ಸಾರಾಂಶ
ಹಳಿಯಾಳ: ಕ್ಷೇತ್ರದ ಶಾಸಕರು ರೈತಪರ ಕಾಳಜಿಯಿದ್ದರೆ ಶನಿವಾರ ಹಳಿಯಾಳದಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು, ಬರಬೇಕಾಗಿದ್ದ ಬಾಕಿ ಹಣವನ್ನು, ಕಬ್ಬಿಗೆ ಯೋಗ್ಯ ದರವನ್ನು ಕೊಡಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೊಬಾಟೆ ಆಗ್ರಹಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾಯಿಸಿದ ಕ್ಷೇತ್ರದ ರೈತರ ಪರವಾಗಿ ಚಿಂತಿಸದೇ, ಪ್ರತಿ ಬಾರಿಯೂ ಕಬ್ಬು ನುರಿಸುವ ಹಂಗಾಮು ಆರಂಭವಾಗುವ ಹೊಸ್ತಿಲ್ಲಲ್ಲಿ ಕಾರ್ಖಾನೆಯ ಪರವಾಗಿ ಪತ್ರಿಕಾ ಹೇಳಿಕೆಗಳನ್ನು ಕ್ಷೇತ್ರದ ಶಾಸಕರು ನೀಡುತ್ತಿದ್ದಾರೆ. ಇದು ನಮ್ಮ ದುರ್ದೈವ ಎಂದರು.
ಸಮೀಪದ ಖಾನಾಪುರ ಕಾರ್ಖಾನೆಯವರು ಯಾವುದೇ ಉಪ ಉತ್ಪನ್ನ ತಯಾರಿಸದೇ ಪ್ರತಿ ಟನ್‌ಗೆ ಹಳಿಯಾಳ ಕಾರ್ಖಾನೆಗಿಂತ ಹೆಚ್ಚಿನ ದರವನ್ನು ಕಳೆದ ವರ್ಷ ನೀಡಿದ್ದಾರೆ. ಆದರೆ ಕ್ಷೇತ್ರದ ಶಾಸಕರು ರೈತರ ಪರವಾಗಿ ಮಾತನಾಡದಿರುವುದು ಏಕೆ ಎಂದು ಪ್ರಶ್ನಿಸಿದರು.ಕಬ್ಬು ಲಗಾಣಿಗೆ ಕನಿಷ್ಠವೆಂದರೂ ₹500ರಿಂದ ₹600 ನೀಡಬೇಕು. ಅಲ್ಲದೇ ವಾಹನ ಚಾಲಕರಿಗೆ ಹಣ ಕೊಡಬೇಕು. ಕಾರ್ಖಾನೆಯವರು ಕನಿಷ್ಠ ದರ ನೀಡಿದರೇ ರೈತರ ಕೈಗೆ ಹಣ ಬರುವುದೆಷ್ಟು? ಕಬ್ಬು ಸಾಗಾಟ ಮಾಡುವ ವಾಹನದ ಮಾಲೀಕರಿಗೆ ಅತ್ಯಂತ ಕಡಿಮೆ ಬಾಡಿಗೆಯನ್ನು ಕಾರ್ಖಾನೆಯವರು ನೀಡಿ ಶೋಷಿಸುತ್ತಿದ್ದಾರೆ. ಇಂದನದ ದರ, ವಾಹನದ ಬಿಡಿಭಾಗಗಳ ದರವು ಹೆಚ್ಚಾಗಿದೆ. ಹೀಗಿರುವಾಗ ಕಾರ್ಖಾನೆಯವರು ಎಂಟು ವರ್ಷದ ಹಿಂದಿನ ಬಾಡಿಗೆಯನ್ನು ನೀಡುತ್ತಿದ್ದು, ಈ ವಿಷಯ ಶಾಸಕರ ಗಮನಕ್ಕಿಲ್ಲವೇ ಎಂದು ವಿಚಾರಿಸಿದರು.
ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ ಮಾತನಾಡಿ, ಹಳಿಯಾಳ ಸಕ್ಕರೆ ಕಾರ್ಖಾನೆಯು ರೈತರ ಪಾಲಿಗೆ ಕಾಮಧೇನುವಂತೂ ಆಗಿಲ್ಲ. ಅದೂ ಯಾರಿಗೆ ಕಾಮಧೇನುವಾಗಿದೆ ಎಂದು ಸ್ಷಷ್ಟಡಿಸಬೇಕೆಂದರು. ಐದಾರು ವರ್ಷಗಳ ಹಿಂದೆ ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ ₹305 ಹೆಚ್ಚುವರಿ ಹಣವನ್ನು ನೀಡುವುದಾಗಿ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾಗ್ದಾನ ಮಾಡಿದ್ದರು. ₹305 ಕೊಡುವಂತೆ ನಾನೇ ಹೇಳಿದ್ದೆ ಎಂದು ಶಾಸಕರು ಎಲ್ಲೆಡೆ ಹೇಳಿ ಭಾಷಣ ಮಾಡಿದ್ದಾರೆ. ಆದರೆ ಆ ಹಣವು ಇನ್ನೂವರೆಗೂ ಸಿಗಲಿಲ್ಲ ಎಂದು ಟೀಕಿಸಿದರು.ರೈತರು ಬೀದಿಗಳಿಯಲು ಕಾರಣ: ಕಬ್ಬು ಬೆಳೆಗಾರರ ಮುಖಂಡ ನಾಗೇಂದ್ರ ಜಿವೋಜಿ ಮಾತನಾಡಿ, ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು 2021- 22ನೇ ಸಾಲಿನ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೆಚ್ಚುವರಿ ಕಡಿತ ಮಾಡಿದ ಪ್ರತಿ ಟನ್‌ಗೆ ₹119 ಬಾಕಿ ಹಣ, 2022- 23ನೇ ಸಾಲಿನಲ್ಲಿ ಕಬ್ಬಿನ ಉಪ ಉತ್ಪನ್ನಗಳ ಲಾಭ ಟನ್‌ಗೆ ₹256, 2022- 23ನೇ ಸಾಲಿನಲ್ಲಿ ಸರ್ಕಾರ ಆದೇಶ ಮಾಡಿದಂತೆ ಕಬ್ಬಿನ ಹೆಚ್ಚುವರಿ ದರ ಪ್ರತಿ ಟನ್‌ಗೆ ₹150 ರೈತರಿಗೆ ಕಾರ್ಖಾನೆಯವರು ಪಾವತಿಸಬೇಕು. ನ್ಯಾಯಯುತವಾಗಿ ರೈತರಿಗೆ ಬರಬೇಕಾಗಿದ್ದ ಹಣ ರೈತರ ಖಾತೆಗಳಿಗೆ ಜಮಾ ಮಾಡಬೇಕು. ಈ ದಿಸೆಯಲ್ಲಿ ಶಾಸಕರು ಮುಂದಾಗಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಸಾತೇರಿ ಗೋಡೆಮನಿ, ಗಿರೀಶ ಠೊಸುರ, ರಾಮದಾಸ ಬೆಳಗಾಂವಕರ, ಶ್ರೀಧರ ಹೊಸಮನಿ ಇದ್ದರು.