ಸಾರಾಂಶ
ಅರಸೀಕೆರೆತಾಲೂಕಿನ ಸುಕ್ಷೇತ್ರ ಗುತ್ತಿನಕೆರೆ ರಂಗನಾಥ ಸ್ವಾಮಿಯ ಮಹಾರಥೋತ್ಸವವು ಸಹಸ್ರಾರು ಭಕ್ತಾದಿಗಳ ಗೋವಿಂದ ನಾಮ ಸ್ಮರಣೆಯೊಂದಿಗೆ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವದ ಮೊದಲನೇ ದಿನ ಕಲ್ಯಾಣೋತ್ಸವ, ಎರಡನೇ ದಿನ ಬ್ರಹ್ಮ ರಥೋತ್ಸವ, 3ನೇ ದಿನ ಮಹಾರಥೋತ್ಸವ ಹೀಗೆ ನಾಲ್ಕು ದಿನಗಳ ಕಾಲ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವ ಭಕ್ತರ ಶ್ರದ್ಧಾ ಭಕ್ತಿಯೊಂದಿಗೆ ಜರುಗಿತು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಸುಕ್ಷೇತ್ರ ಗುತ್ತಿನಕೆರೆ ರಂಗನಾಥ ಸ್ವಾಮಿಯ ಮಹಾರಥೋತ್ಸವವು ಸಹಸ್ರಾರು ಭಕ್ತಾದಿಗಳ ಗೋವಿಂದ ನಾಮ ಸ್ಮರಣೆಯೊಂದಿಗೆ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವದ ಮೊದಲನೇ ದಿನ ಕಲ್ಯಾಣೋತ್ಸವ, ಎರಡನೇ ದಿನ ಬ್ರಹ್ಮ ರಥೋತ್ಸವ, 3ನೇ ದಿನ ಮಹಾರಥೋತ್ಸವ ಹೀಗೆ ನಾಲ್ಕು ದಿನಗಳ ಕಾಲ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವ ಭಕ್ತರ ಶ್ರದ್ಧಾ ಭಕ್ತಿಯೊಂದಿಗೆ ಜರುಗಿತು.ಭೂ ನೀಳ ಸಮೇತ ರಂಗನಾಥ ಸ್ವಾಮಿಯ ದೊಡ್ಡ ರಥೋತ್ಸವಕ್ಕೂ ಮುನ್ನ ಮುಂಜಾನೆ ರಂಗನಾಥ ಸ್ವಾಮಿಯ ಏಕಶಿಲೆಯ ಮೂಲ ವಿಗ್ರಹಕ್ಕೆ ವಿಶೇಷ ಅಭಿಷೇಕ, ವಿಷ್ಣು ಸಹಸ್ರನಾಮ ಅರ್ಚನೆ ಹೀಗೆ ಮೊದಲಾದ ಧಾರ್ಮಿಕ ಪೂಜಾ ಕಾರ್ಯಗಳು ದೇವಾಲಯದ ಅರ್ಚಕ ವೃಂದದ ವತಿಯಿಂದ ಸಂಪ್ರದಾಯದಿಂದ ನಡೆಯಿತು. ಮಧ್ಯಾಹ್ನ ೨:೩೦ಕ್ಕೆ ಗುತ್ತಿನಕೆರೆ ಗ್ರಾಮದ ಮೂಡಲಗಿರಿ ತಿಮ್ಮಪ್ಪ ಸ್ವಾಮಿ, ಕೆಂಚರಾಯಸ್ವಾಮಿ, ಬೇವಿನ ಮರದಮ್ಮದೇವಿ, ಹಾರನಹಳ್ಳಿ ಕೋಡಮ್ಮ ದೇವಿ, ಯಳವಾರೆ ಹುಚ್ಚಮದೇವಿ, ಹುಲ್ಲೇಹಳ್ಳಿ ಚಿಕ್ಕಮ್ಮ ದೇವಿ, ತಳಲೂರು ಬನ್ನಿ ಮಹಾಕಾಳಿ ಹೀಗೆ ಸುತ್ತಮುತ್ತಲ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಶ್ರೀದೇವಿ, ಭೂದೇವಿ ಸಮೇತನಾದ ರಂಗನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ಶೃಂಗೇರಿಸಿದ ರಥದ ಮೇಲೆ ಪ್ರತಿಷ್ಠಾಪಿಸಿ ಮಹಾಮಂಗಳಾರತಿ ಬೆಳಗುತ್ತಿದ್ದಂತೆ ಈ ಶುಭಗಳಿಗೆಗಾಗಿ ಕಾಯುತ್ತಿದ್ದ ಭಕ್ತರು ಗೋವಿಂದ ನಾಮ ಸ್ವಾಮಿಯೊಂದಿಗೆ ರಥವನ್ನು ಎಳೆದು ಪುನೀತರಾದರು.ರಥೋತ್ಸವದ ಸಂದರ್ಭದಲ್ಲಿ ನಾನಾ ರಾಜಕೀಯ ಪಕ್ಷಗಳ ಮುಖಂಡರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಬುಧವಾರ ರಾತ್ರಿ ಕೆಂಚಪ್ಪ ಸ್ವಾಮಿಯ ಹರಿಸೇವೆಯವರಿಗೆ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ ಎಂದು ದೇವಲಯದ ಭಕ್ತವೃಂದ ತಿಳಿಸಿದೆ.