದ್ದೆ ಕೇಳುವುದು ಸರಿಯಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸಿಕೊಳ್ಳುವುದಿಲ್ಲ. ಜಾತಿಗಳ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಬಾರದು. ಕಾಯಕ ಸಮಾಜಗಳನ್ನು ಕೆರಳಿಸುವ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.ಚಳವಳಿಗೆ ಕಾಲಿಡುವ ಮುನ್ನ ಯಾವುದೇ ಪೀಠದ ಸ್ವಾಮೀಜಿಗಳಾಗಲೀ ಒಂದು ಸಮುದಾಯದವರ ಪರ ಮಾತನಾಡುವುದನ್ನು ನಿಲ್ಲಿಸಬೇಕು. ಸ್ವಾತಂತ್ರ್ಯ ಬಂದ ನಂತರ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸರ್ವರಿಗೂ ಸಮಬಾಳು, ಸಮಪಾಲು ಕೊಟ್ಟರು. ಪ್ರತ್ಯೇಕ ಮತದಾನ ಹಕ್ಕು ಕೇಳಿದರು. ೭೦ ವರ್ಷಗಳಿಂದಲೂ ಸೇವೆ ಮಾಡಿಕೊಂಡ ಬಂದರೂ ಕೂಡ ನಮ್ಮ ಮೇಲೆ ಶೋಷಣೆ ನಿಂತಿಲ್ಲ ಎಂದರು.

ಮುಖಂಡ ಸಂಘಸೇನಾ ಮಾತನಾಡಿ, ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಚಂದ್ರಶೇಖರ ಸ್ವಾಮೀಜಿ ಅವರು ಸಿಎಂ ಸ್ಥಾನ ಬಿಟ್ಟು ಕೊಡಿ ಅಂತ ಕೇಳಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು ಈ ರೀತಿ ಕೇಳಲು ಯಾವುದೇ ಹಕ್ಕಿಲ್ಲ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹೇಳಿಕೆಗಳನ್ನು ಸ್ವಾಮೀಜಿಗಳು ನೀಡಬಾರದು ಈ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಿ.ಎಂ. ಮಹದೇವಶೆಟ್ಟಿ, ತಾಲೂಕು - ಉಪಾರ ಸಂಘದ ಅಧ್ಯಕ ಪಿ.ಲಿಂಗರಾಜು, ಮುಖಂಡ ಸ್ವಾಮಿ ಇದ್ದರು.