ಹಾಲಾಡಿ ಚಾರ್ಮ್ ಇನ್ನೂ ಕಡಿಮೆಯಾಗಿಲ್ಲ!

| Published : Oct 16 2024, 12:35 AM IST

ಸಾರಾಂಶ

ಇತರ ಮಾಜಿಗಳು ವೇದಿಕೆ ಹತ್ತಿ ಕುಳಿತಿದ್ದರೆ, ಹಾಲಾಡಿ ಅವರನ್ನು ನಿರೂಪಕರು, ಸ್ವಾಗತಕಾರರು ಪದೇಪದೆ ಕರೆದರೂ ವೇದಿಕೆಗೆ ಹೋಗದೇ ಜನರ ಮಧ್ಯೆ ಕುಳಿತ್ತಿದ್ದರು. ಅವರಿಗೆ ಸ್ವಾಗತ ಕೋರಿದಾಗಲಂತೂ ಸಭಿಕರು ಉಳಿದವರಿಗಿಂತಲೂ ಹೆಚ್ಚು ಚಪ್ಪಾಳೆ ಹೊಡೆದು ತಮ್ಮ ಅಭಿಮಾನವನ್ನು ತೋರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಬಿಜೆಪಿಯಲ್ಲಿ ಕುಂದಾಪುರದಿಂದ ಅಜೇಯ 5 ಬಾರಿ ಶಾಸಕರಾಗಿ, 6ನೇ ಬಾರಿ ತಾವಾಗಿಯೇ ಸೀಟು ಬಿಟ್ಟುಕೊಟ್ಟ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮದೇ ಆದ ಚಾರ್ಮ್ ಹೊಂದಿರುವವರು. ಪ್ರಸ್ತುತ ರಾಜಕೀಯದಿಂದ ದೂರವಾಗಿದ್ದರೂ ಇನ್ನೂ ತಮ್ಮ ಚಾರ್ಮ್ ಕಳೆದುಕೊಂಡಿಲ್ಲ ಎಂಬುದಕ್ಕೆ ಮಂಗಳ‍ವಾರ ಇಲ್ಲಿನ ಅಮೃತ್ ಗಾರ್ಡನ್‌ನಲ್ಲಿ ಬಿಜೆಪಿ ವತಿಯಿಂದ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಸಮಾವೇಶ ಸಾಕ್ಷಿಯಾಯಿತು.

ಇತರ ಮಾಜಿಗಳು ವೇದಿಕೆ ಹತ್ತಿ ಕುಳಿತಿದ್ದರೆ, ಹಾಲಾಡಿ ಅವರನ್ನು ನಿರೂಪಕರು, ಸ್ವಾಗತಕಾರರು ಪದೇಪದೆ ಕರೆದರೂ ವೇದಿಕೆಗೆ ಹೋಗದೇ ಜನರ ಮಧ್ಯೆ ಕುಳಿತ್ತಿದ್ದರು. ಅವರಿಗೆ ಸ್ವಾಗತ ಕೋರಿದಾಗಲಂತೂ ಸಭಿಕರು ಉಳಿದವರಿಗಿಂತಲೂ ಹೆಚ್ಚು ಚಪ್ಪಾಳೆ ಹೊಡೆದು ತಮ್ಮ ಅಭಿಮಾನವನ್ನು ತೋರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮ ಭಾಷಣದ ಆರಂಭದಲ್ಲಿಯೇ ಹಾಲಾಡಿ ಅವರನ್ನು ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಹೋಲಿಸಿದಾಗಲಂತೂ ಬಹಳ ಹೊತ್ತು ಚಪ್ಪಾಳೆ ಬಿತ್ತು.

ಸಮಾವೇಶದ ಕೊನೆಗೆ ದ.ಕ., ಉಡುಪಿ ವಿಧಾನ ಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು ನೇರವಾಗಿ ಹಾಲಾಡಿ ಕುಳಿತ್ತಿದ್ದಲ್ಲಿ ತೆರಳಿ ಆಶೀರ್ವಾದ ಪಡೆದರು. ಹಾಲಾಡಿ, ಅವರನ್ನು ಮೈದಡವಿ ಶುಭ ಹಾರೈಸಿದರು.