ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಬೈಂದೂರು ಕ್ಷೇತ್ರದಾದ್ಯಂತ ಸ್ವಚ್ಛತೆ ಹಾಗೂ ವ್ಯಸನ ಮುಕ್ತ ಪರಿಕಲ್ಪನೆಯಡಿ ಆಚರಿಸಲು ಸಂಕಲ್ಪಿಸಲಾಗಿದೆ ಎಂದು ಶಾಸಕ ಗುರುರಾಜ ಶೆಟ್ಟಿ ಗಂಟುಹೊಳೆ ಹೇಳಿದ್ದಾರೆ.ಈ ಸಂಕಲ್ಪದಂತೆ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಆ. 1ರಿಂದ ಆ. 15ರವರೆಗೆ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ನಾನಾ ಕಡೆಗಳಲ್ಲಿ ಸ್ವಚ್ಛತೆ ಹಾಗೂ ವ್ಯಸನ ಮುಕ್ತ ಗ್ರಾಮ ನಿರ್ಮಾಣದ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತಜ್ಞ ಸಂಪನ್ಮೂಲ ವ್ಯಕ್ತಿ ಗಳಿಂದ ವಿದ್ಯಾರ್ಥಿಗಳಿಗೆ ಅನೈರ್ಮಲ್ಯ ಹಾಗೂ ಕೆಟ್ಟ ವ್ಯಸನಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಎರಡೂ ಸಮಸ್ಯೆಗಳು ಆರೋಗ್ಯಯುತ ಸಮಾಜಕ್ಕೆ ಕಂಟಕವಾದ ಪಿಡುಗುಗಳಾಗಿರುವುದರಿಂದ ಇದನ್ನು ಹೋಗಲಾಡಿಸಿ ಸ್ವಚ್ಛ ಹಾಗೂ ವ್ಯಸನ ಮುಕ್ತ ಗ್ರಾಮ ನಿರ್ಮಾಣ ಮಾಡುವುದರ ಜೊತೆಗೆ ಸ್ವಚ್ಛ ಹಾಗೂ ವ್ಯಸನ ಮುಕ್ತ ಬೈಂದೂರು ನಿರ್ಮಾಣಕ್ಕೆ ಎಲ್ಲಾ ನಾಗರೀಕ ರು ಹಾಗೂ ಸಂಘ ಸಂಸ್ಥೆಯವರು ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಜೊತೆ ಕೈ ಜೋಡಿಸಬೇಕೆಂದು ಶಾಸಕರು ಕರೆ ನೀಡಿದ್ದಾರೆ.