ಬಾಟಂ* ಹಲಸಿನ ವೈಶಿಷ್ಟ್ಯತೆ ಅನಾವರಣಕ್ಕೆ ವೇದಿಕೆ ಸಜ್ಜು

| Published : Jul 10 2024, 12:40 AM IST

ಸಾರಾಂಶ

ಹಲಸಿನ ಹಬ್ಬ ವಿಶೇಷ ಕಾರ್ಯಕ್ರಮವು ಜು.13, 14ರಂದು ನಡೆಯಲಿದೆ ಎಂದು ಸೊಗಡು ಜನಪದ ಹೆಜ್ಜೆಯ ಅಧ್ಯಕ್ಷ ಸಿರಿಗಂಧ ಗುರು ತಿಳಿಸಿದರು

13ರಿಂದ ಹಲಿಸಿನ ಹಬ್ಬ ಆರಂಭ

ಹಲಸು ಅಡುಗೆ ರುಚಿ ಮತ್ತು ತೂಕದ ಹಣ್ಣು ಸ್ಪರ್ಧೆ

ನಾ ಕಂಡ ಹಲಸು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ

ಸೊಗಡು ಜನಪದ ಹೆಜ್ಜೆ ಅಧ್ಯಕ್ಷ ಸಿರಿಗಂಧ ಗುರು ಹೇಳಿಕೆ

ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಆಯೋಜನೆ

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಸೊಗಡು ಜನಪದ ಹೆಜ್ಜೆ, ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಲಸಿನ ಹಬ್ಬ ವಿಶೇಷ ಕಾರ್ಯಕ್ರಮವು ಜು.13, 14ರಂದು ನಡೆಯಲಿದೆ ಎಂದು ಸೊಗಡು ಜನಪದ ಹೆಜ್ಜೆಯ ಅಧ್ಯಕ್ಷ ಸಿರಿಗಂಧ ಗುರು ತಿಳಿಸಿದರು.

ಇಲ್ಲಿನ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲಸು ನಮ್ಮ ಆಹಾರದ ಪ್ರಮುಖ ಭಾಗವಾಗಿದ್ದು, ಹಲಸಿನ ಬಗ್ಗೆ ಮತ್ತಷ್ಟು ಮೌಲ್ಯವರ್ಧನೆ ಹೆಚ್ಚಿಸುವ ನಿಟ್ಟಿನಲ್ಲಿ ಹಲಸು ಹಬ್ಬವನ್ನು ಆಯೋಜಿಸಲಾಗಿದೆ. ಜು.13ರಂದು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಕೆ. ಷಡಕ್ಷರಿ ಉದ್ಘಾಟಿಸಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಿ.ಸಿ.ನಾಗೇಶ್, ಉಪ ವಿಭಾಗಾಧಿಕಾರಿ ಸಪ್ತಶ್ರೀ, ಕೆವಿಕೆ ಮುಖ್ಯಸ್ಥ ಗೋವಿಂದೇಗೌಡ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಚಂದ್ರಶೇಖರ್ ಮತ್ತಿತರರು ಭಾಗವಹಿಸಲಿದ್ದಾರೆ. ಪಾರಂಪರಿಕ ಹಲಸಿನ ಮರ ಸಂರಕ್ಷಕ ತಿಗಳನಹಳ್ಳಿ ಮಲ್ಲಿಕಾರ್ಜುನಯ್ಯ ಅವರನ್ನು ಸನ್ಮಾನಿಸಲಾಗುವುದು. ನಂತರ ಹಲಸು ಅಡುಗೆ ರುಚಿ ಮತ್ತು ತೂಕದ ಹಣ್ಣು ಸ್ಪರ್ಧೆ ನಡೆಯಲಿದೆ. ಜು.14ರಂದು ಹಲಸಿನ ಹಣ್ಣು ತಿನ್ನುವ ಸ್ಪರ್ಧೆ, ಹಲಸಿನ ಅಡುಗೆ ಸ್ಪರ್ಧೆ, ನಾ ಕಂಡ ಹಲಸು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು ಸ್ಪರ್ಧಿಗಳು ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದು. ಇದಲ್ಲದೆ ನುರಿತವರಿಂದ ಹಲಸಿನ ವಿವಿಧ ಖಾದ್ಯ ತಯಾರಿಕೆಯ ಪ್ರಾತ್ಯಕ್ಷಿಕೆ ಮತ್ತು ಮಾರಾಟ, ವಿವಿಧ ತಳಿಯ ಹಲಸಿನ ಸಸಿಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ ಎಂದು ತಿಳಿಸಿದರು.

ಗೌರವಾಧ್ಯಕ್ಷ ಗುಂಗರಮಳೆ ಮುರುಳೀಧರ್, ಸೊಗಡು ಉಪಾಧ್ಯಕ್ಷ ನಿಜಗುಣ, ಸಂಚಾಲಕ ಮೋಹನ್ ಬೀರಸಂದ್ರ, ಕಾರ್ಯದರ್ಶಿ ಚಿದಾನಂದ್, ಸದಸ್ಯೆ ಮಂಜುಳ ತಿಮ್ಮೇಗೌಡ, ಶ್ರೀ ಸತ್ಯಗಣಪತಿ ಸೇವಾ ಸಂಘ ಟ್ರಸ್ಟ್ ಅಧ್ಯಕ್ಷ ಶ್ರೀಕಂಠ, ರೈತ ಉತ್ಪಾದಕರ ಕಂಪನಿಯ ಮಾದಿಹಳ್ಳಿ ದಯಾನಂದ್, ನಗರಸಭೆ ಮಾಜಿ ಸದಸ್ಯ ತರಕಾರಿ ಗಂಗಾಧರ್, ಕದಳಿ ಬಳಗದ ಪ್ರಭಾವಿಶ್ವನಾಥ್, ನಿವೃತ್ತ ಪ್ರಾಂಶುಪಾಲೆ ಸಾವಿತ್ರಿ ಹೊಸಮನಿ, ಕಿರಣ್, ಯೋಗಾನಂದ್ ಬೆಳಗರಹಳ್ಳಿ ಮತ್ತಿತರು ಇದ್ದರು.