ಫೆ.7ರಂದು ಆಯೋಜಿಸಿರುವ ಹಿಂದೂ ಸಮಾವೇಶಕ್ಕೆ ಸೂರ್ಯಕಾಂತಿ ನಗರ ಎನಿಸಿಕೊಂಡಿರುವ ಹಗರಿಬೊಮ್ಮನಹಳ್ಳಿ ಸಿದ್ಧಗೊಂಡಿದೆ.

ಹಗರಿಬೊಮ್ಮನಹಳ್ಳಿ: ಹಿಂದೂ ಸಮಾಜದ ಎಲ್ಲ ಜಾತಿಯ ಜನರನ್ನು ಧರ್ಮ ಜಿಜ್ಞಾಸೆಯಲ್ಲಿ ಒಂದೇ ವೇದಿಕೆಯಡಿ ಒಗ್ಗೂಡಿಸಬೇಕು ಎಂಬ ಆಶಯದೊಂದಿಗೆ ಪಟ್ಟಣದ ಸಮಾನ ಮನಸ್ಕರು ಫೆ.7ರಂದು ಆಯೋಜಿಸಿರುವ ಹಿಂದೂ ಸಮಾವೇಶಕ್ಕೆ ಸೂರ್ಯಕಾಂತಿ ನಗರ ಎನಿಸಿಕೊಂಡಿರುವ ಹಗರಿಬೊಮ್ಮನಹಳ್ಳಿ ಸಿದ್ಧಗೊಂಡಿದೆ.

ಸಮಾವೇಶದ ಯಶಸ್ಸಿನ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾದ ವೈದ್ಯ ಡಾ.ಬಂಡ್ರಿ ವಿಶ್ವನಾಥ್ ಅವರಿಗೆ ರಾಜಕೀಯದ ಸೋಂಕಿಲ್ಲ. ಉಪಾಧ್ಯಕ್ಷರಾದ ಕನ್ನಿಹಳ್ಳಿ ಚಂದ್ರಶೇಖರ್, ಹಾಲ್ದಾಳ್ ವಿಜಯಕುಮಾರ್, ಕಾರ್ಯದರ್ಶಿ ಡಾ.ಅಜ್ಜಯ್ಯ ಮತ್ತಿತರ ಪದಾಧಿಕಾರಿಗಳು ಸಮಾವೇಶದ ಭಾರ ಹೊತ್ತಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಈಗಾಗಲೇ ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ, ಹತ್ತು ಹಲವು ಧರ್ಮಗುರುಗಳು ಮತ್ತು ತಾಲೂಕಿನ ಎಲ್ಲ ಸಮಾಜದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಮಾವೇಶದ ಪೂರ್ವಭಾವಿ ಸಭೆ ನಡೆದಿದೆ. ತಮ್ಮ ಆಚಾರ, ಧಾರ್ಮಿಕ ಸಂಪ್ರದಾಯಗಳು ಮುಂದಿನ ಪೀಳಿಗೆಗೂ ವಿಸ್ತರಿಸುವ ಕುರಿತು ಜಾಗೃತಿ ಮೂಡಿಸುವ ತುರ್ತಿಗೆ ಎಲ್ಲರಿಂದಲೂ ಒಮ್ಮತದ ಒಪ್ಪಿಗೆ ದೊರೆತಿರುವುದು ತಾಲೂಕಿನಾದ್ಯಂತ ಹರ್ಷಮಯ ವಾತಾವರಣ ಉಂಟಾಗಿದೆ.

ಈ ಸಮಾವೇಶ ಯಾವುದೇ ಧರ್ಮದ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸಮಾಜದ ಸಣ್ಣಪುಟ್ಟ ಅಪಸವ್ಯಗಳನ್ನು ಸರಿಪಡಿಸಲಾಗುವುದು. ರಾಷ್ಟ್ರಭಕ್ತಿಯ ಜ್ಯೋತಿ ಬೆಳಗಿಸಿ ಸದೃಢ ಭಾರತ ನಿರ್ಮಾಣದ ಸಣ್ಣ ಪ್ರಯತ್ನಕ್ಕೆ ಸಮಾವೇಶ ಮುನ್ನುಡಿಯಾಗಲಿದೆ ಎಂಬ ಆಶಯವನ್ನು ಹಿಂದೂ ಸಮಾವೇಶ ಸಮಿತಿ ವ್ಯಕ್ತಪಡಿಸಿದೆ.

ಪಟ್ಟಣದ ಹೊಸಪೇಟೆ- ಹರಿಹರ ರಸ್ತೆಯುದ್ದಕ್ಕೂ ಕೇಸರಿ ಬಾವುಟ, ವೃತ್ತಗಳಲ್ಲಿ ಬಂಟಿಂಗ್ಸ್‌ ರಾರಾಜಿಸುತ್ತಿವೆ. ಇಡೀ ಪಟ್ಟಣ ಕೇಸರಿ ಸೀರೆಯುಟ್ಟಿರುವ ನವವಧುವಿನಂತೆ ಸಿಂಗಾರಗೊಂಡಿದೆ. ಪಟ್ಟಣದ ಯು.ಕೆ. ಕೊಟ್ರಬಸಪ್ಪನವರ ಬಯಲು ನಿವೇಶನದಲ್ಲಿ ನಡೆಯುವ ಸಮಾವೇಶಕ್ಕೆ ವಿವಿಧೆಡೆಯಿಂದ ಆಗಮಿಸುವವರಿಗೆ ತೊಂದರೆಯಾಗದಂತೆ ಕುಡಿಯುವ ನೀರು, ಬಸ್ ವ್ಯವಸ್ಥೆ, ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿರುವ ಆಂಜನೇಯ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭವಾಗಿ ಅಂಬಾಭವಾನಿ ದೇವಸ್ಥಾನದ ಮೂಲಕ ಸಮಾವೇಶ ನಡೆಯುವ ಸ್ಥಳದಲ್ಲಿ ಸಂಪನ್ನಗೊಳ್ಳಲಿದೆ. ೧೫ಕ್ಕೂ ಹೆಚ್ಚು ಜನಪದ ವಾದ್ಯಗೋಷ್ಠಿಗಳು ಶೋಭಾಯಾತ್ರೆಗೆ ಮೆರಗು ನೀಡಲಿವೆ.

ದೇವಸ್ಥಾನ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕ ಮನೋಹರ್ ಮಠದ್ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಲಿದ್ದು, ಡಾ.ಮಹೇಶ್ವರ ಶ್ರೀ, ರುದ್ರಮುನಿ ಶ್ರೀ, ಹಾಲಸಿದ್ದೇಶ್ವರ ಶ್ರೀ, ಚರಂತೇಶ್ವರ ಶ್ರೀ, ಶಿವಮಹಾಂತ ಶ್ರೀ ಧರ್ಮೋಪದೇಶ ನೀಡಲಿದ್ದಾರೆ.