ಜಿಂದಾಲ್ ಕಂಪನಿಗೆ ಭೂಮಿ ಮಾರಾಟದ ಬ್ಗಗೆ ಸಿಎಂ ಮಾತನಾಡಲಿ

| Published : Aug 26 2024, 01:33 AM IST

ಸಾರಾಂಶ

3667 ಎಕರೆ ಗಣಿ ಭೂಮಿಯನ್ನ ಎಕರೆಗೆ 1.50 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಸರ್ಕಾರವು ಜಿಂದಾಲ್ ಕಂಪನಿಗೆ ಕಡಿಮೆ ಬೆಲೆಯಲ್ಲಿ 3667 ಎಕರೆ ಭೂಮಿ ಮಾರಾಟ ಮಾಡಿದ್ದು, ಜನವಿರೋಧಿ ನೀತಿಯ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.

ಮೈಸೂರಿನ ಜಲದರ್ಶಿನಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಕಂಪನಿಗೆ ಸರ್ಕಾರದ ಭೂಮಿಯನ್ನು ಮಾರಾಟ ಮಾಡುವುದಕ್ಕೆ ಮೊದಲಿನಿಂದಲೂ ವಿರೋಧ ಮಾಡಿಕೊಂಡು ಬಂದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿರುವುದು ದೊಡ್ಡ ಮಟ್ಟದ ಅನುಮಾನ ಉಂಟು ಮಾಡಿದೆ ಎಂದು ಆರೋಪಿಸಿದರು.

3667 ಎಕರೆ ಗಣಿ ಭೂಮಿಯನ್ನ ಎಕರೆಗೆ 1.50 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಆ ಭೂಮಿಯಲ್ಲಿ ಬೆಲೆ ಬಾಳುವ ಐರನ್, ಮಿನರಲ್ಸ್, ಕಂಟೆಟ್ ಇದೆ. ಬೆಸ್ಟ್ ಓರಲ್ಸ್ ಸಿಗುವ ಶೇ.62 ಈಲ್ಡ್ ಬರುವ ಭೂಮಿಯನ್ನ ಜಿಂದಾಲ್ ಕಂಪನಿಗೆ ಏಕಪಕ್ಷಿಯವಾಗಿ ಮಾರಾಟ ಮಾಡಿದ್ದಾರೆ ಎಂದು ಅವರು ದೂರಿದರು.

ಈ ಭೂಮಿಗೆ ಯಾವುದೇ ವ್ಯಾಲೂ ಕಟ್ಟೋಕೆ ಆಗೋದಿಲ್ಲ. 2017ರಲ್ಲಿ ಕಾನೂನು ಇಲಾಖೆಯು ಭೂಮಿಯ ವ್ಯಾಲೂ, ಒಳಗೆ ಇರೋ ಅದಿರು ಪ್ರಮಾಣ ನೋಡಿ ಮಾರಾಟ ಮಾಡಬೇಕು ಎಂದು ವರದಿ ನೀಡಿತ್ತು. ಅನುಕೂಲಕ್ಕೆ ತಕ್ಕಂತೆ ಸರ್ಕಾರದ ಭೂಮಿಯನ್ನು ಪರಭಾರೆ ಮಾಡಿದ್ದಾರೆ. ಇದೊಂದು ಜನವಿರೋಧಿ ನೀತಿ, ಈ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಬೇಕು ಎಂದು ಅವರು ಒತ್ತಾಯಿಸಿದರು.

ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತದೆ. ಒಟ್ಟಾರೆ ಭೂಮಿಯ ಬೆಲೆ 52 ಕೋಟಿಗಳಿಗೆ ಮಾರಾಟ ಮಾಡಿದ್ದಾರೆ. ಇವರು ತಮ್ಮ 14 ಸೈಟ್ ಗೆ 62 ಕೋಟಿ ಕೇಳ್ತಾರೆ, ಈ ಭೂಮಿಯನ್ನ ಒಟ್ಟಾರೆ 52 ಕೋಟಿಗೆ ಮಾರಾಟ ಮಾಡಿದ್ದಾರೆ. ಇದ್ಯಾವ ನ್ಯಾಯ? ಇದು ಹಲವಾರು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.

ಜಿಂದಾಲ್ ಕಂಪನಿಗೆ ಭೂಮಿ ಕೊಡುವ ವಿಚಾರದಲ್ಲಿ ತೀರ್ಮಾನ ಮಾಡದೆ ಜಂಟಿ ಸದನ ಸಮಿತಿಯ ಮುಂದಿಡಲು ನಾನು ಹೇಳಿದ್ದೆ. ಈ ವಿಚಾರದಲ್ಲಿ ತರಾತುರಿ ಬೇಡ. ಸರ್ಕಾರದ, ಜನರ ಆಸ್ತಿಯಾಗಿದೆ. ಇದನ್ನು ಜಂಟಿ ಸದನ ಸಮಿತಿ ಮುಂದಿಟ್ಟು ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವ ಮಾತನ್ನು ಹೇಳಿದ್ದರೂ ಇಂತಹ ನಿರ್ಧಾರ ಆಗಿರುವುದರಿಂದ ತಕ್ಷಣವೇ ಮುಖ್ಯಮಂತ್ರಿ ಜನರ ಮುಂದೆ ಸತ್ಯ ಹೇಳಬೇಕು ಎಂದು ಅವರು ಆಗ್ರಹಿಸಿದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಕಡತಗಳನ್ನು ಹೆಲಿಕಾಪ್ಟರ್‌ ನಲ್ಲಿ ಬಂದು ತೆಗೆದುಕೊಂಡು ಹೋಗಿದ್ದಾರೆ. ಎಂಡಿಎಗೆ ಇಷ್ಟೊಂದು ಭದ್ರತೆ ಕೊಡುತ್ತಿರುವುದು ಯಾಕೆ. ಎಂಡಿಎಗೆ ಪ್ರತಿ ತಿಂಗಳು 5 ಕೋಟಿ ರೂ. ಸಂಬಳ, ಖರ್ಚು, ವೆಚ್ಚಕ್ಕೆ ಬೇಕು ಎಂದರು.

ರೀಡು ವಿಚಾರದಲ್ಲಿ ಕೆಂಪಣ್ಣ ಏಕಸದಸ್ಯ ಆಯೋಗದ ವರದಿ ಬಿಡುಗಡೆ ಮಾಡಬೇಕು. ಕೆಂಪಣ್ಣ ಏಕ ಸದಸ್ಯ ಆಯೋಗದ ವರದಿ ಬಿಡುಗಡೆ ಮಾಡಿದರೆ ಸಿಎಂ ಸಿದ್ದರಾಮಯ್ಯರ ಪಂಚೆ, ಶರ್ಟು ಎಲ್ಲಾ ಮಸಿಯಾಗೋದು ಗ್ಯಾರಂಟಿ ಎಂದು ಅವರು ವ್ಯಂಗ್ಯವಾಡಿದರು.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಿರುವುದನ್ನ ಸಾಹಿತಿಗಳು ಖಂಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇವರೆಲ್ಲ ಸರ್ಕಾರಿ ಸಾಹಿತಿಗಳು. ಇವರೆಲ್ಲ ಸರ್ಕಾರದ ಮರ್ಜಿನಲ್ಲಿ ಇರೋರು. ಚಿಂತಕರು ಈಗ ಎಲ್ಲಿದ್ದಾರೆ? ತಪ್ಪನ್ನು ತಪ್ಪು ಎಂದು ಹೇಳಬೇಕು ಎಂದರು.