ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ನಾಡು ನುಡಿ, ನೆಲ-ಜಲ, ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.ನಗರದ ವೇದಾವತಿ ಬಡಾವಣೆಯ ಕೃಷ್ಣಪ್ಪ ಸರ್ಕಲ್‌ನಲ್ಲಿ ಶನಿವಾರ ಕೆಚ್ಚೆದೆಯ ಕನ್ನಡಿಗರ ಯುವಕ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಭೀಮೋತ್ಸವ ಹಾಗೂ ಕನ್ನಡದ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನ್ನಡ ನಾಡಿಗಾಗಿ ಶ್ರಮಿಸಿದ ಶ್ರೇಷ್ಠ ಕವಿ ಹಾಗೂ ಮಹಾ ಮಾನವತಾವಾದಿ ಕುವೆಂಪು, ಬಸವಣ್ಣ, ಅಂಬೇಡ್ಕರ್, ಕನಕದಾಸರು ಮುಂತಾದ ದಾರ್ಶನಿಕರ ತತ್ವಾ ದರ್ಶಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಜೀವನದಲ್ಲಿ ಅವುಗಳನ್ನು ಪಾಲಿಸುವ ಮೂಲಕ ನೆಮ್ಮದಿಯ ಜೀವನ ಕಟ್ಟಿಕೊಳ್ಳಬೇಕು ಎಂದರು.ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ತಂದೆ,ತಾಯಿ, ಅಕ್ಷರ ಕಲಿಸಿದ ಗುರುಗಳ ಜೊತೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ಸಹ ದೇವರ ಸ್ಥಾನ ದಲ್ಲಿ ನಿಲ್ಲುತ್ತಾರೆ. ಪ್ರಸ್ತುತ ದೇಶದಲ್ಲಿ ಸಂವಿಧಾನಕ್ಕೆ ಆಪತ್ತು ಒದಗಿ ಬಂದಿದ್ದು ಅದನ್ನು ರಕ್ಷಿಸುವ ಜಾತ್ಯಾತೀತ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾದ ಅವಶ್ಯಕತೆ ಇದೆ ಎಂದರು.ಐಮoಗಲ ಗುರುಪೀಠದ ಹರಳಯ್ಯ ಸ್ವಾಮೀಜಿ ಮಾತನಾಡಿ, ರಾಮಮಂದಿರ ಕಟ್ಟುವುದಕ್ಕೆ ಅವಕಾಶ ಸಿಕ್ಕಿರುವುದು ಅಂಬೇಡ್ಕರ್ ಸಂವಿಧಾನದಿಂದ. ಆದ್ದರಿಂದ ಅಲ್ಲಿ ಅಂಬೇಡ್ಕರ್ ಪೋಟೋ ಹಾಕಬೇಕು. ಗ್ರಂಥಾಲಯ ಸ್ಥಾಪನೆ ಮಾಡಬೇಕು. ಎಲ್ಲಾ ದೇವಸ್ಥಾನದಲ್ಲಿ ಅಂಬೇಡ್ಕರ್ ಪೋಟೋ ಇರುವಂತೆ ರಾಷ್ಟ್ರಪತಿ ಆದೇಶ ನೀಡಬೇಕು. ಸಂವಿಧಾನ ಸರಿಯಾಗಿ ಪಾಲನೆಯಾಗಿದ್ದರೆ ಮೀಸಲಾತಿ ಬೇಕಾಗಿರಲಿಲ್ಲ. ಬಡತನ ನಿರ್ಮೂಲನೆ ಆಗಿದ್ದರೆ ಮೀಸಲಾತಿ ಕೇಳುತ್ತಿರಲಿಲ್ಲ. ಇದ್ಯಾವುದು ಇಲ್ಲವಾದರಿಂದಲೇ ಮೀಸಲಾತಿ ಬೇಕಾಗಿದೆ. ಆದರೆ ಇಂದು ಈ ಮೀಸಲಾತಿ ಸೌಲಭ್ಯ ಪಡೆದವರೂ ಕೂಡ ಅಂಬೇಡ್ಕರ್ ರವರನ್ನು ಸ್ಮರಿಸದಿರುವುದು ದುರದೃಷ್ಠ ಕರ ಸಂಗತಿ ಎಂದರು.ಈ ಸಂದರ್ಭದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ, ಸಾಮಾಜಿಕ ಹೋರಾಟಗಾರ ಕೊಟ್ಟ ಶಂಕರ್, ಕೋಡಿಹಳ್ಳಿ ಸಂತೋಷ್, ನಗರಸಭೆ ಸದಸ್ಯ ಜಿಎಸ್.ತಿಪ್ಪೇಸ್ವಾಮಿ, ಕಂದಿಕೆರೆ ಸುರೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ನಗರಸಭೆ ಸದಸ್ಯರಾದ ಶಿವರಂಜಿನಿ, ಚಿತ್ರಜಿತ್ ಯಾದವ್ , ಪ್ರಸನ್ನ, ಪ್ರದೀಪ್, ಸಂದೀಪ್, ಕರವೇ ಅಧ್ಯಕ್ಷ ಕೃಷ್ಣ ಪೂಜಾರಿ, ಕೆಂಜೆಡಿಯಪ್ಪ, ಹುಚ್ಚವನಳ್ಳಿ ವೆಂಕಟೇಶ್, ಜಗನ್ನಾಥ್ ಮುಂತಾದವರು ಉಪಸ್ಥಿತರಿದ್ದರು.