ಕಾರಟಗಿ: ಪಟ್ಟಣದ ಸರ್ಕಾರಿ ಕಚೇರಿಗಳಲ್ಲಿ ಬುಧವಾರ ಹಡಪದ ಅಪಣ್ಣನವರ ೮೯೨ನೇ ಜಯಂತಿ ಸಂಭ್ರಮದಿಂದ ಆಚರಿಸಿದರು.
ತಾಪಂ ಕಚೇರಿಯಲ್ಲಿ ಇಓ ಲಕ್ಷ್ಮೀದೇವಿ ಯಾದವ್ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರು ೧೨ನೇ ಶತಮಾನದ ಶಿವಶರಣರಲ್ಲಿ ಅಗ್ರಗಣ್ಯರು. ಅಪ್ಪಣ್ಣನವರು ಕ್ರಾಂತಿಕಾರಕ ಧೋರಣೆಯ ವೈಚಾರಿಕ ಪ್ರಜ್ಞೆಯ ವಚನಗಳ ಮೂಲಕ ಸಮಾಜಕ್ಕೆ ಬೆಳಕಾಗಿ ಧಮನಿತರ ಧ್ವನಿಯಾಗಿ ದಾರಿ ತಪ್ಪಿದ ಸಮಾಜ ಭಂಡಾಯದ ಧ್ವನಿ ಮೂಲಕ ಸರಿದಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ವೀರಶರಣರು.ಅವರ ತತ್ವ ವಿಚಾರ, ಆದರ್ಶ,ಪ್ರತಿಪಾಧಿಸಿದ ಮಾನವೀಯ ಮೌಲ್ಯ ಸಮಾಜದ ಎಲ್ಲ ವರ್ಗಗಳಿಗೂ ಇಂದಿಗೂ ಸ್ಫೂರ್ತಿಯಾಗಿವೆ ಎಂದರು.
ಪುರಸಭೆ ಕಚೇರಿಯಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಪಣ್ಣನವರ ೮೯೨ನೇ ಜಯಂತಿ ಆಚರಿಸಿದರು. ನಂತರ ಕಚೇರಿಯ ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಶರಣರು, ಸಂತರು, ದಾರ್ಶನಿಕರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಹಡಪದ ಅಪ್ಪಣ್ಣ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದರು. ಕಾಯಕ ತತ್ವದಡಿ ಬದುಕು ರೂಪಿಸಿಕೊಳ್ಳುವದೇ ಶರಣರ ಆಶಯವಾಗಿತ್ತು ಎಂದರು.ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಕಚೇರಿ ಸಿಬ್ಬಂದಿ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಗ್ರೇಡ್ ೨ತಹಸೀಲ್ದಾರ ಷಣ್ಮುಖಪ್ಪ ಅಪ್ಪಣ್ಣನವರ ಭಾವಚಿತ್ರ ಪುಷ್ಪಾರ್ಪಣೆ ಮಾಡಿ ಮಾತನಾಡಿ, ಕೇಳವರ್ಗದ ವಚನಕಾರರಾಗಿದ್ದ ಹಡಪದ ಅಪ್ಪಣ್ಣ ಸಮಾಜದಲ್ಲಿನ ಅಸಮಾನತೆ ಅಸ್ಪೃಷ್ಯತೆ, ಮೇಳುಕೀಳು ಎಂಬ ತಳಹದಿಯ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಕೆಲವು ಕ್ರಾಂತಿಕಾರಕ ಬದಲಾವಣೆ ತರಲು ಶ್ರಮಿಸಿದರು. ಅವರ ವಚನ ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಆದ್ದರಿಂದಲೆ ಅವರ ವಿಚಾರ ಸಾರ್ವಕಾಲೀಕ ಮತ್ತು ಸದಾ ಸ್ಮರಣೀಯ ಎಂದು ಶ್ಲಾಘಿಸಿದರು.
ಇದಕ್ಕೂ ಮುನ್ನ ಕಚೇರಿ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಹಡಪದ ಸಮಾಜ ಬಾಂಧವರು ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಭಯ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಹಡಪದ ಸಮಾಜ ಬಾಂಧವರು, ಯುವಕರು ಇತರರು ಇದ್ದರು.