ಸಾರಾಂಶ
ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರನ್ನು ಸೇವೆಯಿಂದ ತೆಗೆದು ಹಾಕಿ ಕೆಟ್ಟ ರಾಜಕೀಯವನ್ನು ಶಾಸಕರು ಸಾಂಗವಾಗಿ ಮಾಡುತ್ತಿದ್ದಾರೆ,
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕಳೆದ 18 ತಿಂಗಳ ಹಿಂದೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವವರು ತಮ್ಮ ಸರ್ಕಾರದಿಂದ ಹೊಸ ಅನುದಾನ ತರದೆ ಈ ಹಿಂದೆ ನಾನು ಮಂಜೂರು ಮಾಡಿಸಿದ್ದ ಹಣದಿಂದಲೇ ಗುದ್ದಲಿಪೂಜೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಟೀಕಿಸಿದರು.ಪಟ್ಟಣದ ಶ್ರೀರಾಮ ಬಡಾವಣೆಯಲ್ಲಿರುವ ಎಚ್.ಡಿ. ದೇವೇಗೌಡ ಸಮುದಾಯ ಭವನದಲ್ಲಿ ಗುರುವಾರ ನಡೆದ ಎಚ್.ಡಿ. ಕುಮಾರಸ್ವಾಮಿ ಅಭಿನಂದನಾ ಪೂರ್ವಭಾವಿ ಮತ್ತು ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ದಿ ಕೆಲಸವನ್ನು ಮರೆತಿರುವ ಶಾಸಕ ಮಹಾಶಯ ದ್ವೇಷದ ರಾಜಕಾರಣ ಮಾಡುವುದನ್ನು ಮೈಗೂಡಿಸಿಕೊಂಡಿದ್ದು ಇದಕ್ಕೆ ಜನತೆ ಭವಿಷ್ಯದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರನ್ನು ಸೇವೆಯಿಂದ ತೆಗೆದು ಹಾಕಿ ಕೆಟ್ಟ ರಾಜಕೀಯವನ್ನು ಶಾಸಕರು ಸಾಂಗವಾಗಿ ಮಾಡುತ್ತಿದ್ದಾರೆ, ಆದರೆ ನಾನು 15 ವರ್ಷಗಳ ಕಾಲ ಶಾಸಕನಾಗಿದ್ದಾಗ ಈ ಹಿಂದೆ ಮಾಜಿ ಸಚಿವರಾದ ಎಚ್. ವಿಶ್ವನಾಥ್ ಮತ್ತು ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಅವರ ಕಾಲದಲ್ಲಿ ನೇಮಕವಾದವರಿಗೆ ಯಾವುದೇ ತೊಂದರೆ ನೀಡಿರಲಿಲ್ಲವೆಂದು ಸ್ಪಷ್ಟನೆ ನೀಡಿದರು.ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದು ರಾಜ್ಯದಲ್ಲಿ ಅವರದೇ ಸರ್ಕಾರವಿದ್ದರೂ ಕೇಂದ್ರದಲ್ಲಿ ಎನ್.ಡಿಎ ಮೈತ್ರಿಕೂಟ ಅಧಿಕಾರವಿದ್ದು ನಮ್ಮ ನಾಯಕ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿರುವುದರಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಯಾವುದಕ್ಕೂ ಹೆದರಬೇಡಿ ಎಂದರವರು ನಮ್ಮ ತಾಕತ್ತನ್ನು ಚಂದಗಾಲು ಗ್ರಾಮದ ಕುಟುಂಬದ ಆತ್ಮಹತ್ಯೆ ಪ್ರಕರಣದಲ್ಲಿ ತೋರಿಸಿದ್ದೇನೆಂದು ಸವಾಲು ಹಾಕಿದರು.