ವಚನ ಸಾಹಿತ್ಯಕ್ಕೆ ಹಳಕಟ್ಟಿ ಕೊಡುಗೆ ಅಪಾರ: ಆನೆಗುಂದಿ

| Published : Jul 03 2024, 12:21 AM IST

ವಚನ ಸಾಹಿತ್ಯಕ್ಕೆ ಹಳಕಟ್ಟಿ ಕೊಡುಗೆ ಅಪಾರ: ಆನೆಗುಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರ ನಗರದ ಮಾತೃ ಛಾಯಾ ಶಿಕ್ಷಣ ಸಂಸ್ಥೆಯಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಶಹಾಪುರ

12ನೇ ಶತಮಾನದ ಶರಣರ ವಚನಗಳನ್ನು ಮುದ್ರಿಸಿ, ಈ ನಾಡಿಗೆ ಪರಿಚಯಿಸುವುದರ ಮೂಲಕ ವಚನ ಸಾಹಿತ್ಯಕ್ಕೆ ಹೊಸ ಮೆರಗನ್ನು ತಂದುಕೊಟ್ಟವರು ಡಾ.ಫ.ಗು. ಹಳಕಟ್ಟಿಯವರು ಆದ್ದರಿಂದ ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದು ಹಿರಿಯರಾದ ಸಿದ್ದಲಿಂಗಣ್ಣ ಆನೆಗುಂದಿ ಹೇಳಿದರು.

ನಗರದ ಮಾತೃಛಾಯಾ ಶಿಕ್ಷಣ ಸಂಸ್ಥೆಯಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ನಡೆದ ವಚನಗಳ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನಾಚರಣೆ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಕತ್ತಲೆಯಲ್ಲಿರುವ ವಚನ ಸಾಹಿತ್ಯವನ್ನು ಬೆಳಕಿನೆಡೆಗೆ ತಂದು ಪ್ರತಿಯೊಬ್ಬರಿಗೂ ಮುಟ್ಟುವಂತೆ ಮಾಡಿದ ಶ್ರೇಯಸ್ಸು ಇವರದಾಗಿದೆ ಎಂದರು.

ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ, ಹಳಕಟ್ಟಿಯವರು ಶರಣರ ವಚನ ಸಾಹಿತ್ಯ ಮತ್ತು ತತ್ವ, ಸಿದ್ಧಾಂತಗಳನ್ನು ಪ್ರಚಾರ ಮಾಡುವುದೇ ತಮ್ಮ ಕಾಯಕ ಮಾಡಿಕೊಂಡು ಹಗಲಿರಲು ಶ್ರಮಿಸುತ್ತಾ, ತಮ್ಮ ಸ್ವಂತ ಮನೆಯನ್ನೆ ಮಾರಾಟ ಮಾಡಿ ವಚನ ಸಾಹಿತ್ಯ ಮುದ್ರಣ ಮಾಡಿ ಬಸವಾದಿ ಶರಣರ ವಿಚಾರಧಾರೆಗಳನ್ನು ಈ ನಾಡಿನಲ್ಲಿ ಬಿತ್ತುವ ಕೆಲಸ ಅಂದು ಅಗಲಿರುಳು ಮಾಡಿದ್ದಾರೆ. ನಿಜಕ್ಕೂ ಇವರ ಕಾರ್ಯ ಶ್ಲಾಘನೀಯವಾದದ್ದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ, ಶರಣರ ವಚನಗಳು ವಿದ್ಯಾರ್ಥಿಗಳು ಓದಿ ಅರ್ಥೈಸಿಕೊಂಡು, ಅವರ ಮೌಲ್ಯಯುತ ಚಿಂತನೆಗಳನ್ನು ನಾವು ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದೆ, ಆದರೆ ನಾವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಸಂಸ್ಥೆಯ ಮುಖ್ಯಸ್ಥರಾದ ತಿಪ್ಪಣ್ಣ ಖ್ಯಾತನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ವಿದ್ಯಾರ್ಥಿಗಳಾದ ಈರಣ್ಣ, ಪ್ರಕೃತಿ, ಪರಶುರಾಮ, ಚಿದಾನಂದ, ಶ್ರುತಿ, ಹೇಮಂತ್, ಭವಿತಾ ಇವರಿಂದ ವಚನ ಕಂಠ ಪಾಠ ಮಾಡಿಸಲಾಯಿತು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ದ್ರಾಕ್ಷಾಯಿಣಿ ಡಾ. ಪ್ರಿಯಾ, ಶಾಲಾ ಶಿಕ್ಷಕಿರಾದ ಮೀನಾಕ್ಷಿ, ಭಾವನ, ಮೇಘಾ ಇತರರಿದ್ದರು. ರೇಣುಕಾ ಸ್ವಾಗತಿಸಿದರು. ಭಾಗ್ಯಶ್ರೀ ಘನಾತೆ ನಿರೂಪಿಸಿ, ವಂದಿಸಿದರು.