ಗುರುವಿನ ಹೊಣೆಗಾರಿಕೆ ಕುರಿತು ಪರಿಚಯಿಸಲು ನಗರದ ಸರ್ವಜ್ಞ ಶಾಲೆ ಆವರಣದ ಜಸ್ಟಿಸ್ ಶಿವರಾಜ ವಿ. ಪಾಟೀಲ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ಗುರುವೇ ನಮಃ ಕಾರ್ಯಕ್ರಮ ವೇದಿಕೆಯಾಯಿತು.
ಕನ್ನಡಪ್ರಭ ವಾರ್ತೆ ಕಲಬುರಗಿ ಗುರುವಿನ ಹೊಣೆಗಾರಿಕೆ ಕುರಿತು ಪರಿಚಯಿಸಲು ನಗರದ ಸರ್ವಜ್ಞ ಶಾಲೆ ಆವರಣದ ಜಸ್ಟಿಸ್ ಶಿವರಾಜ ವಿ. ಪಾಟೀಲ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ಗುರುವೇ ನಮಃ ಕಾರ್ಯಕ್ರಮ ವೇದಿಕೆಯಾಯಿತು. ನ್ಯಾ. ಶಿವರಾಜ ವಿ. ಪಾಟೀಲ ಪ್ರತಿಷ್ಠಾನ, ಸರ್ವಜ್ಞ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ ಪಿಯು ಕಾಲೇಜುಗಳ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕಲ್ಯಾಣ ಕರ್ನಾಟಕದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಹಾಗೂ ಮೌಲ್ಯಾಧಾರಿತ ಶಿಕ್ಷಣ ಕುರಿತು ಪ್ರೌಢಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಯ ಪ್ರೌಢಶಾಲೆಗಳ ನೂರಾರು ಶಿಕ್ಷಕ-ಶಿಕ್ಷಕಿಯರು ಪಾಲ್ಗೊಂಡಿದ್ದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ವಿಡಿಯೊ ಸಂವಾದದ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಸಾರ್ಥಕ ಬದುಕಿಗೆ ದೀಕ್ಷೆಯಾಗುವ ಶಿಕ್ಷಣವೇ ನಿಜವಾದ ಶಿಕ್ಷಣ. ಶಿಕ್ಷಕರು ವಿದ್ಯಾರ್ಥಿಗಳಿಗೆ ಅಂತಹ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ಹೇಳುತ್ತ ಸಮಾವೇಶಕ್ಕೆ ಚಾಲನೆ ನೀಡಿದರು.ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ನ್ಯಾಯಮೂರ್ತಿ ಟಿ.ಎನ್.ಇನವಳ್ಳಿ ಮಾತನಾಡಿ, ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ. ಒಂದು ದಿವ್ಯ ಶಕ್ತಿಯಂತೂ ನಮ್ಮನ್ನು ಮುನ್ನಡೆಸುತ್ತಿದೆ. ಮಾತಾಜಿ, ಪಿತಾಜಿ ಹಾಗೂ ಗುರೂಜಿ - ಮೂರು ಜಿಗಳು ನಮ್ಮ ಪಾಲಿನ ಜೀವಂತ ದೇವರುಗಳು ಎಂದರು.ನ್ಯಾ. ಶಿವರಾಜ ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಎನ್.ಶರಣಪ್ಪ ಅಧ್ಯಕ್ಷತೆ ವಹಿಸಿದ್ದರು. ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲ ಪ್ರಸ್ತಾವನೆಗೈದರು. ಮಹೇಶ ಮಾಶಾಳ ಪ್ರೇರಣಾ ಮಾತುಗಳನ್ನಾಡಿದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಭಾವಚಿತ್ರಗಳಿಗೆ ಪೂಜಿಸಲಾಯಿತು.ಯಾದಗಿರಿ, ಕಲಬುರಗಿ ಡಿಡಿಪಿಐಗಳಾದ ಸಿ.ಎಸ್. ಮುಧೋಳ, ಶಂಕ್ರಮ್ಮ ಢವಳಗಿ, ಅಮರೇಗೌಡ ವಿರೂಪಾಪುರ, ನಿವೃತ್ತ ನ್ಯಾಯಾಧೀಶ ಎಸ್.ಎಂ.ಪಾಟೀಲ, ಸಿಎ ಪ್ರಶಾಂತ್ ಬಿಜಾಸ್‌ಪುರ, ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ ಚನ್ನಾರಡ್ಡಿ ಪಾಟೀಲ, ನಿರ್ದೇಶಕಿ ಸಂಗೀತಾ ಅಭಿಷೇಕ ಪಾಟೀಲ, ಪ್ರಶಾಂತ ಕುಲಕರ್ಣಿ, ವಿನುತಾ ಆರ್.ಬಿ., ಕರುಣೇಶ್ ಹಿರೇಮಠ, ಪ್ರಭುಗೌಡ ಸಿದ್ಧಾರೆಡ್ಡಿ, ಗುರುರಾಜ ಕುಲಕರ್ಣಿ ಉಪಸ್ಥಿತರಿದ್ದರು.
ಅಷ್ಟ-ಲಕ್ಷಮೀಯರಿಗೆ ಹತ್ತಾರು ಕಡೆ ದೇವಸ್ಥಾನಗಳಿವೆ. ಸರಸ್ವತಿ ದೇವಸ್ಥಾನಗಳು ಎಲ್ಲಿವೆ? ಒಳ್ಳೆಯ ಶಾಲೆ, ಉತ್ತಮ ಪುಸ್ತಕ,ಒಳ್ಳೆಯ ಶಿಕ್ಷಕನೇ ಸರಸ್ವತಿಯ ಮಂದಿರ ಎಂದು ಬಣ್ಣಿಸಿದರು. ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಎಂಬ ಮಾತಿದೆ. ಗುರುಗಳನ್ನು ಸಮಾಜವು ದೇವರು ಎಂದು ಪೂಜಿಸುತ್ತದೆ. ಆ ಹೊಣೆಗಾರಿಕೆಯನ್ನು ಶಿಕ್ಷಕ ಸಮೂಹ ಮನಸಾರೆ ನಿಭಾಯಿಸಬೇಕಿದೆ ಎಂದು ಚಿತ್ರನಟ ರಮೇಶ್ ಅರವಿಂದ್ ಹೇಳಿದರು.