ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ಜ್ಞಾನಸಿರಿಯ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ಜ್ಞಾನಸಿರಿಯ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ಬಿದರಕಟ್ಟೆ ನೂತನ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗವು ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜ್ಞಾನಸಿರಿ ಕ್ಯಾಂಪಸ್ ಶೀಘ್ರದಲ್ಲೇ ಶೈಕ್ಷಣಿಕ ಹಾಗೂ ಸಂಶೋಧನಾ ಶ್ರೇಷ್ಠತೆಯ ಕೇಂದ್ರವಾಗಿ ಬೆಳೆಯಲಿದೆ. ಮುಂದಿನ ದಿನಗಳಲ್ಲಿ ಮೂಲಸೌಕರ್ಯ ವಿಸ್ತರಣೆ, ವಿದ್ಯಾರ್ಥಿ ಸೌಲಭ್ಯಗಳ ಹೆಚ್ಚಳ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಕೆ.ಆರ್. ವಾಸುಕಿ ಗಣಿತದ ಮಹತ್ವ ಮತ್ತು ರಾಮಾನುಜನ್ ಅವರ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆಧುನಿಕ ಗಣಿತದ ತತ್ವಗಳು ಮತ್ತು ಸಂಶೋಧನಾ ಸಾಧ್ಯತೆಗಳ ಕುರಿತು ಅರಿವು ಮೂಡಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ. ಚಂದ್ರಾಲಿ ಬೈಷ್ಯಾ, ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪಯಣಕ್ಕೆ ಹೊಸ ದಿಕ್ಕು ತೋರಿಸುತ್ತವೆ ಮತ್ತು ಸಂಶೋಧನೆಗೆ ಪ್ರೇರಣೆ ನೀಡುವ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 17 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿಭಾಗದ ನೂತನ ಮಾಸಿಕ ಉಪನ್ಯಾಸ ಮಾಲಿಕೆಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಜಾಗತಿಕ ಗಣಿತಜ್ಞರೊಂದಿಗೆ ವಿದ್ಯಾರ್ಥಿಗಳಿಗೆ ಸಂವಾದದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಮಾಲಿಕೆಯನ್ನು ರೂಪಿಸಲಾಗಿದೆ.ಜ್ಞಾನಸಿರಿ ಕ್ಯಾಂಪಸ್‌ನ ಸಂಯೋಜಕ ಡಾ. ಡಿ. ಸುರೇಶ್, ಹಿರಿಯ ಪ್ರಾಧ್ಯಾಪಕ ಪ್ರೊ. ಪಾಟೀಲ್ ಮಲ್ಲಿಕಾರ್ಜುನ್ ಬಿ. ಉಪಸ್ಥಿತರಿದ್ದರು.
