ಸಾರಾಂಶ
ಕೇವಲ ಸಂಘಟನೆಯಿಂದ ಮಾತ್ರ ಧರ್ಮ ರಕ್ಷಣೆಯ ಕೆಲಸ ಮಾಡಲು ಸಾಧ್ಯವಿಲ್ಲ, ಪ್ರತಿಯೊಬ್ಬ ಹಿಂದೂ ಕೂಡ ಇಂತಹ ವಿಚಾರಗಳಲ್ಲಿ ಜಾಗೃತನಾಗಬೇಕು. ಅಯ್ಯಪ್ಪ ಮಾಲೆ ಧಾರಣೆಯ ಪಾವಿತ್ರ್ಯತೆ ಉಳಿಸುವ ಕೆಲಸವನ್ನು ಮಾಡಬೇಕು ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಇತ್ತೀಚಿನ ದಿನಗಳಲ್ಲಿ ಕೆಲವು ಅಯ್ಯಪ್ಪನ ಭಕ್ತರ ಗುರುಸ್ವಾಮಿಗಳು ಆಚರಣೆಗಳನ್ನು ಗಾಳಿಗೆ ತೂರಿ ಹಿಂದೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಉಂಟು ಮಾಡುವ ಕೆಲಸವನ್ನು ಮಾಡುತ್ತಿರುವುದು ವಿಷಾದನೀಯ. ಪ್ರಜ್ಞಾವಂತ ಸಮಾಜ ಇಂಥ ಗೊಂದಲ ಸೃಷ್ಟಿ ಮಾಡುವ ಗುರುಸ್ವಾಮಿಗಳನ್ನು ಪ್ರಶ್ನಿಸಬೇಕು, ಆಗ ಮಾತ್ರ ಈ ಅಸಂಬದ್ಧ ಆಚರಣೆಗಳಿಗೆ ಕಡಿವಾಣ ಹಾಕಬಹುದು ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್ ಹೇಳಿದ್ದಾರೆ.ಕೇವಲ ಸಂಘಟನೆಯಿಂದ ಮಾತ್ರ ಧರ್ಮ ರಕ್ಷಣೆಯ ಕೆಲಸ ಮಾಡಲು ಸಾಧ್ಯವಿಲ್ಲ, ಪ್ರತಿಯೊಬ್ಬ ಹಿಂದೂ ಕೂಡ ಇಂತಹ ವಿಚಾರಗಳಲ್ಲಿ ಜಾಗೃತನಾಗಬೇಕು. ಅಯ್ಯಪ್ಪ ಮಾಲೆ ಧಾರಣೆಯ ಪಾವಿತ್ರ್ಯತೆ ಉಳಿಸುವ ಕೆಲಸವನ್ನು ಮಾಡಬೇಕು. ವಿಶೇಷವಾಗಿ ಗುರುಸ್ವಾಮಿಗಳು ಇಂತಹ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳದೆ ಧರ್ಮ ರಕ್ಷಣಾ ಕೆಲಸದಲ್ಲಿ ತೊಡಗಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದವರು ಮನವಿ ಮಾಡಿದ್ದಾರೆ.ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (ಸಾಸ್) ಒಂದು ರಾಷ್ಟ್ರೀಯ ಸಂಘಟನೆಯಾಗಿದ್ದು, ‘ಅಯ್ಯಪ್ಪನ ಸೇವೆ ಮಾಡಿ, ಶಬರಿಮಲೆಯನ್ನು ರಕ್ಷಿಸಿ’ ಎಂಬ ಧ್ಯೇಯದೊಂದಿಗೆ, ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವಂತಹ ಪರಂಪರೆ ಮತ್ತು ಆಚರಣೆಗಳನ್ನು ಉಳಿಸಿಕೊಳ್ಳುವುದರೊಂದಿಗೆ ಹಿಂದೂ ಧರ್ಮ ರಕ್ಷಣೆ ಮತ್ತು ಸೇವಾ ಉದ್ದೇಶವನ್ನು ಇಟ್ಟುಕೊಂಡು 2008ನೇ ವರ್ಷದಿಂದ ಕೆಲಸವನ್ನು ಮಾಡಿಕೊಂಡು ಬಂದಿದೆ.ಈಗಾಗಲೇ ದೇಶದ ಉದ್ದಗಲಕ್ಕೂ ಕೇಂದ್ರಗಳನ್ನು ತೆರೆಯುವ ಮೂಲಕ ಶಬರಿಮಲೆ ಯಾತ್ರೆ ಕೈಗೊಳ್ಳುವ ಮಾಲಾಧಾರಿಗಳಿಗೆ ಅನುಕೂಲ ಮಾಡಿ ಕೊಡುವ ನಿಟ್ಟಿನಲ್ಲಿ ಯಾತ್ರೆಯ ಸಂದರ್ಭದಲ್ಲಿ ಅನ್ನದಾನ, ವಿಶ್ರಾಂತಿ, ವೈದ್ಯಕೀಯ ವ್ಯವಸ್ಥೆ ಮಾಡುತ್ತಿದೆ. ಎಲ್ಲ ಅಯ್ಯಪ್ಪ ಭಕ್ತರನ್ನು ಒಗ್ಗೂಡಿಸುವ ಹಾಗೂ ಅವರ ಹಿತರಕ್ಷಣೆಯ ಕೆಲಸವನ್ನು ಮಾಡಿಕೊಂಡು ಬಂದಿದೆ. ಇಲ್ಲಿ ಸಾಸ್ ಸದಸ್ಯರಾಗಬಯಸುವವರು ಸೇವಕ್ ಆಗಿ ತಮ್ಮನ್ನು ತಾವು ಸಂಘಟನೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ತಮ್ಮ ಅಮೂಲ್ಯ ಸಮಯ ಮತ್ತು ಸ್ವಂತ ಹಣದಿಂದ ಸೇವಾ ಮನೋಭಾವವನ್ನು ಇಟ್ಟುಕೊಂಡು ಸಂಘಟನೆಯಲ್ಲಿ ದುಡಿಯುತ್ತಾರೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.