ಸಾರಾಂಶ
ಹಗರಿಬೊಮ್ಮನಹಳ್ಳಿ: ಕುತೂಹಲ ಕೆರಳಿಸಿದ್ದ ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಬಹುಮತದೊಂದಿಗೆ ಗೆದ್ದು ಬೀಗಿದೆ. ಈ ವೇಳೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪುರಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎಂ.ಮರಿರಾಮಣ್ಣ, ಉಪಾಧ್ಯಕ್ಷರಾಗಿ ಚಿಂತ್ರಪಳ್ಳಿ ಅಂಬಿಕಾ ದೇವೇಂದ್ರಪ್ಪ ಆಯ್ಕೆಯಾಗಿದ್ದಾರೆ. ಪುರಸಭೆಯ ೨೩ ಸದಸ್ಯರ ಪೈಕಿ ಕಾಂಗ್ರೆಸ್‌ನ ೧೨, ಬಿಜೆಪಿಯ ೧೧ ಸದಸ್ಯರು ಜಯಗಳಿಸಿದ್ದರು. ಆದರೆ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಕಾಂಗ್ರೆಸ್‌ನ ಮರಿರಾಮಣ್ಣ ಅವರು ಸಂಸದ ಈ.ತುಕಾರಾಂ ಅವರ ಮತವೂ ಸೇರಿ ಒಟ್ಟು ೧೫ ಮತಗಳಿಂದ ಆಯ್ಕೆಯಾದರು.ಬಿಜೆಪಿಯ ಇಬ್ಬರು ಸದಸ್ಯರು ಕಾಂಗ್ರೆಸ್ ಬೆಂಬಲಿಸಿದ್ದು ವಿಶೇಷವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಬಿಜೆಪಿಯ ಬಣಕಾರ ಸುರೇಶ ಇವರು ಜೆಡಿಎಸ್ ಶಾಸಕ ನೇಮರಾಜ ನಾಯ್ಕ ಮತವೂ ಸೇರಿ ಒಟ್ಟು ೧೦ ಮತ ಪಡೆದು ಪರಾಭವಗೊಂಡರು. ಅಧ್ಯಕ್ಷ ಸ್ಥಾನ ಒಬಿಸಿ ಎ ವರ್ಗಕ್ಕೆ ಮೀಸಲಾಗಿತ್ತು. ಮತ್ತೊಂದೆಡೆ ಉಪಾಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳಿಂದ ಅಂಬಿಕಾ ದೇವೇಂದ್ರಪ್ಪ ಇವರ ಏಕೈಕ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಆರ್.ಕವಿತಾ ಅವಿರೋಧ ಆಯ್ಕೆ ಪ್ರಕಟಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಪೈಕಿ ಇಬ್ಬರು ಎಸ್ಟಿ ಮಹಿಳೆಯರು ಕೇವಲ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನ ನಿರಾಯಾಸವಾಗಿ ಕಾಂಗ್ರೆಸ್ ಪಾಲಾಯಿತು.ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ಮಾತನಾಡಿ, ಕ್ಷೇತ್ರದಲ್ಲಿ ಭೀಮಬಲ ಏನೆಂದು ಗೊತ್ತಿದ್ದರೂ ಕೂಡ ವಿರೋಧಿಗಳು ನಮ್ಮನ್ನು ಸೋಲಿಸಲು ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಕಾಂಗ್ರೆಸ್ ಮೇಲೆ ಜನರು ಹೊಂದಿರುವ ನಂಬಿಕೆಯನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಉಳಿಸಿಕೊಳ್ಳುವಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸೂಚಿಸಲಾಗಿದೆ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಯಾವಾಗಲೂ ಬದ್ದವಾಗಿದೆ. ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಋಣ ತೀರಿಸಲಾಗುವುದು ಎಂದರು.
ಸಂಸದ ಈ.ತುಕಾರಾಮ ಮಾತನಾಡಿ, ಬಿಜೆಪಿಯವರು ಹತಾಶರಾಗಿ ನಮ್ಮ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ನನಗೆ ಅದೆಲ್ಲ ಬೇಕಿಲ್ಲ. ಸಂಸದನಾಗಿ ನಿರಂತರವಾಗಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಪಟ್ಟಣದಲ್ಲಿ ಫ್ಲೈಒವರ್ ಮಾಡಲು ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಜಿಪಂ ಮಾಜಿ ಸದಸ್ಯರಾದ ಹೆಗ್ಡಾಳ್ ರಾಮಣ್ಣ, ಅಕ್ಕಿ ತೋಟೇಶ್, ರೋಗಾಣಿ ಹುಲುಗಪ್ಪ, ಎಚ್.ಭೀಮಪ್ಪ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಕೆಪಿಸಿ ವಕ್ತಾರ ಪತ್ರೇಶ್ ಹಿರೇಮಠ, ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಟಿ.ವೆಂಕೋಬಪ್ಪ, ಮುಖಂಡರಾದ ನೆಲ್ಕುದ್ರಿ ಚಂದ್ರಪ್ಪ, ಸತ್ಯಣ್ಣ, ದಾದಾಪೀರ್, ತ್ಯಾವಣಿಗಿ ಕೊಟ್ರೇಶ್, ಯು.ಬಾಳಪ್ಪ, ಕಡ್ಲಬಾಳು ವೆಂಕಟೇಶ, ಪೋಟೋ ವೀರೇಶ್, ರೋಗಾಣಿ ಪ್ರಕಾಶ್, ಸೊನ್ನದ ಗುರುಬಸವರಾಜ, ಸಂತೋಷ್, ಹೆಗ್ಡಾಳ್ ಪರುಶುರಾಮ, ಯು.ಪರುಶುರಾಮ, ಪ್ರಭಾಕರ ಇದ್ದರು.
ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷರಾಗಿ ಎಂ.ಮರಿರಾಮಣ್ಣ,ಉಪಾಧ್ಯರಾಗಿ ಅಂಬಿಕಾ ದೇವೇಂದ್ರಪ್ಪ ಆಯ್ಕೆಯಾದರು. ಸಂಸದ ಈ.ತುಕಾರಾಮ, ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ ಇದ್ದರು.