ಒಳ ಮೀಸಲಾತಿಗೆ ಆಗ್ರಹಿಸಿ ಬಳ್ಳಾರಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ

| Published : Aug 02 2025, 12:00 AM IST

ಒಳ ಮೀಸಲಾತಿಗೆ ಆಗ್ರಹಿಸಿ ಬಳ್ಳಾರಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ನೂರಾರು ಜನರು ಬಳ್ಳಾರಿ ನಗರದಲ್ಲಿ ಶುಕ್ರವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ: ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ನೂರಾರು ಜನರು ನಗರದಲ್ಲಿ ಶುಕ್ರವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿಗಳ ಸಮುದಾಯದೊಳಗಿನ ಅತಿ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಜಾರಿಯಾಗಬೇಕಿರುವ ಒಳ ಮೀಸಲಾತಿಯ ಬೇಡಿಕೆ ಕಳೆದ ಮೂರೂವರೆ ದಶಕಗಳಿಂದ ನನೆಗುದಿಗೆ ಬಿದ್ದಿದೆ. ಈ ವರೆಗೆ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಒಳ ಮೀಸಲಾತಿ ನೀಡುವಲ್ಲಿ ವಿಫಲವಾಗಿವೆ. ಬರೀ ಭರವಸೆಗಳನ್ನು ನೀಡಿ ಸಮಾಧಾನ ಪಡಿಸುತ್ತಿರುವ ರಾಜಕೀಯ ಪಕ್ಷಗಳು ಪರಿಶಿಷ್ಟರ ಕಾಳಜಿ ಮರೆತಿವೆ ಎಂದು ಪ್ರತಿಭಟನಾಕಾರರು ದೂರಿದರು.

ಸಾಮಾಜಿಕ ಅಸಮಾನತೆಯನ್ನು ಸರಿಪಡಿಸಲು 2024ರ ಆ. 1ರಂದು ಸರ್ವೋಚ್ಚ ನ್ಯಾಯಾಲಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಆದೇಶವನ್ನು ನೀಡಿದೆ. ಆದರೆ, ಕರ್ನಾಟಕ ಸರ್ಕಾರ ಈ ಸರ್ವೋಚ್ಚ ನ್ಯಾಯಾಲಯದ ತೀರ್ಪುನ್ನು ಜಾರಿಗೊಳಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದು ನಮ್ಮ ಸಮುದಾಯದಲ್ಲಿ ತೀವ್ರ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ವಿಳಂಬ ನೀತಿಯಿಂದಾಗಿ ನಮ್ಮ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ಹಾಗೂ ಒಟ್ಟಾರೆ ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಎಚ್‌. ಹನುಮಂತಪ್ಪ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪಿನ ತರುವಾಯ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ತುರ್ತು ನಿಗಾ ವಹಿಸಿ ತಮ್ಮ ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿ ಸಾಮಾಜಿಕ ನ್ಯಾಯದ ವಿಷಯದಲ್ಲಿ ಮೇಲ್ಪಂಕ್ತಿ ಆಗಿದೆ. ಆದರೆ ಕರ್ನಾಟಕ ಸರ್ಕಾರ ತೀವ್ರವಾದ ವಿಳಂಬ ನೀತಿ ಅನುಸರಿಸುತ್ತಿದ್ದು, ಪರಿಶಿಷ್ಟ ಜಾತಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಾದಿಗ ಮತ್ತು 29 ಉಪಜಾತಿಗಳಲ್ಲಿ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.

ನಾಗಮೋಹನ್ ದಾಸ್ ಆಯೋಗಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಪರಿಶಿಷ್ಟ ಜಾತಿಗಳ ನಡುವೆ ಮೀಸಲಾತಿ ಹಂಚಿಕೆಯಲ್ಲಿ ಉಂಟಾಗಿರುವ ಅಸಮಾನತೆ ಮತ್ತು ಸಮುದಾಯಗಳ ನಡುವಿನ ಹಿಂದುಳಿದಿರುವಿಕೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲು ಆಯೋಗ ಎಲ್ಲ ಇಲಾಖೆಗಳಿಗೆ ಅಗತ್ಯ ಮಾಹಿತಿಯನ್ನು ಜನವರಿಯಲ್ಲಿ ಕೇಳಿತ್ತು. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ಆರು ತಿಂಗಳಾದರೂ ಸರಿಯಾದ ಮಾಹಿತಿಗಳು ಆಯೋಗಕ್ಕೆ ಬಂದಿಲ್ಲ. ಮೂರು ವಾರದಲ್ಲಿ ಸಮೀಕ್ಷೆ ಮುಗಿಸಿ ವರದಿ ಸಿದ್ಧಪಡಿಸಲಾಗುವುದು ಎಂಬ ಸರ್ಕಾರದ ಹೇಳಿಕೆ ಕಿಮ್ಮತ್ತು ಕಳೆದುಕೊಂಡಿದೆ ಎಂದು ತಿಳಿಸಿದರಲ್ಲದೆ, ತಕ್ಷಣ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಬೇಕು. ಆ. 11ರಿಂದ ವಿಧಾನ ಮಂಡಲಗಳ ಅಧಿವೇಶನ ಆರಂಭವಾಗುತ್ತಿದ್ದು, ಅಷ್ಟರೊಳಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳದೇ ಹೋದರೆ ಜನಾಕ್ರೋಶ ಉಗ್ರ ಸ್ವರೂಪ ತಾಳುವುದು ನಿಶ್ಚಿತ ಎಂದು ಎಚ್ಚರಿಸಿದರು.

ಇಲ್ಲಿನ ಜಿಲ್ಲಾ ಅಂಬೇಡ್ಕರ್ ಕಚೇರಿಯಿಂದ ಅರೆಬೆತ್ತಲೆಯಲ್ಲಿ ಮೆರವಣಿಗೆ ಹೊರಟ ಪರಿಶಿಷ್ಟ ಜಾತಿಯ ನೂರಾರು ಜನರು ಗಡಗಿ ಚನ್ನಪ್ಪ ವೃತ್ತದಲ್ಲಿ ಕೆಲವು ಹೊತ್ತು ಕುಳಿತು ಪ್ರತಿಭಟಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಹೊರಟು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಕಳುಹಿಸಿಕೊಟ್ಟರು. ಒಕ್ಕೂಟದ ಜಿಲ್ಲಾ ಪ್ರಮುಖರಾದ ರಾಜೇಶ, ಬೆಳಗಲ್ಲು ಹುಲುಗಪ್ಪ, ಪ್ರಸಾದ, ಅರುಣಾಚಲಂ, ಎ. ಈಶ್ವರಪ್ಪ, ಸಿ. ಸೋಮಶೇಖರ, ದುರಗಪ್ಪ ತಳವಾರ, ನೆಟ್ಟೆಪ್ಪ, ನರಸಪ್ಪ, ಶಿವಶಂಕರ, ಷಣ್ಮುಖಪ್ಪ, ಪಂಪಾಪತಿ ಮತ್ತಿತರರಿದ್ದರು.