ಉಡುಪಿ: ಕಾಲಕಾಲಕ್ಕೆ ಹಲವಾರು ನಾಯಕರು, ಸಂತರು, ದಾಸರು, ದಾರ್ಶನಿಕರು ಜನ್ಮತಾಳಿ ಸಮಾಜದ ಸುಧಾರಣೆಗಾಗಿ ಹೆಜ್ಜೆ ಇಟ್ಟಿದ್ದಾರೆ. ಅದೇ ರೀತಿ 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾದ ಹಡಪದ ಅಪ್ಪಣ್ಣ, ಅಂದಿನ ಕಾಲದಲ್ಲಿ ಸಮಾಜವು ಎದುರಿಸುತ್ತಿದ್ದ ಮೌಢ್ಯತೆಗಳನ್ನು ಧಿಕ್ಕರಿಸಿ, ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಹಾನ್ ಶರಣರಾಗಿದ್ದರು. ಅವರ ವಚನಗಳು ಹಾಗೂ ಚಿಂತನೆಗಳು ಇಂದಿಗೂ ಮನುಕುಲದ ಉದ್ಧಾರಕ್ಕೆ ದಾರಿದೀಪವಾಗಿದೆ ಎಂದು ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ ಹೇಳಿದರು.
ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಕಾರ್ಯಕ್ರಮವನ್ನು ಉದ್ಘಾಟಿಸಿ, ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಅಕ್ಷರಶಃ ಪಾಲಿಸಿದ್ದರು. ಇಂತಹ ಮಹಾನ್ ದಾರ್ಶನಿಕರ ಆದರ್ಶಗಳು, ಕಾಯಕನಿಷ್ಠೆ, ಸಮಾಜಸೇವಾ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯ ಎಂದರು.ಶಿಕ್ಷಕ ಜಿ.ಪಿ ಪ್ರಭಾಕರ ತುಮರಿ ಅವರು ಹಡಪದ ಅಪ್ಪಣ್ಣ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಹಡಪದ ಸಮಾಜದವರಾಗಿದ್ದ ಅಪ್ಪಣ್ಣ ಅವರು ಶ್ರಮಕ್ಕೆ ಗೌರವ ನೀಡಿ, ಪ್ರತಿಯೊಂದು ಕಾಯಕವೂ ಪವಿತ್ರ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು. ಅವರು 240 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು, ಅವುಗಳಲ್ಲಿ ಕಾಯಕ, ಆತ್ಮಶುದ್ಧಿ, ಶಿವಭಕ್ತಿ, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಅತ್ಯಂತ ಸರಳ ಹಾಗೂ ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸಿದ್ದಾರೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್ ನಿರೂಪಿಸಿ ವಂದಿಸಿದರು.