ಪರ್ಯಾಯ ಪುತ್ತಿಗೆ ಯತಿದ್ವಯರು ಇಂದು ಮಂಗಳೂರಿಗೆ

| Published : Jan 05 2024, 01:45 AM IST

ಸಾರಾಂಶ

ಉಡುಪಿ ಕೃಷ್ಣಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಶ್ರೀಗಳು ಶುಕ್ರವಾರ ಮಂಗಳೂರಿಗೆ ಭೇಟಿ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಚತುರ್ಥ ಬಾರಿಗೆ ಪರ್ಯಾಯ ಪೀಠಾರೋಹಣಗೈಯ್ಯಲಿರುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಜ.೫ರಂದು ಸಂಜೆ 5.30ಕ್ಕೆ ನಗರದ ಕೊಡಿಯಾಲಬೈಲ್‌ನಲ್ಲಿರುವ ಶಾರದಾ ವಿದ್ಯಾಲಯಕ್ಕೆ ಆಗಮಿಸಲಿದ್ದು, ಮೇಯರ್, ಶಾಸಕರು, ಜನಪ್ರತಿನಿಧಿಗಳು, ಗಣ್ಯರ ಸಮ್ಮುಖದಲ್ಲಿ ಸ್ವಾಗತಿಸಲಾಗುವುದು.

ಜನವರಿ ೬ರಂದು ಬೆಳಗ್ಗೆ ನಗರದ ವಿವಿಧ ದೇವಾಲಯಗಳಿಗೆ ಭೇಟಿ. ಮಧ್ಯಾಹ್ನ ೩ಕ್ಕೆ ಕದ್ರಿ ಕಂಬಳ ಮಂಜುಪ್ರಸಾದ ವಾದಿರಾಜ ಮಂಟಪದಲ್ಲಿ ಯತಿದ್ವಯರಿಗೆ ತುಲಾಭಾರ, ಆಶೀರ್ವಚನ, ಸಾರ್ವಜನಿಕ ಪಾದಪೂಜೆ, ಮಾಧ್ಯಮದವರೊಂದಿಗೆ ಸಂವಾದ. ಬಳಿಕ ದೇವಾಲಯಗಳಿಗೆ ಭೇಟಿ. ಜನವರಿ 7ರಂದು ಮುಂಜಾನೆ ದೇವಾಲಯಗಳ ಭೇಟಿ. ಯತಿದ್ವಯರಿಗೆ ಶಾಸಕ ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ಪೌರಸನ್ಮಾನದ ಪ್ರಯುಕ್ತ ಮಧ್ಯಾಹ್ನ ೩ ಗಂಟೆಗೆ ಶರವು ದೇವಳದಿಂದ ಮೆರವಣಿಗೆ, ಸಂಜೆ ೪ ಗಂಟೆಗೆ ಶರವು ದೇವಳದ ಸಮೀಪದ ರಾಧಾಕೃಷ್ಣ ಮಂದಿರದಲ್ಲಿ ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಪೌರಸನ್ಮಾನ ನಡೆಯಲಿದೆ.

ಜನವರಿ ೮ರಂದು ನೆಲ್ಲಿಕಾಯಿ ರಾಘವೇಂದ್ರ ಮಠದಲ್ಲಿ ಪೂಜೆ, ಸಾರ್ವಜನಿಕರಿಗೆ ಮಂತ್ರಾಕ್ಷತೆ, ಮಂಗಳೂರಿನಿಂದ ಹೊಸಬೆಟ್ಟು ರಾಘವೇಂದ್ರ ಮಠದಲ್ಲಿ ಪೂಜೆಗೈದು ಉಡುಪಿಯಲ್ಲಿ ಯತಿದ್ವಯರ ಪುರಪ್ರವೇಶದ ಪ್ರಯುಕ್ತ ಉಡುಪಿಗೆ ನಿರ್ಗಮಿಸಲಿರುವರು ಎಂದು ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪರ್ಯಾಯ ಪುತ್ತಿಗೆ ಶ್ರೀಗಳಿಗೆ ನಾಳೆ ಗುರುವಂದನಾ ತುಲಾಭಾರ: ಚತುರ್ಥ ಬಾರಿಗೆ ಉಡುಪಿ ಪರ್ಯಾಯ ಸರ್ವಜ್ಞ ಪೀಠಾರೋಹಣ ಗೈಯ್ಯಲಿರುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಜ.೬ರಂದು ಮಧ್ಯಾಹ್ನ 3ಕ್ಕೆ ಕಲ್ಕೂರ ಪ್ರತಿಷ್ಠಾನ ವತಿಯಿಂದ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜುಪ್ರಾಸಾದದಲ್ಲಿ ಗುರುವಂದನಾ ತುಲಾಭಾರ ನಡೆಯಲಿದೆ.

ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಮಂಗಳೂರಿನ ಮಹಾಪೌರರು ಹಾಗೂ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಗುರುವಂದನಾ ತುಲಾಭಾರ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಉಡುಪಿ ಪರ್ಯಾಯ ಸ್ವಾಗತ ಸಮಿತಿಯ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಗಳಿಗೆ ನಾಣ್ಯ ಸಮರ್ಪಣೆ ಮಾಡಲು ಮತ್ತು ಯತಿದ್ವಯರಿಗೆ ಪಾದಪೂಜೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ.