ಅರ್ಧಕ್ಕೆ ನಿಂತ ಕಾಮಗಾರಿ, ಪೂರ್ಣ ಬಿಲ್ ಪಾವತಿ, ತನಿಖೆಗೆ ಆಗ್ರಹ

| Published : Feb 22 2024, 01:49 AM IST

ಸಾರಾಂಶ

ತಾಲೂಕಿನ ಐಚನಹಳ್ಳಿ ಬಳಿ ಫೇವರಿಚ್ ಮೇಗಾ ಫುಡ್ ಫ್ಯಾಕ್ಟರಿ ಬಳಿ 4 ಕೋಟಿ ರು. ಅಂದಾಜು ವೆಚ್ಚದ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿದ್ದರೂ ಕಾಮಗಾರಿಯ ಬಿಲ್ ಪಾವತಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ತಾಲೂಕು ಬಿಜೆಪಿ ಮುಖಂಡ ಅಗ್ರಹಾರಬಾಚಹಳ್ಳಿ ಎ.ಪಿ.ಕೇಶವ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಐಚನಹಳ್ಳಿ ಬಳಿ ಫೇವರಿಚ್ ಮೇಗಾ ಫುಡ್ ಫ್ಯಾಕ್ಟರಿ ಬಳಿ 4 ಕೋಟಿ ರು. ಅಂದಾಜು ವೆಚ್ಚದ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿದ್ದರೂ ಕಾಮಗಾರಿಯ ಬಿಲ್ ಪಾವತಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ತಾಲೂಕು ಬಿಜೆಪಿ ಮುಖಂಡ ಅಗ್ರಹಾರಬಾಚಹಳ್ಳಿ ಎ.ಪಿ.ಕೇಶವ ಒತ್ತಾಯಿಸಿದ್ದಾರೆ. ಐಚನಹಳ್ಳಿ ಬಳಿಯ ಮೈಸೂರು ಮುಖ್ಯ ರಸ್ತೆಯಿಂದ ಬಣ್ಣೇನಹಳ್ಳಿಗೆ ಹೋಗುವ ರಸ್ತೆಯಲ್ಲಿ 4 ಪಥದ ರಸ್ತೆ ನಿರ್ಮಾಣ ಮಾಡಲು ಕಳೆದ 8 ವರ್ಷಗಳ ಹಿಂದೆ ಒಂದೇ ರಸ್ತೆಗೆ ಒಮ್ಮೆ 2 ಕೋಟಿ ಹಾಗೂ ಮತ್ತೊಮ್ಮೆ 2 ಕೋಟಿಯಂತೆ ಒಟ್ಟು ನಾಲ್ಕು ಕೋಟಿ ಹಣ ಬಳಕೆ ಮಾಡಲಾಗಿದೆ. ನಿರ್ಮಾಣ ಕಾಮಗಾರಿ ಗುತ್ತಿಗೆಯನ್ನು ಭೂ ಸೇನೆ ಪಡೆದಿದೆ. ಸುಮಾರು 1.10 ಕಿ.ಮೀ ಉದ್ದದ ಚತುಷ್ಪಥ ರಸ್ತೆಗೆ ಯೋಜನಾ ರೂಪುರೇಷೆ ಪ್ರಕಾರ ರಸ್ತೆ ಎರಡೂ ಬದಿ ಸೇವಾ ರಸ್ತೆ ಹಾಗೂ ಕಾಂಕ್ರಿಟ್ ಚರಂಡಿ ನಿರ್ಮಿಸಬೇಕು. ಆದರೆ, ರಸ್ತೆ ನಿರ್ಮಾಣ ಮಾತ್ರ ಆಗಿಲ್ಲ. ಕಳೆದ 1ವರ್ಷದ ಹಿಂದೆ ರಸ್ತೆಗೆ ಸುರಿದ ದಪ್ಪ ಜಲ್ಲಿಗಳು ಹಾಗೆ ಇದ್ದು ಜಲ್ಲಿಗಳ ನಡುವೆ ಗಿಡಗಳು ಬೆಳೆಯುತ್ತಿವೆ. ರಸ್ತೆ ಬದಿಯಲ್ಲಿ ಸೇವಾ ರಸ್ತೆ ಹೆಸರಿನಲ್ಲಿ ಮಣ್ಣಿನ ರಸ್ತೆ ತೋರಿಸಿದ್ದರೂ ರಸ್ತೆಗೆ ಆಗಮನ ಅಥವಾ ನಿರ್ಗಮನ ಭಾಗದಿಂದಾಗಲೀ ವಾಹನಗಳು ಬಂದು ಸೇರಲು ಸಂಪರ್ಕ ರಸ್ತೆಯೇ ಇಲ್ಲ. 4 ಪಥದ ರಸ್ತೆ ಮತ್ತು ಇದಕ್ಕೆ ಲಗತ್ತಾಗಿ ಸೇವಾ ರಸ್ತೆ ನಿರ್ಮಿಸಿರುವುದಾಗಿ ಈಗಾಗಲೇ ಸಂಪೂರ್ಣ 4 ಕೋಟಿ ಮೊತ್ತದ ಬಿಲ್ ಅನ್ನು ಇಲಾಖೆ ವತಿಯಿಂದ ಕೈಗೊಂಡು ಕ್ಲೈಮ್ ಮಾಡಿದ್ದು ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಸರ್ಕಾರಿ ಹಣ ಲೂಟಿ ಮಾಡಲಾಗಿದೆ. ಈ ರಸ್ತೆಯಲ್ಲಿ ರೈತರ ಎತ್ತಿನಗಾಡಿಗಳು ಓಡಾಡಲೂ ಯೋಗ್ಯವಾಗಿಲ್ಲ. ದಪ್ಪ ಜಲ್ಲಿ ಹರಡಿ ಹಾಗೇ ಕೈಬಿಟ್ಟಿರುವುದರಿಂದ ಸಾರ್ವಜನಿಕ ಸಂಚಾರಕ್ಕೂ ತೊಂದರೆಯಾಗಿದೆ. ಕಾಮಗಾರಿಯಲ್ಲಿ ಕೇವಲ 10 ರಿಂದ 15 ರಷ್ಟು ಹಣ ಖರ್ಚಾಗಿ ಉಳಿದ ಶೇ.80 ರಷ್ಟು ಭಾರಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದು ಸೂಕ್ತ ತನಿಖೆ ನಡೆಸುವಂತೆ ಅಗ್ರಹಾರಬಾಚಹಳ್ಳಿ ಎ.ಪಿ. ಕೇಶವ ಒತ್ತಾಯಿಸಿದ್ದಾರೆ.