ಹೊಸಪೇಟೆ: 12ನೇ ಶತಮಾನದಲ್ಲೇ ರಕ್ತ ಕ್ರಾಂತಿಯ ಬದಲು ವೈಚಾರಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಶಿವಶರಣ ಹಡಪದ ಅಪ್ಪಣ್ಣನವರ ತತ್ವಗಳು ಮತ್ತು ಚಿಂತನೆಗಳು ಇಂದಿನ ಆಧುನಿಕ ಯುಗಕ್ಕೂ ಅತ್ಯಂತ ಪ್ರಸ್ತುತ ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ತಿಳಿಸಿದರು.ನಗರದ ಅನಂತಶನಯನಗುಡಿ ರಾಯಣ್ಣ ಕಾಲೋನಿಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಅನುಭವ ಮಂಟಪದಲ್ಲಿ ಬಸವಣ್ಣನವರ ಜೊತೆಗೂಡಿ ಕಾರ್ಯ ನಿರ್ವಹಿಸಿದ ಹಡಪದ ಅಪ್ಪಣ್ಣನವರು, ಅಂದಿನ ಕಾಲದ ಮೌಢ್ಯತೆ, ಅಂಧಶ್ರದ್ಧೆ ಮತ್ತು ವರ್ಣಾಶ್ರಮ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದರು. ಶಸ್ತ್ರಾಸ್ತ್ರಗಳ ರಕ್ತ ಕ್ರಾಂತಿ ಮಾಡದೆ, ಆಲೋಚನೆ ಮತ್ತು ವಿಚಾರಗಳ ಮೂಲಕ ವೈಚಾರಿಕ ಕ್ರಾಂತಿ ಹುಟ್ಟು ಹಾಕಿದರು. ಅಂದಿನ ಕಾಲದಲ್ಲಿ ಜನರ ಕಾಯಕ, ವೃತ್ತಿಯ ಆಧಾರದ ಮೇಲೆ ಮೇಲು-ಕೀಳು ಎಂಬ ತಾರತಮ್ಯ ಮಾಡುವ ವ್ಯವಸ್ಥೆಯಿತ್ತು. ಆದರೆ ಅನುಭವ ಮಂಟಪದ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಭೆ ಮತ್ತು ಕಾಯಕಕ್ಕೆ ಆದ್ಯತೆ ನೀಡಿ, ಸರ್ವರಿಗೂ ಸಮಬಾಳು-ಸಮಪಾಲು ಎಂಬ ತತ್ವ ಸಾರಿದರು. ಪ್ರಸ್ತುತ ಆಧುನಿಕ ತಂತ್ರಜ್ಞಾನ ಬೆಳೆದಿದ್ದರೂ ಸಹ, ಸಂವಿಧಾನದ ಮೂಲಭೂತ ಹಕ್ಕುಗಳು ನಮ್ಮ ಮುಂದಿದ್ದರೂ ಇಂದಿಗೂ ಸಮಾಜದಲ್ಲಿ ಅಸಮಾನತೆ ಕಾಣಸಿಗುತ್ತಿವೆ. ಇಂತಹ ಸಂದರ್ಭದಲ್ಲಿ ಹಡಪದ ಅಪ್ಪಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವುದು ಮತ್ತು ಅವರ ವಚನಗಳ, ತತ್ವಾದರ್ಶಗಳು ಮೈಗೂಡಿಸಿಕೊಳ್ಳಬೇಕು ಎಂದರು.

ಹಿಟ್ನಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಸ್ವರಾಜ್ ಟಿ.ಎಚ್. ಉಪನ್ಯಾಸ ನೀಡಿದರು. ಸಿದ್ದಲಿಂಗಸ್ವಾಮಿ ಕೊಟ್ಟೂರು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ, ಜಾಗತಿಕ ಲಿಂಗಾಯತ ಮಹಸಭೆ ಜಿಲ್ಲಾಧ್ಯಕ್ಷ ಮಾವಿನಹಳ್ಳಿ ಬಸವರಾಜ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಗೊಗ್ಗ ಚನ್ನಬಸವರಾಜ್, ಬಸವ ಬಳಗದ ಅಧ್ಯಕ್ಷ ಬಸವ ಕಿರಣ ಸ್ವಾಮಿ, ಹಡಪದ ಹಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಎಚ್.ಮಲ್ಲಪ್ಪ, ಕಾರ್ಯದರ್ಶಿ ಕೊಟ್ರೇಶಪ್ಪ ಎಚ್. ಗೌರವಾಧ್ಯಕ್ಷ ಈರಪ್ಪ ಎಚ್. ಮಲಪನಗುಡಿ ಸೇರಿದಂತೆ ಸಮುದಾಯದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ಹೊಸಪೇಟೆ ನಗರದ ಅನಂತಶನಯನಗುಡಿ ರಾಯಣ್ಣ ಕಾಲೋನಿಯಲ್ಲಿ ಹಡಪದ ಅಪ್ಪಣ್ಣ ಜಯಂತಿಯನ್ನು ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಉದ್ಘಾಟಿಸಿ ಮಾತನಾಡಿದರು.