ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಸಭಾಂಗಣದಲ್ಲಿ ನಿಜಸುಖಿ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತ್ಯುತ್ಸವವನ್ನು ಭಕ್ತಿಭಾವ ಹಾಗೂ ಗೌರವದಿಂದ ಆಚರಿಸಲಾಯಿತು.

ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಅಶೋಕ ಕುಕನೂರು ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣನವರು ಸಮ ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಸಂತರು ಎಂದು ಹೇಳಿದರು.ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣನವರ ತತ್ವ, ಆದರ್ಶ ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾನತೆ, ಸೇವಾಭಾವ ಮತ್ತು ಮಾನವೀಯತೆಯ ಸಂದೇಶವನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಈ ವೇಳೆ ಹಡಪದ ಸಮುದಾಯದ ಮುಖಂಡರು ತಮ್ಮ ಸಮಸ್ಯೆಗಳನ್ನು ತಹಸೀಲ್ದಾರರ ಗಮನಕ್ಕೆ ತಂದರು. ಸರ್ಕಾರದಿಂದ ಜಯಂತ್ಯುತ್ಸವ ಆಚರಣೆಗೆ ಅನುದಾನ ಮಂಜೂರಾದರೂ, ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಮಟ್ಟದಲ್ಲಿ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಜಯಂತ್ಯುತ್ಸವವನ್ನು ಸಮರ್ಪಕವಾಗಿ ಆಚರಿಸಲು ತೊಡಕಾಗುತ್ತಿದೆ ಎಂದು ದೂರಿದರು.

ಹಡಪದ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಆಡಳಿತ ವಿಳಂಬ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪೂರ್ವಜರ ದಾಖಲೆಗಳ ಕೊರತೆಯನ್ನು ನೆಪವನ್ನಾಗಿ ಮಾಡದೇ, ಅಗತ್ಯವಿದ್ದಲ್ಲಿ ಕುಲಶಾಸ್ತ್ರದ ಆಧಾರದ ಮೇಲೆ ಪಂಚನಾಮೆ ನಡೆಸಿ ಹಡಪದ ಜಾತಿ ಪ್ರಮಾಣ ಪತ್ರಗಳನ್ನು ಶೀಘ್ರ ವಿತರಿಸುವಂತೆ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳಾದ ಕಂದಕೂರು ಸಂಗಮೇಶ್, ಪ್ರತಾಪ್, ಬಸವರಾಜ ಎಮ್ಮಿಗನೂರು, ಎಚ್. ಚಂದ್ರಶೇಖರ್ ಜಾಲಿಹಾಳ್, ಎಚ್. ಕಾಳೇಶ್, ಶಶಿಕುಮಾರ್, ಕಂದಾಯ ನಿರೀಕ್ಷಕ ವೈ.ಎಂ. ಜಗದೀಶ್, ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣನಾಯ್ಕ, ಸಿಬ್ಬಂದಿಗಳಾದ ವೈಷ್ಣವಿ, ರಾಧಾ, ಶಿಲ್ಪಾ ಇದ್ದರು.