ಪರಾರಿಯಾಗಿದ್ದವರನ್ನು ಬಂಧಿಸಿದ ಹಲಸೂರು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಮದ್ಯದ ಅಮಲಿನಲ್ಲಿ ಅವಾಚ್ಯವಾಗಿ ನಿಂದಿಸಿದ ಎಂಬ ಕಾರಣಕ್ಕೆ ಕೋಪಗೊಂಡು ಸ್ನೇಹಿತನನ್ನೇ ಕೊಲೆಗೈದು ಪರಾರಿಯಾಗಿದ್ದ ಐವರು ಆರೋಪಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಮ್ಮಲೂರಿನ ಎಸ್.ಸಂತೋಷ್(36), ಇಂದಿರಾನಗರದ ಎಂ.ಪವನ್ ಕುಮಾರ್ (26), ತಿಪ್ಪಸಂದ್ರ ರಂಜಿತ್ ಕುಮಾರ್ (33), ದೊಮ್ಮಲೂರು ಲೇಔಟ್ ನಿವಾಸಿ ಜೆ.ವಿನೋದ್ ಮ್ಯಾಥ್ಯೂವ್(35) ಮತ್ತು ರಂಗನಾಥ್(41) ಬಂಧಿತರು. ಆರೋಪಿಗಳು ಸ್ನೇಹಿತನಾದ ಶಿವಾಜಿನಗರ ನಿವಾಸಿ ಸತೀಶ್‌ ಕುಮಾರ್‌ ಎಂಬಾತನ ಮೇಲೆ ಏ.19ರಂದು ರಾತ್ರಿ ದೊಮ್ಮಲೂರಿನಲ್ಲಿ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದರು . ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಹಾಗೂ ಕೊಲೆಯಾದ ಸತೀಶ್‌ ಪರಸ್ಪರ ಸ್ನೇಹಿತರು. ಸತೀಶ್‌ ಫುಡ್‌ ಡೆಲಿವರಿ ಕೆಲಸ ಮಾಡುತ್ತಿದ್ದ. ಏ.19ರಂದು ಕಾರ್ಯಕ್ರಮ ನಿಮಿತ್ತ ಶಿವಾಜಿನಗರದಿಂದ ದೊಮ್ಮಲೂರಿಗೆ ತೆರಳಿದ್ದ. ಅದೇ ಕಾರ್ಯಕ್ರಮಕ್ಕೆ ಆರೋಪಿಗಳೂ ಬಂದಿದ್ದರು. ಈ ವೇಳೆ ಸ್ನೇಹಿತರೆಲ್ಲಾ ಒಟ್ಟಾಗಿ ಮದ್ಯ ಸೇವಿಸಲು ದೊಮ್ಮಲೂರಿನ ಬಿಡಿಎ ಪಾರ್ಕ್‌ ಬಳಿ ತೆರಳಿದ್ದಾರೆ.

ಮದ್ಯ ಸೇವಿಸಿ ನಿಂದಿಸಿದ್ದಕ್ಕೆ ಕೊಲೆ:

ಎಲ್ಲರೂ ಕಂಠಮಟ್ಟ ಮದ್ಯ ಸೇವಿಸಿದ್ದಾರೆ. ಈ ವೇಳೆ ಮದ್ಯದ ಅಮಲಿನಲ್ಲಿ ಸತೀಶ್‌, ಸಂತೋಷ್‌ ಮತ್ತು ಪವನ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇತರರನ್ನು ಕೆಟ್ಟದಾಗಿ ಬೈದಿದ್ದಾನೆ. ಈ ವೇಳೆ ಜಗಳ ಶುರುವಾಗಿದೆ. ಈ ವೇಳೆ ಆಕ್ರೋಶಗೊಂಡ ಆರೋಪಿಗಳು ಸಿಮೆಂಟ್‌ ಇಟ್ಟಿಗೆ ತೆಗೆದು ಸತೀಶ್‌ ತಲೆ ಮೇಲೆ ಎತ್ತಿ ಹಾಕಿ ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.