ಏ. 2ರಂದು ಸಂಜೆ 5.31ಕ್ಕೆ ಹಾಲೇಶ್ವರ ಮಹಾರಥೋತ್ಸವ ಜರುಗಲಿದೆ.
ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: ದಾಸೋಹ, ಭಾವೈಕ್ಯತೆಯಿಂದ ಈ ಭಾಗದಲ್ಲಿ ಮನೆಮಾತಾಗಿರುವ ಶೈಕ್ಷಣಿಕ ಕ್ರಾಂತಿ ಮಾಡಿರುವ ಹಾಲೇಶ್ವರ ಕೃಪಾಪೋಷಿತ ಶಿವಯೋಗಾಶ್ರಮದ 48ನೇ ಜಾತ್ರಾ ಮಹೋತ್ಸವ ಹಾಲೇಶ್ವರ ಶಿವಶರಣರ ನೇತೃತ್ವದಲ್ಲಿ ಏ. 1ರಿಂದ ಅದ್ಧೂರಿಯಾಗಿ ಜರುಗಲಿದೆ.ಏ. 1ರಂದು ನೆಗಳೂರಿನ ಲಿಂ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಅನುಗ್ರಹದಿಂದ ಹಾಲೇಶ್ವರ ಕರ್ತೃ ಗದ್ದುಗೆ ಹಾಗೂ ದುರ್ಗಾದೇವಿ ಮೂರ್ತಿಗೆ ವೇ.ಮೂ. ಮಲ್ಲಯ್ಯ ಶಿವಯ್ಯ ಹಿರೇಮಠರಿಂದ ರುದ್ರಾಭಿಷೇಕ ನೆರವೇರಲಿದೆ. ಏ. 1ರಂದು ಮಧ್ಯಾಹ್ನ 12.31ಕ್ಕೆ 9 ಜೋಡಿ ಸಾಮೂಹಿಕ ವಿವಾಹಗಳು ಜರುಗಲಿವೆ. ಸಾನ್ನಿಧ್ಯವನ್ನು ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು ಮತ್ತು ಪೇಠಾಆಲೂರಿನ ಹಾಲೇಶ್ವರ ಶಿವಶರಣರು ವಹಿಸುವರು. ರಾತ್ರಿ 10.35ಕ್ಕೆ ಹಾಲಶಿವಯೋಗೀಶ್ವರರ ಅಡ್ಡಪಲ್ಲಕ್ಕಿ ಹಾಗೂ ಮುಳ್ಳುಗದ್ದುಗೆ ಕಾರ್ಯಕ್ರಮ ನಡೆಯಲಿದೆ.
ಏ. 2ರಂದು ಸಂಜೆ 5.31ಕ್ಕೆ ಹಾಲೇಶ್ವರ ಮಹಾರಥೋತ್ಸವ ಜರುಗಲಿದೆ. ಬಳಿಕ ನಡೆಯುವ ಧರ್ಮಸಭೆಯ ಸಾನ್ನಿಧ್ಯವನ್ನು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು, ನೆಗಳೂರಿನ ಗುರುಶಾಂತೇಶ್ವರ ಶ್ರೀ, ಹಾಲೇಶ್ವರ ಶಿವಶರಣರು ಆಶೀರ್ವಚನ ನೀಡುವರು. ಆನಂತರ ಹಾಲಸೋಮೇಶ್ವರ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಂದ, ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರಿಂದ ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮ ಜರುಗಲಿವೆ.ಏ. 3ರಂದು ಸಂಜೆ 5.30ಕ್ಕೆ ಲಘು ರಥೋತ್ಸವ ನೆರವೇರಲಿದೆ. ಸಂಜೆ 7.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಡಾ. ಎಸ್.ಎಂ. ಮಠ, ಡಾ. ಮಹೇಶ ಕೇರಿ ಅವರು ಉಪನ್ಯಾಸ ನೀಡುವರು. ಕೊಪ್ಪಳದ ಜೈ ಕನ್ನಡ ಮೆಲೋಡಿಸ್ ಆರ್ಕೆಸ್ಟ್ರಾ ತಂಡದಿಂದ ಸಂಗೀತ ರಸಮಂಜರಿ, ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ರೊಟ್ಟಿ ಜಾತ್ರೆ: ಏ. 2ರಂದು ಈ ಭಾಗದಲ್ಲಿ ಪ್ರಥಮ ಬಾರಿಗೆ ರೊಟ್ಟಿ ಜಾತ್ರೆ ಜರುಗಲಿದೆ. ರೊಟ್ಟಿ ಜಾತ್ರೆಗೆ 4 ಕ್ವಿಂಟಲ್ ಬುಂದಿ, 3 ಕ್ವಿಂಟಲ್ ಜಿಲೇಬಿ ತಯಾರಿಸಲಾಗಿದೆ. ಅಲ್ಲದೇ 5 ಕ್ವಿಂಟಲ್ ಜೋಳದ ರೊಟ್ಟಿ ತಯಾರಿಸಿಕೊಂಡು ಭಕ್ತರು ಮಠಕ್ಕೆ ನೀಡಿದ್ದಾರೆ. ಜಾತಿ ಭೇದವಿಲ್ಲದೆ ಮನೆಯಿಂದ 200ರಿಂದ 250ಕ್ಕೂ ಹೆಚ್ಚು ರೊಟ್ಟಿ ಸಿದ್ಧಪಡಿಸಿ ಮಠಕ್ಕೆ ಪೇಠಾಆಲೂರು ಮತ್ತು ರಾಮೇನಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದವರು ಟ್ರ್ಯಾಕ್ಟರ್ ಮೂಲಕ ತಂದು ನೀಡಿದ್ದಾರೆ. 3 ಕ್ವಿಂಟಲ್ ಕರಿಹಿಂಡಿ ತಯಾರಿಸಲಾಗಿದೆ. 2 ಕ್ವಿಂಟಲ್ ಪುಂಡಿಪಲ್ಯೆಯನ್ನು ಸಹ ತಯಾರಿಸಲಾಗುವುದು. ಅನ್ನದಿಂದ ಬಾನ ಮಾಡಲಾಗುವುದು.ರೊಟ್ಟಿ ಜಾತ್ರೆ ಯಶಸ್ಸಿಗಾಗಿ ಸತತ ಎರಡು ತಿಂಗಳಿನಿಂದ ಜಾತ್ರಾ ಸಮಿತಿ ಅಧ್ಯಕ್ಷ ವೇ.ಮೂ. ಮಲ್ಲಯ್ಯ ಹಿರೇಮಠ, ಗೌರವ ಅಧ್ಯಕ್ಷ ಹಾಲಪ್ಪ ಕಬ್ಬೆರಳ್ಳಿ, ಉಪಾಧ್ಯಕ್ಷ ಹಾಲೇಶ ಸೂಡಿ, ಕಾಯದರ್ಶಿಗಳಾದ ಹಾಲಪ್ಪ ಹರ್ತಿ, ರವಿ ಸಂಶಿ, ಜಾತ್ರಾ ಸಮಿತಿ ಸದಸ್ಯರು, ಹಿರಿಯರು, ಮಹಿಳೆಯರು, ಯುವಕರು ಶ್ರಮಿಸುತ್ತಿದ್ದಾರೆ.
ಸಮ ಸಮಾಜ: ಹಾಲೇಶ್ವರ ಕೃಪಾಪೋಷಿತ ಶಿವಯೋಗಾಶ್ರಮದ 48ನೇ ಜಾತ್ರಾ ಮಹೋತ್ಸವದಲ್ಲಿ ಕಡುಬಡವರಿಗೆ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವಿನೂತನವಾಗಿ ರೊಟ್ಟಿ ಜಾತ್ರೆಯ ಮೂಲಕ ಸಮ ಸಮಾಜ ಕಟ್ಟಲು ಶ್ರಮಿಸಲಾಗುತ್ತಿದೆ ಎಂದು ಪೇಠಾಆಲೂರ ಮಠದ ಹಾಲೇಶ್ವರ ಶಿವಶರಣರು ತಿಳಿಸಿದರು.