ಸಾರಾಂಶ
ಕೊಪ್ಪಳ:ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನೆಯ ನೂತನ ಜಿಲ್ಲಾ ಪ್ರತಿನಿಧಿಯಾಗಿ ಕೊಪ್ಪಳದ ಗುರುರಾಜ ಜೋಶಿ 140 ಮತಗಳ ಅಂತರದಿಂದ ಗೆಲುವು ಪಡೆದು ಭಾನುವಾರ ಆಯ್ಕೆಯಾಗಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಭಾನುಪ್ರಕಾಶ ಶರ್ಮಾ ಬಣದಿಂದ ಗುರುರಾಜ ಜೋಶಿ ಹಾಗೂ ಎಸ್.ರಘುನಾಥ್ ಬಣದಿಂದ ಪ್ರಾಣೇಶ ಮಾದಿನೂರು ಜಿಲ್ಲಾಪ್ರತಿನಿಧಿ ಸ್ಥಾನಕ್ಕೆ ಕಣಕ್ಕಿಳಿದಿದ್ದರು. ಗುರುರಾಜ ಅವರಿಗೆ 449 ಮತ್ತು ಪ್ರಾಣೇಶ್ ಅವರಿಗೆ 309 ಮತಗಳು ಲಭಿಸಿದವು. 29 ಮತಗಳು ತಿರಸ್ಕೃತವಾದವು.ಮೊದಲ ಬಾರಿಗೆ ಜಿಲ್ಲೆಯಲ್ಲಿ ನಡೆದ ಮತದಾನದಲ್ಲಿ ಒಟ್ಟು 1,190 ಮತದಾರರು ಇದ್ದರು. ಇದರಲ್ಲಿ 787 ಮತಗಳು ಚಲಾವಣೆಯಾದವು. ಇಲ್ಲಿನ ಸರ್ಕಾರಿ ನೌಕರರ ಭವನದ ಎದುರು ಇರುವ ಬ್ರಾಹ್ಮಣ ಸದಾಚಾರ ಸದನದಲ್ಲಿ ಭಾನುವಾರ ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ ನಾಲ್ಕು ಗಂಟೆ ತನಕ ಮತದಾನ ನಡೆಯಿತು. ಜಿಲ್ಲಾ ಕೇಂದ್ರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಮತದಾರರು ಹಕ್ಕು ಚಲಾಯಿಸಿದರು.
ಸಂಜೆ ಆರು ಗಂಟೆ ಸುಮಾರಿಗೆ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಗುರುರಾಜ ಜೋಶಿ ಬಣದವರು ಸಂಭ್ರಮಾಚರಣೆ ಮಾಡಿದರು.ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾದ ಗುರುರಾಜ ಜೋಶಿ ಮಾತನಾಡಿ, ಸಮಾಜದ ಎಲ್ಲ ಹಿರಿಯರ ಆಶೀರ್ವಾದದಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿದೆ.ನಮ್ಮ ರಾಜ್ಯ ಸಮಿತಿಯ ಮುಖಂಡರು ನೀಡುವ ಸೂಚನೆಯನ್ವಯ ಜಿಲ್ಲೆಯಲ್ಲಿ ಸಮುದಾಯದ ಸಂಘಟನೆ ಹಾಗೂ ಜನರ ಅಭಿವೃದ್ಧಿಗೆ ಕೆಲಸ ಮಾಡುವೆ ಎಂದರು.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಜಿಲ್ಲಾಪ್ರತಿನಿಧಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಅಲ್ಲಿನ ಮತದಾರರಿಗೆ ಹಕ್ಕು ಚಲಾಯಿಸಲು ಈ ಬಾರಿ ಇಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು.ರಾಜ್ಯಾಧ್ಯಕ್ಷ ಸ್ಥಾನದ ಮತ:
ಮಹಾಸಭಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಭಾನುಪ್ರಕಾಶ್ ಹಾಗೂ ರಘುನಾಥ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊಪ್ಪಳದಲ್ಲಿ ರಘುನಾಥ್ ಅವರಿಗೆ ಹೆಚ್ಚು ಮತಗಳು ಬಂದವು.ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚಲಾವಣೆಯಾದ ಒಟ್ಟು 787 ಮತಗಳಲ್ಲಿ ರಘುನಾಥ್ 451 ಮತ್ತು ಭಾನುಪ್ರಕಾಶ್ 300 ಮತಗಳನ್ನು ಪಡೆದರು. ಉಳಿದವು ತಿರಸ್ಕೃತವಾದವು.