ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷದ ಬಜೆಟ್‌ನಲ್ಲಿ ನೀಡಿದ ಕೊಡುಗೆಗಳು ಭಾಗಶಃ ಈಡೇರಿದ್ದು ಸರ್ಕಾರದ ಕಾಳಜಿಗಳು ಸಾಕಾರದ ಹಾದಿಯತ್ತ ಮುಖ ಮಾಡಿವೆ. ಸರ್ಕಾರಿ ಮೆಡಿಕಲ್ ಕಾಲೇಜು ಪೂರ್ಣ, ಸಾರ್ವಜನಿಕ ಆರೋಗ್ಯ ಲ್ಯಾಬ್ ಕಾರ್ಯಾರಂಭದ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ವೈದ್ಯಕೀಯ ಕಾಲೇಜು ಕಟ್ಟಡದ ಕಾಮಗಾರಿ ಆರಂಭವಾಗಿದ್ದರೆ ಚಳ್ಳಕೆರೆ ಮತ್ತು ಮೊಳಕಾಲ್ಮೂರಲ್ಲಿ ಲ್ಯಾಬ್ ಗಳು ಕಾರ್ಯಾರಂಭ ಮಾಡಿವೆ. ಆದರೆ ಚಿತ್ರದುರ್ಗದಲ್ಲಿ ಈಗ ತಾನೇ ಕಟ್ಟಡ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ.ಚಿತ್ರದುರ್ಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕೆಂಬ ಬೇಡಿಕೆ ಹಲವು ದಶಕಗಳಿಂದ ಇತ್ತು. ಕೊಪ್ಪಳ ಸೇರಿದಂತೆ ಇತರೆ ಕಡೆ ಮೆಡಿಕಲ್ ಕಾಲೇಜು ಆರಂಭವಾಗಿದ್ದರೂ ಚಿತ್ರದುರ್ಗ ಕಡೆಗಣನೆಗೆ ಒಳಗಾಗಿತ್ತು. ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ 500 ಕೋಟಿ ರು. ಅನುದಾನ ಕಾಯ್ದಿರಿಸಿ ಕಟ್ಟಡ ಪೂರ್ಣಗೊಳಿಸುವ ಭರವಸೆಯನ್ನು ಕಳೆದ ಬಜೆಟ್ ನಲ್ಲಿ ನೀಡಲಾಗಿತ್ತು.
ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣದ ಕಾಮಗಾರಿ ಶೇ.30ರಷ್ಟು ಪೂರ್ಣಗೊಂಡಿದ್ದು ಇದುವರೆಗೂ 80 ಕೋಟಿ ರು. ಅನುದಾನ ಖರ್ಚಾಗಿದೆ. ಕಟ್ಟಡ ಪೂರ್ಣಗೊಳಿಸಲು ಅನುದಾನದ ಕೊರತೆಯಿಲ್ಲ. ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿದಂತೆಲ್ಲ ಅನುದಾನ ಬಿಡುಗಡೆಯಾಗುತ್ತದೆ.150 ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಅವಕಾಶವಿರುವ ಮೆಡಿಕಲ್ ಕಾಲೇಜಿನಲ್ಲಿ ಈಗಾಗಲೇ ಮೊದಲ ವರ್ಷ ಶೇ.99 ರಷ್ಟು ಫಲಿತಾಂಶ ಬಂದಿದೆ. ಮತ್ತೆ 150 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ಒಟ್ಟು 300 ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿದ್ದಾರೆ. ಕಾಲೇಜಿಗೆ ಅಗತ್ಯವಾದ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ನಡೆದಿದ್ದು ಅವರುಗಳ ಆಗಮನವಾಗಬೇಕಿದೆ.
ಸಾರ್ವಜನಿಕ ಆರೋಗ್ಯ ಲ್ಯಾಬ್ ಗಳ ಆರಂಭ ಎರಡನೇ ಘೋಷಣೆಯಾಗಿ ಬಜೆಟ್‌ನಲ್ಲಿ ನಮೂದಾಗಿತ್ತು. ಚಳ್ಳಕೆರೆ, ಮೊಳಕಾಲ್ಮೂರಲ್ಲಿ ಈಗಾಗಲೇ ಲ್ಯಾಬ್ ಆರಂಭವಾಗಿದ್ದು ಚಿತ್ರದುರ್ಗದಲ್ಲಿ ಮಾತ್ರ ಕಟ್ಟಡ ನಿರ್ಮಾಣದ ಕೆಲಸ ನಡೆದಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಳೇ ಕಟ್ಟಡ ಮೇಲ್ಭಾಗದಲ್ಲಿ ಲ್ಯಾಬ್ ನಿರ್ಮಾಣಕ್ಕೆ ಕಳೆದ ಜನವರಿ 26 ರಂದು ಚಾಲನೆ ನೀಡಲಾಗಿದೆ.ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸುತ್ತಿರುವ ರಾಜ್ಯ ಬಜೆಟ್ ನಲ್ಲಿ ಚಿತ್ರದುರ್ಗ ಜಿಲ್ಲೆಯ ಜನ ಹೆಚ್ಚಿನದೇನನ್ನೂ ನಿರೀಕ್ಷೆ ಮಾಡುತ್ತಿಲ್ಲ. ಭದ್ರಾ ಮೇಲ್ದಂಡೆಗೆ ಹೆಚ್ಚಿನ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಿದರೆ ಸಾಕೆಂಬ ಮನೋಭಾವ ಜನರದ್ದು.
22 ಸಾವಿರ ಕೋಟಿ ರು. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ ಇದುವರೆಗೂ 10 ಸಾವಿರ ಕೋಟಿ ರು. ಖರ್ಚು ಮಾಡಿದೆ. ಕಾಮಗಾರಿ ಪೂರ್ಣಗೊಳ್ಲಲು ಇನ್ನೂ 15 ಸಾವಿರ ಕೋಟಿ ರು. ಬೃಹತ್ ಮೊತ್ತ ಬೇಕಾಗಿದೆ. ಕೇಂದ್ರ ಸರ್ಕಾರ ಯೋಜನೆಗೆ 5,300 ಕೋಟಿ ರು. ನುದಾನ ನೀಡುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಹಣ ಕೊಡದೇ ಉದಾಸೀನ ತೋರಿತ್ತು. ಭದ್ರಾ ಮೇಲ್ದಂಡೆ ಹಳೆ ಬಾಕಿ ಬಿಲ್ಲುಗಳು 2,200 ಕೋಟಿಯಷ್ಟಿದೆ. ರಾಜ್ಯ ಸರ್ಕಾರ ಕನಿಷ್ಟ ಐದು ಸಾವಿರ ಕೋಟಿ ರು. ಅನುದಾನ ಒದಗಿಸಿದರೆ ಕಾಮಗಾರಿಗೆ ಚುರುಕಿನ ವೇಗ ದೊರೆತಂತಾಗುತ್ತದೆ.