ಹಾಜಬ್ಬರ ನ್ಯೂಪಡ್ಪು ಪಿಯು ಕಾಲೇಜು : ಜಾಗ ಇದ್ದರೂ ಕಟ್ಟಡ ನಿರ್ಮಿಸಲು ಕಾಸು ಸಿಕ್ಕಿಲ್ಲ

| N/A | Published : Apr 14 2025, 01:28 AM IST / Updated: Apr 14 2025, 12:19 PM IST

ಹಾಜಬ್ಬರ ನ್ಯೂಪಡ್ಪು ಪಿಯು ಕಾಲೇಜು : ಜಾಗ ಇದ್ದರೂ ಕಟ್ಟಡ ನಿರ್ಮಿಸಲು ಕಾಸು ಸಿಕ್ಕಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಹಾಜಬ್ಬರ ನ್ಯೂಪಡ್ಪು ಶಾಲೆಗೆ ಕಳೆದ ವರ್ಷ ಸರ್ಕಾರ ಪದವಿ ಪೂರ್ವ ವಿಭಾಗವನ್ನು ಮಂಜೂರುಗೊಳಿಸಿತ್ತು. ಅಲ್ಲದೆ ಅದೇ ಶೈಕ್ಷಣಿಕ ವರ್ಷದಿಂದ ತರಗತಿ ಆರಂಭಿಸಲು ಅನುಮತಿಯನ್ನೂ ನೀಡಿತ್ತು.  

ವಿಶೇಷ ವರದಿ

 ಮಂಗಳೂರು : ಅಕ್ಷರಸಂತ, ‘ಕನ್ನಡಪ್ರಭ ವರ್ಷದ ವ್ಯಕ್ತಿ’ ಹರೇಕಳ ಹಾಜಬ್ಬರ ಭಗೀರಥ ಪ್ರಯತ್ನದ ಫಲವಾಗಿ 2024ರಲ್ಲಿ ಮಂಗಳೂರು ಹೊರವಲಯದ ಕುಗ್ರಾಮ ನ್ಯೂಪಡ್ಪು ಸರ್ಕಾರಿ ಹೈಸ್ಕೂಲ್‌ಗೆ ಪದವಿಪೂರ್ವ ವಿಭಾಗ ಮಂಜೂರುಗೊಂಡಿದೆ. ಪ್ರಥಮ ವರ್ಷ ತರಗತಿಯೂ ನಡೆದಿದೆ. ಈ ಬಾರಿ ಎರಡನೇ ವರ್ಷದ ತರಗತಿ ಆರಂಭವಾಗಲಿದೆ. ಸ್ವಂತ ಜಾಗ ಇದ್ದರೂ ಹೊಸ ಕಟ್ಟಡ ನಿರ್ಮಿಸಲು ಕಾಸು ಇಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲೇ ಈ ವರ್ಷವೂ ಹೈಸ್ಕೂಲ್‌ನ ಹಳೆ ಕಟ್ಟಡದಲ್ಲಿ ತರಗತಿ ನಡೆಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಹಾಜಬ್ಬರ ನ್ಯೂಪಡ್ಪು ಶಾಲೆಗೆ ಕಳೆದ ವರ್ಷ ಸರ್ಕಾರ ಪದವಿ ಪೂರ್ವ ವಿಭಾಗವನ್ನು ಮಂಜೂರುಗೊಳಿಸಿತ್ತು. ಅಲ್ಲದೆ ಅದೇ ಶೈಕ್ಷಣಿಕ ವರ್ಷದಿಂದ ತರಗತಿ ಆರಂಭಿಸಲು ಅನುಮತಿಯನ್ನೂ ನೀಡಿತ್ತು.

ಕಳೆದ ಜೂನ್‌ನಲ್ಲಿ ಶೈಕ್ಷಣಿಕ ತರಗತಿ ಆರಂಭವಾಗಿದ್ದು, ಮೊದಲ ವರ್ಷ ಕಲಾ ವಿಭಾಗದಲ್ಲಿ 19 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಒಬ್ಬರನ್ನು ಪ್ರಭಾರ ಪ್ರಾಂಶುಪಾಲರಾಗಿ ನೇಮಕ ಮಾಡಲಾಗಿದೆ. ಇನ್ನೊಬ್ಬರು ಅತಿಥಿ ಉಪನ್ಯಾಸಕರಿದ್ದಾರೆ. ಸ್ವಂತ ಕಟ್ಟಡ ಇಲ್ಲದ ಕಾರಣ ನ್ಯೂಪಡ್ಪು ಹೈಸ್ಕೂಲ್‌ನ ಹಳೆ ಕಟ್ಟಡದಲ್ಲೇ ಪಿಯು ತರಗತಿ ಆರಂಭಿಸಲಾಗಿದೆ.

ಪ್ರಥಮ ಪಿಯು ತರಗತಿ ಮುಕ್ತಾಯಗೊಂಡಿದ್ದು, 19ರಲ್ಲಿ 16 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ವರ್ಷ ದ್ವಿತೀಯ ಪಿಯು ಪ್ರವೇಶವಾಗಲಿದ್ದು, ಪ್ರಥಮ ಪಿಯುಗೆ ವಾಣಿಜ್ಯ ವಿಭಾಗ ಕೂಡ ಕಾರ್ಯಾರಂಭಿಸಲಿದೆ. ಇದಕ್ಕಾಗಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ನಡೆಯುತ್ತಿದೆ.

ಜಾಗ ಇದೆ, ಕಟ್ಟಡಕ್ಕೆ ಕಾಸು ಸಿಕ್ಕಿಲ್ಲ:

ನ್ಯೂಪಡ್ಪು ಹೈಸ್ಕೂಲ್‌ ಸಮೀಪವೇ ರಸ್ತೆಯ ಬದಿಯಲ್ಲಿ ಕಳೆದ ವರ್ಷವೇ ಪಿಯು ಕಾಲೇಜಿಗೆ ಹೊಸ ಕಟ್ಟಡಕ್ಕೆ ಜಾಗ ಗುರುತಿಸಲಾಗಿದೆ. ಜಾಗವನ್ನು ಪಿಯು ಕಾಲೇಜು ಹೆಸರಿಗೆ ಆರ್‌ಟಿಸಿ ನೋಂದಣಿ ಕೂಡ ಮಾಡಿಸಲಾಗಿದೆ. ಪಿಯು ಕಾಲೇಜಿಗೆ ಕಂಪೌಂಡ್‌ ರಚನೆ ಸೇರಿದಂತೆ ಮೂಲಸೌಕರ್ಯಗಳು ಬಾಕಿ. ಇದಕ್ಕಾಗಿ ದಾನಿಗಳ 10 ಲಕ್ಷ ರು. ನೆರವನ್ನು ಕಾದಿರಿಸಿದರೂ ಅದು ಸಾಕಾಗದು. ಈ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸಲು ಅನುದಾನ ನೀಡುವುದಾಗಿ ಸರ್ಕಾರ ಆಗಲೇ ಭರವಸೆ ನೀಡಿತ್ತು, ಅದು ಇನ್ನೂ ಈಡೇರಿಲ್ಲ. ಹಾಗಾಗಿ ಈ ವರ್ಷ ಪಿಯು ತರಗತಿ ಮತ್ತೆ ಅದೇ ಹಳೆ ಶಾಲಾ ಕಟ್ಟಡದಲ್ಲೇ ನಡೆಸಬೇಕಾಗಿದೆ. 

ಎಲ್ಲರ ಸಹಕಾರದಿಂದ ನ್ಯೂಪಡ್ಪುವಿಗೆ ಪಿಯು ಕಾಲೇಜು ಕಳೆದ ವರ್ಷ ಮಂಜೂರಾಗಿ ತರಗತಿಯೂ ಆರಂಭವಾಗಿದೆ. ಈ ಕಾಲೇಜಿಗೆ ಸ್ವಂತ ಜಾಗ ಕಾದಿರಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಪ್ರಾಂಶುಪಾಲರು, ಉಪನ್ಯಾಸಕರ ಕೊಠಡಿ, ತರಗತಿ ಕೋಣೆ ಸೇರಿ ಆರಂಭಿಕವಾಗಿ ಸುಮಾರು ಆರು ಕೊಠಡಿಗಳ ಅವಶ್ಯಕತೆ ಇದೆ.

-ಹರೇಕಳ ಹಾಜಬ್ಬ, ಪಿಯು ಕಾಲೇಜು ಸ್ಥಾಪನೆಯ ರೂವಾರಿ.

 ಈ ಪರಿಸರದ ಮುಡಿಪು, ಮೊಂಟೆಪದವು, ದೇರಳಕಟ್ಟೆಗಳಿಗೂ ಪಿಯು ಕಾಲೇಜು ಮಂಜೂರಾಗಿದೆ. ಈ ಪೈಕಿ ದೇರಳಕಟ್ಟೆ, ನ್ಯೂಪಡ್ಪು ಪಿಯು ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ತಲಾ 1 ಕೋಟಿ ರು. ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ವಿವಿಧ ಕಂಪನಿಗಳ ಸಿಎಸ್‌ಆರ್‌ ನಿಧಿ ಬಳಕೆಗೆ ಜಿಲ್ಲಾಡಳಿತ ಮೂಲಕ ಪ್ರಯತ್ನ ನಡೆಯುತ್ತಿದೆ.

-ಯು.ಟಿ.ಖಾದರ್‌ ಫರೀದ್‌, ಸ್ಪೀಕರ್‌ ಹಾಗೂ ಸ್ಥಳೀಯ ಶಾಸಕ.