ಜನಾರೋಗ್ಯದ ದೃಷ್ಟಿಯಿಂದ ಸರ್ಕಾರ ಜಾರಿಗೆ ತಂದ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಒತ್ತಾಯಿಸಿ ಗುಟ್ಕಾ ಬ್ಯಾನ್, ತಂಬಾಕು ಮುಕ್ತ ಕರ್ನಾಟಕ ಅಭಿಯಾನವನ್ನು ಪ್ರಕೃತಿ ಸಂರಕ್ಷಣಾ ಸಂಸ್ಥೆ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಸೆ.4ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಬಿ.ಕೊಟ್ರೇಶ್ ತಿಳಿಸಿದ್ದಾರೆ.

- ಸಿಗರೇಟು, ಮದ್ಯ, ಗುಟ್ಕಾ, ತಂಬಾಕು, ಮಾದಕ ವಸ್ತುಗಳ ನಿಷೇಧಕ್ಕೆ ಕೆ.ಬಿ.ಕೊಟ್ರೇಶ ಒತ್ತಾಯ । ಪೋಸ್ಟರ್‌ ಬಿಡುಗಡೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜನಾರೋಗ್ಯದ ದೃಷ್ಟಿಯಿಂದ ಸರ್ಕಾರ ಜಾರಿಗೆ ತಂದ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಒತ್ತಾಯಿಸಿ ಗುಟ್ಕಾ ಬ್ಯಾನ್, ತಂಬಾಕು ಮುಕ್ತ ಕರ್ನಾಟಕ ಅಭಿಯಾನವನ್ನು ಪ್ರಕೃತಿ ಸಂರಕ್ಷಣಾ ಸಂಸ್ಥೆ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಸೆ.4ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಬಿ.ಕೊಟ್ರೇಶ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11.30 ಗಂಟೆಗೆ ಇಲ್ಲಿನ ಹಳೇ ಪ್ರವಾಸಿ ಮಂದಿರ ರಸ್ತೆಯ ರೋಟರಿ ಬಾಲಭವನದಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಠಾಧೀಶರು, ಬೋಧಕರು, ಹೋರಾಟಗಾರರು, ಸಾರ್ವಜನಿಕರು, ಗಣ್ಯರು, ವಿದ್ಯಾರ್ಥಿ, ಯುವ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

​ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಲಕ್ಷಾಂತರ ಜನ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಸರ್ಕಾರ ಹಾಗೂ ಕುಟುಂಬಗಳಿಗೆ ಆರ್ಥಿಕ ಹೊರೆ ಹೆಚ್ಚುತ್ತಿದೆ. ಸಾರ್ವಜನಿಕ ಆರೋಗ್ಯಕ್ಕೆ, ಪರಿಸರಕ್ಕೂ ಇದರಿಂದ ಧಕ್ಕೆಯಾಗುತ್ತಿದೆ. ಹಾಗಾಗಿ ಧೂಮಪಾನ, ಮದ್ಯಪಾನ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ಅಗತ್ಯ ಬಿದ್ದಲ್ಲಿ ಸಂಪೂರ್ಣ ನಿಷೇಧ ಜಾರಿ ಸೂಕ್ತ ಎಂದು ಹೇಳಿದರು.

ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ಚರ್ಚಿಸಲು ಹಾಗೂ ಜಾಗೃತಿ ಮೂಡಿಸಲು ಸಭೆ ಆಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರಗತಿಪರ ರೈತರು, ಹೋರಾಟಗಾರರು, ಸಾರ್ವಜನಿಕರನ್ನು ಒಳಗೊಂಡ ಸಮಾಲೋಚನಾ ಸಭೆಯಲ್ಲಿ ಕರ್ನಾಟಕ ರಾಜ್ಯವನ್ನು ಗುಟ್ಕಾ ಮುಕ್ತ, ತಂಬಾಕು ಮುಕ್ತಗೊಳಿಸುವಂತೆ ಒತ್ತಾಯಿಸಲಾಗುವುದು. ಅಭಿಯಾನದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ 2006ರಡಿ ನಡೆದ ಸಮೀಕ್ಷೆ ಪ್ರಕಾರ ದೇಶದಲ್ಲಿ ಪ್ರತಿ 6 ಕುಟುಂಬಗಳಲ್ಲಿ ಒಬ್ಬರು ತಂಬಾಕು ಅಥವಾ ಗುಟ್ಕಾ ಅಗಿಯುವ ಅಭ್ಯಾಸ ಹೊಂದಿದ್ದಾರೆ ಎಂಬ ಅಂಶ ಬಯಲಾಗಿದೆ. 2011ರಲ್ಲಿ ಕೇಂದ್ರ ಆಹಾರ ಭದ್ರತಾ ಕಾಯ್ದೆಯಡಿ ಗುಟ್ಕಾ ಬ್ಯಾನ್ ಮಾಡುವಂತೆ ನೋಟಿಫಿಕೇಶನ್ ಹೊರಡಿಸಲಾಗಿತ್ತು. ರಾಜ್ಯ ಸರ್ಕಾರಗಳಿಗೆ ಇದನ್ನು ಜಾರಿಗೊಳಿಸಲು ಸೂಚಿಸಲಾಗಿತ್ತು ಎಂದು ತಿಳಿಸಿದರು.

ಆದರೆ, ಗುಟ್ಕಾ ಬ್ಯಾನ್ ಮಾಡುವ ವಿಷಯ 2013ರಲ್ಲೂ ಪ್ರಸ್ತಾಪವಾಗಿದ್ದರೂ ತಕ್ಷಣಕ್ಕೆ ಜಾರಿ ಆಗಿರಲಿಲ್ಲ. ಪ್ರಸ್ತುತ ಆರೋಗ್ಯ ಸಚಿವ ಯು.ಟಿ. ಖಾದರ್ ಗುಟ್ಕಾ ನಿಷೇಧ ಜಾರಿಗೊಳಿಸುವ ಅಭೂತಪೂರ್ವ ನಿರ್ಧಾರ ಕೈಗೊಂಡಿದ್ದಾರೆ. ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧ ಜೊತೆಗೆ ನಶೆಮುಕ್ತ ಭಾರತ ನಿರ್ಮಾಣಕ್ಕಾಗಿ ತಂಬಾಕು ಸಂಬಂಧಿತ ಎಲ್ಲ ಉತ್ಪನ್ನ, ಮಾದಕ ವಸ್ತುಗಳನ್ನೆಲ್ಲಾ ಸಂಪೂರ್ಣ ಬ್ಯಾನ್ ಮಾಡಬೇಕು ಎಂದು ಕೆ.ಬಿ. ಕೊಟ್ರೇಶ ಒತ್ತಾಯಿಸಿದರು.

ಸಂಸ್ಥೆ ಪ್ರಧಾನ ಕಾರ್ಯದರ್ಶಿ ಗಿರೀಶ ಎಸ್. ದೇವರಮನಿ, ಜಿ.ರಮೇಶ, ಎ.ಆರ್. ಪ್ರವೀಣಕುಮಾರ, ಸುನಂದಾ ಮಾಲಾ, ಅರ್.ವಿ. ಹನುಮಂತಪ್ಪ, ಎಚ್.ಎಂ. ಪ್ರಕಾಶ, ಎಚ್.ಮಾರುತಿ, ಎಸ್.ಮಣಿಕಂಠ, ಎಸ್.ಮಹಾದೇವಿ, ನಾಗರಾಜ್ ಬಿ.ಸುರ್ವೆ, ನಿವೃತ್ತ ಶಿಕ್ಷಕ ಎಂ.ಗುರುಸಿದ್ದ ಸ್ವಾಮಿ ಇತರರು ಇದ್ದರು.

- - -

-31ಕೆಡಿವಿಜಿ7: ಸುದ್ದಿಗೋಷ್ಠಿಯಲ್ಲಿ ಗುಟ್ಕಾ, ತಂಬಾಕು ಉತ್ಪನ್ನಗಳ ಬ್ಯಾನ್‌ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.