ಸಾರಾಂಶ
ಧಾರವಾಡ: ಸಮಷ್ಟಿ ಕೇಂದ್ರೀತ ಶ್ರೀ ಗುರುವಿನ ಉಪದೇಶದಿಂದ ಮಾತ್ರ ಮಾನವನ ಬದುಕು ರಾಗ-ದ್ವೇಷಗಳಿಂದ ಮತ್ತು ದ್ವಂದ್ವ-ವೈರುಧ್ಯಗಳಿಂದ ಮುಕ್ತವಾಗಿ ಮುಕ್ತಿಯ ಮೆಟ್ಟಿಲೇರಲು ಸಾಧ್ಯವಾಗುತ್ತದೆ. ಹಾಗಾಗಿ ಬದುಕಿನ ಸಾಕ್ಷಾತ್ಕಾರ ಸಂಪಾದನೆಗೆ ಗುರುಕಾರುಣ್ಯ ಅತೀ ಅಗತ್ಯ ಎಂದು ಹಾವೇರಿ ಜಿಲ್ಲೆ ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಶ್ರೀಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಪ್ರವಚನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ನರನು ಹರನಾಗಲು, ಜೀವನು ಶಿವನಾಗಲು, ಮಾನವನು ಮಹಾದೇವನಾಗಲು, ಜೀವಾತ್ಮ ಪರಮಾತ್ಮನಾಗಲು ಶ್ರೀಗುರುಸಾನ್ನಿಧ್ಯದ ಮಾರ್ಗದರ್ಶನ ಬೇಕಾಗುತ್ತದೆ ಎಂದರು.ಅಮ್ಮಿನಬಾವಿ ಹಿರೇಮಠದ ಶಾಂತಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ, ಮನುಷ್ಯ ಇಹದ ಬದುಕನ್ನು ಜಯಿಸಬೇಕಾಗಿದೆ. ಮನುಕುಲದ ಮನಸ್ಸುಗಳಿಗೆ ಸತ್ಯ-ಶುದ್ಧ ಸಾತ್ವಿಕ ಸಂಸ್ಕಾರದ ಘನತೆಯನ್ನು ಕಲ್ಪಿಸುವುದೇ ಜಾತ್ರಾ ಮಹೋತ್ಸವಗಳ ಪ್ರಮುಖವಾದ ಉದ್ದೇಶ. ದೇವರ ಇಲ್ಲವೇ ಧರ್ಮ ಗುರುಗಳ ಹೆಸರಿನಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ಎಲ್ಲರೂ ಒಂದೆಡೆ ಭಕ್ತಿಯ ಭಾವನಾತ್ಮಕ ತನ್ಮಯತೆಯಲ್ಲಿ ಐಕ್ಯತೆ ಸಾಧಿಸಿ ಮನಸ್ಸುಗಳನ್ನು ತಿಳಿಗೊಳಿಸಿಕೊಳ್ಳುವ ಗುರಿ ಹೊಂದಿದಾಗ ಸಾರ್ಥಕತೆ ಒಡಮೂಡುತ್ತದೆ ಎಂದರು.
ಶ್ರೀಮಠದ ಹಿರಿಯ ಶ್ರೀಗಳು, ಎಂ.ಸಿ. ಹುಲ್ಲೂರ, ವಿ.ಬಿ. ಕೆಂಚನಗೌಡರ, ಬಿ.ಸಿ. ಕೊಳ್ಳಿ, ಪರಮೇಶ್ವರ ಅಕ್ಕಿ, ವಕೀಲ ಸುನೀಲ ಗುಡಿ, ಚಂಬಣ್ಣ ಉಂಡೋಡಿ, ಚೆನ್ನಬಸಪ್ಪ ಪೂಜಾರ, ನಿಂಗಪ್ಪ ಮಾದಿಗ್ಗೊಂಡ, ಶಿವಾನಂದ ತಡಕೋಡ, ಉಮೇಶ ಶಿರಕೋಳ, ಸೋಮಲಿಂಗಶಾಸ್ತ್ರೀ ಗುಡ್ಡದಮಠ, ಗುರುಮೂರ್ತಿ ಯರಗಂಬಳಿಮಠ, ವಿಜಯಕುಮಾರ ಇಟಗಿ ಇದ್ದರು.ಕಲಬುರ್ಗಿ ಜಿಲ್ಲೆ ಹುಲ್ಲೂರಿನ ಮಹಾಂತಯ್ಯಸ್ವಾಮಿ ಹಿರೇಮಠ ಅವರನ್ನು ಗೌರವಿಸಲಾಯಿತು. ಗದಗ-ಡೋಣಿ ಹಿರೇಮಠದ ಶಶಿಧರ ಶಾಸ್ತ್ರೀಜಿ ಪುರಾಣ ಪ್ರವಚನ ನೀಡಿದರು. ವೀರೇಶಕುಮಾರ ಮಳಲಿ ಅವರ ಸಂಗೀತ ಸೇವೆಗೆ ಸಿದ್ಧರಾಮ ಬ್ಯಾಕೋಡ ಸಿಂದಗಿ ತಬಲಾಸಾಥ್ ನೀಡಿದರು. ನಂತರ ದಾಸೋಹ ಸೇವೆಯಲ್ಲಿ ಅನ್ನಸಂತರ್ಪಣೆ ಜರುಗಿತು.