ಗುತ್ತಲು ಕೆರೆ ತ್ಯಾಜ್ಯ ನೀರಿನಿಂದ ನರಕಯಾತನೆ..!

| Published : Jun 01 2025, 11:55 PM IST

ಸಾರಾಂಶ

ವಿಶಾಲವಾದ ಕೆರೆ, ಒಡಲಲ್ಲಿ ತುಂಬಿಕೊಂಡಿರುವುದು ಕೊಳಚೆ ನೀರು, ಬೋರ್‌ವೆಲ್ ತೆಗೆದರೆ ಬರುತ್ತಿರುವುದು ಗಲೀಜು ನೀರು, ಕುಡಿಯಲು ನೀರು ಯೋಗ್ಯವಿಲ್ಲದಿದ್ದರೂ ಬಳಕೆ ಅನಿವಾರ್ಯ, ಜನರು, ಮಕ್ಕಳಿಗೆ ಹರಡುತ್ತಿರುವ ಚರ್ಮರೋಗ, ಶೇ.೨೨ರಷ್ಟು ನೈಟ್ರೋಜನ್ ಪ್ರಮಾಣ, ಮೂರು ತಿಂಗಳೊಳಗೆ ಕೆರೆಗೆ ತ್ಯಾಜ್ಯ ನೀರು ಸೇರದಂತೆ ತಡೆಯಲು ಅಧಿಕಾರಿಗಳಿಗೆ ಉಪಲೋಕಾಯುಕ್ತರ ಸೂಚನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶಾಲವಾದ ಕೆರೆ, ಒಡಲಲ್ಲಿ ತುಂಬಿಕೊಂಡಿರುವುದು ಕೊಳಚೆ ನೀರು, ಬೋರ್‌ವೆಲ್ ತೆಗೆದರೆ ಬರುತ್ತಿರುವುದು ಗಲೀಜು ನೀರು, ಕುಡಿಯಲು ನೀರು ಯೋಗ್ಯವಿಲ್ಲದಿದ್ದರೂ ಬಳಕೆ ಅನಿವಾರ್ಯ, ಜನರು, ಮಕ್ಕಳಿಗೆ ಹರಡುತ್ತಿರುವ ಚರ್ಮರೋಗ, ಶೇ.೨೨ರಷ್ಟು ನೈಟ್ರೋಜನ್ ಪ್ರಮಾಣ, ಮೂರು ತಿಂಗಳೊಳಗೆ ಕೆರೆಗೆ ತ್ಯಾಜ್ಯ ನೀರು ಸೇರದಂತೆ ತಡೆಯಲು ಅಧಿಕಾರಿಗಳಿಗೆ ಉಪಲೋಕಾಯುಕ್ತರ ಸೂಚನೆ.

ಇದು ನಗರದ ಗುತ್ತಲು ಗ್ರಾಮದಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿ ಪರಿಶೀಲಿಸಿದಾಗ ಕಂಡುಬಂದ ನರಕಸದೃಶ ದೃಶ್ಯಗಳು.

ಘಟಕವು ಐದು ಎಕರೆ ವಿಸ್ತೀರ್ಣದಲ್ಲಿದ್ದು, ನಗರದ ತ್ಯಾಜ್ಯ ನೀರು ಮೂರು ಕೊಳಗಳಲ್ಲಿ ಹಾಗೂ ಮೂರು ಹಂತಗಳಲ್ಲಿ ಟ್ರೀಟ್‌ಮೆಂಟ್ ಆಗದೆ ಗುತ್ತಲು ಕೆರೆ ಸೇರುತ್ತಿರುವುದನ್ನು ಉಪ ಲೋಕಾಯುಕ್ತ ಬಿ.ವೀರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದರು.

ಹಸಿರು ಬಣ್ಣಕ್ಕೆ ಕೆರೆ ನೀರು:

ನಗರದಿಂದ ಹರಿದುಬರುವ ರಾಜಕಾಲುವೆಯ ಕೊಳಚೆ ನೀರು ೧೬೯ ಎಕರೆ ೩೩ ಗುಂಟೆ ವಿಸ್ತೀರ್ಣದಲ್ಲಿರುವ ಗುತ್ತಲು ಕೆರೆಗೆ ನೇರವಾಗಿ ಹರಿಯುತ್ತಿದ್ದು ಕೆರೆಯ ನೀರು ಹಸಿರುಬಣ್ಣಕ್ಕೆ ತಿರುಗಿದ್ದು ಉಪಯೋಗಕ್ಕೆ ಬಾರದ ರೀತಿಯಲ್ಲಿ ಕಲುಷಿತಗೊಂಡಿರುವುದನ್ನು ಗಮನಿಸಿದರು. ಕೆರೆಯ ನೀರನ್ನು ಉಪಯೋಗಿಸಿರುವ ರೈತರಿಗೆ, ಶಾಲಾ ಮಕ್ಕಳಿಗೆ ಚರ್ಮರೋಗ ಬಂದಿದೆ. ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕೊಳವೆ ಬಾವಿ ನೀರು ಉಪ್ಪಿನಂಶದಿಂದ ಕೂಡಿದ್ದು, ಆ ನೀರನ್ನೇ ಕುಡಿಯುತ್ತಿದ್ದೇವೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೋರ್‌ವೆಲ್ ತೆಗೆದರೆ ಕಲುಷಿತ ನೀರು ಬರುತ್ತಿದೆ ಎಂದು ಗುತ್ತಲು ಗ್ರಾಮಸ್ಥರಾದ ಬೋರೇಗೌಡ, ಚಂದ್ರಶೇಖರ್, ನಟರಾಜ್, ಪ್ರಕಾಶ್, ಮನು, ಅನಿಲ್, ಶಂಕರೇಗೌಡ, ಎನ್.ಎಸ್.ಗಂಗಾಧರ್ ಉಪ ಲೋಕಾಯುಕ್ತರೆದುರು ದೂರಿದರು.

ಸ್ಮಶಾನ, ಕೆರೆ ಜಾಗ ಒತ್ತುವರಿ:

ಘಟಕದ ಬಳಿಯಲ್ಲಿರುವ ತಾವರೆಗೆರೆ ಸ್ಮಶಾನದ ಐದು ಎಕರೆ ಪ್ರದೇಶ ಹಾಗೂ ೧೨ ಎಕರೆ ಕೆರೆಯ ಜಾಗ ಒತ್ತುವರಿಯಾಗಿದೆ. ಇದುವರೆಗೂ ಯಾರೂ ಸಹ ಜಾಗವನ್ನು ತೆರವುಗೊಳಿಸಿಲ್ಲ. ಮಳೆಗಾಲದಲ್ಲಿ ತ್ಯಾಜ್ಯ ನೀರು ಸುಮಾರು ೩ ಅಡಿಗಳಷ್ಟು ರಸ್ತೆಯ ಮೇಲೆ ಹರಿದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕ ಹಾಗೂ ಕೆರೆಯ ಸುತ್ತಮುತ್ತಲ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ರಸ್ತೆಯ ಮೇಲೆಲ್ಲಾ ಬಿದ್ದಿದೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಗರಸಭೆ ವಿರುದ್ಧ ಇದುವರೆಗೂ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲು ಮಾಡದಿರುವ ಸಂಗತಿ ಉಪಲೋಕಾಯುಕ್ತರ ಗಮನಕ್ಕೆ ಬಂದಿತು. ಈ ವಿಷಯವಾಗಿ ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಅವರನ್ನು ಪ್ರಶ್ನಿಸಿದಾಗ ೩೦ ಕೋಟಿ ರು. ವೆಚ್ಚದಲ್ಲಿ ಉನ್ನತೀಕರಣಗೊಳಿಸುತ್ತಿರುವುದಾಗಿ ತಿಳಿಸಿದರು.

ಕೆರೆಯ ಅಭಿವೃದ್ಧಿ ಕುರಿತು ನಗರಸಭೆ, ನೀರಾವರಿ ಇಲಾಖೆ, ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು ಕೇಳಿದರೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಉಪ ಲೋಕಾಯುಕ್ತರ ಎದುರು ಗ್ರಾಮಸ್ಥರು ಆರೋಪಿಸಿದರು.

ಯತ್ತಗದಹಳ್ಳಿ ಜನರಿಗೆ ಕೊಳಚೆ ನೀರು ಪೂರೈಕೆ:

ಯತ್ತಗದಹಳ್ಳಿ ಗ್ರಾಮಸ್ಥರ ಉಪಯೋಗಕ್ಕಾಗಿ ಗುತ್ತಲು ಕೆರೆಯಿಂದ ಬರುವ ಕೊಳಚೆ ನೀರನ್ನು ಸರಬರಾಜು ಮಾಡುತ್ತಿರುವುದಾಗಿ ಹಾಗೂ ಇದೇ ನೀರನ್ನು ಅರಕೇಶ್ವರ ದೇವಸ್ಥಾನದ ಸುತ್ತಮುತ್ತ ಸರಬರಾಜು ಮಾಡುತ್ತಿರುವುದರಿಂದ ಕೊಳಚೆ ನೀರನ್ನೇ ಉಪಯೋಗಿಸಿ ದೇವಸ್ಥಾನದ ಒಳಗೆ ಹೋಗಿ ಬರುತ್ತಿರುವುದಾಗಿ ಗ್ರಾಮಸ್ಥರು ಅಳಲು ವ್ಯಕ್ತಪಡಿಸಿದರು.

ಯತ್ತಗದಹಳ್ಳಿಯಲ್ಲಿ ಒಳಚಚರಂಡಿ ನೀರನ್ನು ಕೆರೆಗೆ ಬಿಟ್ಟಿರುವುದಾಗಿ ಹಾಗೂ ರಾಜ ಕಾಲುವೆಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಕೆರೆಯ ಸುತ್ತಮುತ್ತ ವಾಸಿಸುವ ಮನೆಗಳ ನಿವಾಸಿಗಳು ನೊಣಗಳ ಕಾಟ, ದುರ್ವಾಸನೆ ಹೆಚ್ಚಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ.

ಕುಡಿಯಲು ಯೋಗ್ಯವಾಗಿಲ್ಲ:

ಕೆರೆಯ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. ಕೇವಲ ಕೃಷಿಗೆ ಉಪಯೋಗಿಸಬಹುದೆಂದು ಪ್ರಯೋಗಾಲಯದಿಂದ ವರದಿ ಪಡೆದಿರುವುದಾಗಿ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಉಪಲೋಕಾಯುಕ್ತರಿಗೆ ತಿಳಿಸಿದರು.

ಗುತ್ತಲು ಕೆರೆಯು ಬೇಲೂರು ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಿಡಿಓ ಸಿದ್ದರಾಆಜು ಅವರನ್ನು ಇದೇ ಮೊದಲಿಗೆ ನೋಡುತ್ತಿದ್ದೇವೆ ಎಂದು ಗ್ರಾಮಸ್ಥರು ಉಪಲೋಕಾಯುಕ್ತರಿಗೆ ತಿಳಿಸಿದಾಗ, ಸೇನೆಯಲ್ಲಿ ಸೇವೆ ಸಲ್ಲಿಸಿಬಂದಿರುವ ನಿಮಗೆ ಶಿಸ್ತು ಎನ್ನುವುದೇ ಇಲ್ವಲ್ರೀ ಎಂದು ಪ್ರಶ್ನಿಸಿದರು.

ವರದಿ ಪಡೆದು ಖಚಿತ ಪಡಿಸಿಕೊಳ್ಳಿ:

ಗುತ್ತಲು ಕೆರೆ ಅಭಿವೃದ್ಧಿಗೆ ೫ ಕೋಟಿ ರು. ಹಣವನ್ನು ಮೀಸಲಿಟ್ಟಿರುವುದಾಗಿ ನೀರಾವರಿ ಇಲಾಖೆ ಕಿರಿಯ ಅಭಿಯಂತರ ಜಿ.ಎನ್.ಕೆಂಪರಾಜು ಉಪ ಲೋಕಾಯುಕ್ತರಿಗೆ ತಿಳಿಸಿದರು. ಕೆರೆ ನೀರನ್ನು ಉಪಯೋಗಿಸಿ ಬೆಳೆದಿರುವ ಭತ್ತ, ರಾಗಿ, ಕಬ್ಬು ಹಾಗೂ ತರಕಾರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಆಹಾರ ಪದಾರ್ಥವನ್ನಾಗಿ ಉಪಯೋಗಿಸಲು ಯೋಗ್ಯವಾಗಿದೆಯೋ, ಇಲ್ಲವೋ ಎಂಬ ಬಗ್ಗೆ ವರದಿ ಪಡೆದುಕೊಂಡು ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.

ಗುತ್ತಲು ಕೆರೆಗೆ ಹರಿಯಬಿಡುತ್ತಿರುವ ತ್ಯಾಜ್ಯ ನೀರು ಹಾಗೂ ರಾಜಕಾಲುವೆಯ ನೀರನ್ನು ನಿಲ್ಲಿಸಲು ಹಾಗೂ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ತಕ್ಷಣವೇ ಕ್ರಮ ಕೈಗೊಂಡು ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಬೇವಿನಹಳ್ಳಿ ಗ್ರಾಪಂ ಪಿಡಿಒ, ನೀರಾವರಿ ಇಲಾಖೆ, ನಗರಸಭೆ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ಆದೇಶಿಸಿದರು.

ಮೂರು ತಿಂಗಳ ಗಡುವು:

ಮೂರು ತಿಂಗಳ ಒಳಗಾಗಿ ಕೆರೆಗೆ ಹರಿಯುತ್ತಿರುವ ರಾಜಕಾಲುವೆ ನೀರು, ಸಂಸ್ಕರಣಾ ಘಟಕದಿಂದ ಹರಿಯುತ್ತಿರುವ ತ್ಯಾಜ್ಯ ನೀರನ್ನು ನಿಲ್ಲಿಸಿ ಕೆರೆ ಅಭಿವೃದ್ಧಿಪಡಿಸುವುದಾಗಿ ಅಧಿಕಾರಿಗಳು ಉಪ ಲೋಕಾಯುಕ್ತರಿಗೆ ಭರವಸೆ ನೀಡಿದರು.

ನೈಟ್ರೋಜನ್ ಮಟ್ಟ ೧೦ಕ್ಕಿಂತ ಕಡಿಮೆ ಇರಬೇಕು. ಆದರೆ, ಪರಿಸರ ಇಲಾಖೆ ಅಧಿಕಾರಿಗಳು ತೋರಿಸಿದ ವರದಿಯಂತೆ ೨೨ ಯುನಿಟ್‌ನಷ್ಟು ನೈಟ್ರೋಜನ್ ಇದ್ದು ಮಾರಕವಾಗಿದೆ ಎಂದು ಅಧಿಕಾರಿಗಳಿಗೆಎ ತಿಳಿಸಿದರು.