ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆಯಿಂದ ರೈತರು ಪ್ರತಿ ಹನಿಗೂ ಅಧಿಕ ಇಳುವರಿಯೊಂದಿಗೆ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ ಹೇಳಿದರು.ಟಿ. ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ಕಾಳಬಸವನ ಹುಂಡಿ ಗ್ರಾಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ನಾಗನಹಳ್ಳಿ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಗುರುವಾರ ಆಯೋಜಿಸಿದ್ದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ವಿಧಾನಗಳು, ರಸಾವರಿ ಮತ್ತು ಸಮಗ್ರ ಬೆಳೆ ನಿರ್ವಹಣೆ ಕುರಿತು ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ರೈತರು ತಮ್ಮ ಜಮೀನಿನಲ್ಲಿ ಮಣ್ಣು ಮತ್ತು ನೀರನ್ಜು ಸಂರಕ್ಷಿಸಲು ಅನುಸರಿಸಬೇಕಾದ ತಾಂತ್ರಿಕ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.ನೆಟಾಫಿನ್ ಸಂಸ್ಥೆಯ ಬೇಸಾಯಶಾಸ್ತ್ರಜ್ಞ ಅಂಜನಪ್ಪ ಅವರು ಹನಿ ನೀರಾವರಿ ಪದ್ದತಿಯಲ್ಲಿ ಕೃಷಿ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳಿಗೆ ರಸಾವರಿ ಪದ್ದತಿ ಅಳವಡಿಕೆ ಹಾಗೂ ಹನಿ ನೀರಾವರಿ ಘಟಕಗಳ ನಿರ್ವಹಣೆ ಬಗ್ಗೆ ರೈತರಿಗೆ ತರಬೇತಿ ನೀಡಿದರು.
ವಿಸ್ತರಣಾ ಶಿಕ್ಷಣ ಘಟಕದ ನಿವೃತ್ತ ಪ್ರಾಧ್ಯಾಪಕ ಡಾ. ಗೋವಿಂದರಾಜ್ ಮಾತನಾಡಿ, ಭತ್ತ, ಕಬ್ಬು ಹಾಗೂ ಮುಸುಕಿನ ಜೋಳ ಬೆಳೆಗಳಲ್ಲಿ ಕೀಟ ಹಾಗೂ ರೋಗ ರೋಗಗಳ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.ಪಟ್ಟಣದ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕೆ.ಎಸ್. ಸುಹಾಸಿನಿ ಕೃಷಿ ಭಾಗ್ಯ, ಸೂಕ್ಷ್ಮ ನೀರಾವರಿ ಹಾಗೂ ಬೆಳೆ ಸಮೀಕ್ಷೆ ಯೋಜನೆಗಳು ಹಾಗೂ ಇಲಾಖೆ ಯೋಜನೆಗಳ ಬಗ್ಗೆ ರೈತರಿಗೆ ವಿವರವಾದ ಮಾಹಿತಿ ನೀಡಿದರು. ನಂತರ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಸ್ವಾಮಿ ರೈತರಿಗೆ ಹಸಿರೆಲೆ ಗೊಬ್ಬರ ಹಾಗೂ ಸಾವಯವ ಗೊಬ್ಬರಗಳ ಮಹತ್ವ ಕುರಿತು ರೈತರಿಗೆ ಮಾಹಿತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಜಿ.ಕೆ. ಶಿಲ್ಪಾ, ಕಾವ್ಯಾ ಹಾಗೂ ಆತ್ಮ ಸಿಬ್ಬಂದಿಗಳಾದ ಹೇಮಂತ್, ಅರ್ಜುನ್ ಇದ್ದರು. ಗ್ರಾಪಂ ಸದಸ್ಯರು ಹಾಗೂ ವಿವಿಧ ಗ್ರಾಮದ 50 ಜನ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.