ಮಾಜಿ ಪ್ರಧಾನಿ ದೇವೇಗೌಡರು ರೈತರ ಪರ ಧ್ವನಿ ಎತ್ತಿ ತಾವೇ ಖುದ್ದಾಗಿ ಹೋರಾಟಕ್ಕೆ ಇಳಿಯುವುದಾಗಿ ತಿಳಿಸಿದ್ದಾರೆ. ರೈತರ ಹಲವು ಸಮಸ್ಯೆಗಳ ಬಗ್ಗೆ ಕುಮಾರಸ್ವಾಮಿಯವರು ಈಗಾಗಲೇ ರಾಜ್ಯದಲ್ಲಿ ಬೆಳಕು ಚೆಲ್ಲಿದ್ದಾರೆ. ನೈಸ್ ಸಂಸ್ಥೆ ಮುಖ್ಯಸ್ಥರು ರೈತರಿಗೆ ಬಹಳ ಅನ್ಯಾಯ ಮಾಡಿರುವುದನ್ನು ವಿವರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೆ.29ರಂದು ಹೋಬಳಿಯ ವಿವಿಧ ಗ್ರಾಮಗಳ ಬರ ಪ್ರದೇಶಗಳಿಗೆ ಭೇಟಿ ನೀಡಿ ರೈತರೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಅವರು ಮದ್ದೂರು ರಸ್ತೆಯ ಎನ್.ಕೋಡಿಹಳ್ಳಿ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ಬರ ಪ್ರದೇಶಗಳನ್ನು ವೀಕ್ಷಿಸಿದ ನಂತರ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.

ಹೋಬಳಿಯ ಎನ್.ಕೋಡಿಹಳ್ಳಿ, ಒಡೆಯರ್ ಬಸಾಪುರ, ವಳಗೆರೆದೊಡ್ಡಿ ಮಾರ್ಗವಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಬಳಿಕ ತೆರೆದ ವಾಹನದ ಮೂಲಕ ಹಲಗೂರಿನ ಪ್ರಮುಖ ವೃತ್ತಕ್ಕೆ ತೆರಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ರೈತರ ಸಂಕಷ್ಟವನ್ನು ನೇರವಾಗಿ ತಿಳಿದುಕೊಂಡು ಅವರ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.

ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಬಿಡದಿ ಟೌನ್ ಶಿಪ್ ರೈತರ ಪಾಲಿಗೆ ಮರಣ ಶಾಸನವನ್ನು ಬರೆಯಲು ಹೊರಟಿದೆ. ಇದಕ್ಕಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಹೋರಾಟ ನಡೆಸುತ್ತಿದ್ದಾರೆ ಎಂದರು.

ಮಾಜಿ ಪ್ರಧಾನಿ ದೇವೇಗೌಡರು ರೈತರ ಪರ ಧ್ವನಿ ಎತ್ತಿ ತಾವೇ ಖುದ್ದಾಗಿ ಹೋರಾಟಕ್ಕೆ ಇಳಿಯುವುದಾಗಿ ತಿಳಿಸಿದ್ದಾರೆ. ರೈತರ ಹಲವು ಸಮಸ್ಯೆಗಳ ಬಗ್ಗೆ ಕುಮಾರಸ್ವಾಮಿಯವರು ಈಗಾಗಲೇ ರಾಜ್ಯದಲ್ಲಿ ಬೆಳಕು ಚೆಲ್ಲಿದ್ದಾರೆ. ನೈಸ್ ಸಂಸ್ಥೆ ಮುಖ್ಯಸ್ಥರು ರೈತರಿಗೆ ಬಹಳ ಅನ್ಯಾಯ ಮಾಡಿರುವುದನ್ನು ವಿವರಿಸಿದ್ದಾರೆ ಎಂದರು.

ರೈತರ ಜಮೀನುಗಳನ್ನು ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ದನಿ ಎತ್ತಲು ಜಿಲ್ಲಾ ಮಟ್ಟದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಮಳವಳ್ಳಿ ತಾಲೂಕು ಹಾಗೂ ಮಂಡ್ಯ ಜಿಲ್ಲೆಯ ಜೆಡಿಎಸ್ ಪಕ್ಷದ ಮಾಜಿ ಮಂತ್ರಿಗಳಾದ ಡಿ.ಸಿ.ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಶಾಸಕ ಎಚ್.ಟಿ.ಮಂಜು, ಮುಖಂಡ ರಾಮಚಂದ್ರು, ವಿಧಾನಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಸದಸ್ಯ ಶ್ರೀಕಂಠೇಗೌಡರು ಭಾಗವಹಿಸುವರು ಎಂದರು.

ಇವರೊಂದಿಗೆ ಮಳವಳ್ಳಿ ತಾಲೂಕು ಸ್ಥಳೀಯ ಮುಖಂಡರು, ಜಿಪಂ ಮಾಜಿ ಅಧ್ಯಕ್ಷರು, ಸದಸ್ಯರು, ತಾಪಂ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು, ಪುರಸಭಾ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಹಲವಾರು ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ನಿಖಿಲ್ ಕುಮಾರಸ್ವಾಮಿಯವರ ಜೊತೆಗೆ ರೈತ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಈ ವೇಳೆ ಜಿಪಂ ಮಾಜಿ ಸದಸ್ಯ ರವಿ ಕಂಸಾಗರ,. ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ತಮ್ಮಣ್ಣಗೌಡ, ಕರಲಕಟ್ಟೆ ಸುರೇಶ್, ಗ್ರಾಪಂ ಮಾಜಿ ಸದಸ್ಯ ರವೀಶ, ಶಿವಕುಮಾರ್ (ಮಂಚ),ರಾಮಣ್ಣ, ಸದಾಶಿವ, ಜಯರಾಮು, ನಾಗರಾಜು ಹಲವರು ಇದ್ದರು.