ಸೇವಾ ಮನೋಭಾವನೆಯ ಉದ್ದೇಶದಿಂದ ಆರಂಭಗೊಂಡ ಬೆಳಗಾವಿಯ ಕೆ.ಎಲ್.ಎಸ್ ಸಂಸ್ಥೆಯು ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಮಾದರಿ ಸೇವೆ ಸಲ್ಲಿಸುತ್ತಿದೆ.
ವಿಡಿಐಟಿ ಕಾಲೇಜಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಶಾಸಕ
ಕನ್ನಡಪ್ರಭ ವಾರ್ತೆ ಹಳಿಯಾಳಸೇವಾ ಮನೋಭಾವನೆಯ ಉದ್ದೇಶದಿಂದ ಆರಂಭಗೊಂಡ ಬೆಳಗಾವಿಯ ಕೆ.ಎಲ್.ಎಸ್ ಸಂಸ್ಥೆಯು ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಮಾದರಿ ಸೇವೆ ಸಲ್ಲಿಸುತ್ತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಸೋಮವಾರ ಪಟ್ಟಣದ ಕೆ.ಎಲ್.ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜಿನ 22ನೇ ಸಂಸ್ಥಾಪನೆಯ ದಿನಾಚಣೆಗೆ ಚಾಲನೆ ನೀಡಿ ಮಾತನಾಡಿದರು.ಈ ಸಂಸ್ಥೆಯ ಆಡಳಿತವನ್ನು ನೋಡಿಯೇ ನಾನು ಹಳಿಯಾಳದಲ್ಲೂ ಒಂದೂ ಶೈಕ್ಷಣಿಕ ಸಂಸ್ಥೆಯನ್ನು ಆರಂಭಿಸುವಂತೆ ಮಾಡಿದ ಮನವಿಗೆ ಸಂಸ್ಥೆಯವರು ಸ್ಪಂದಿಸಿದ ಪರಿಣಾಮ ಇಂದೂ ಹಳಿಯಾಳದಲ್ಲಿ ಎಂಜಿನಿಯರಿಂಗ್ ಕಾಲೇಜು ಆರಂಭಗೊಂಡು 22 ವರ್ಷಗಳು ಸಂದವು. ಈಗ ಹಳಿಯಾಳ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಲಾರಂಭಿಸಿದೆ ಎಂದರು.
ಆಧುನಿಕತೆಯ ಈ ಯುಗದಲ್ಲಿ ಮಾನವ ತನ್ನ ಬದುಕನ್ನು ಆದಷ್ಟು ಸರಳ ಸುಲಭ ಮಾಡಲು ಪ್ರಯತ್ನಿಸುತ್ತಿದ್ದು, ಇನ್ನೊಂದೆಡೆ ಮಾನವೀಯ ಮೌಲ್ಯಗಳನ್ನು ಮರೆಯಲಾರಂಭಿಸಿದ್ದರಿಂದ ತನಗರಿವಿಲ್ಲದೇ ಯಾಂತ್ರಿಕ ಬದುಕಿನತ್ತ ಹೆಜ್ಜೆಯಿಟ್ಟು, ಮಾನಸಿಕ ನೆಮ್ಮದಿ, ಸಂತೃಪ್ತಿಯ ಜೀವನದಿಂದ ವಂಚಿತರಾಗುತ್ತಿದ್ದಾನೆ ಎಂದು ದೇಶಪಾಂಡೆ ಆತಂಕ ವ್ಯಕ್ತಪಡಿಸಿದರು.ಗ್ರೇಡ್ ಶ್ರೇಣಿಯಾಧರಿತ ಪೈಪೋಟಿಯ ಶಿಕ್ಷಣದ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳಿಗೆ ಸಾಮಾಜಿಕ ಜ್ಞಾನ, ಸುತ್ತಮುತ್ತಲೂ ನಡೆಯುವ ವಿದ್ಯಮಾನಗಳ ಬಗ್ಗೆ ತಿಳಿಯುವ ಕುತೂಹಲ ಬೆಳೆಸಬೇಕು. ಮಾನವೀಯ ಮೌಲ್ಯಗಳು, ಉತ್ತಮ ಚಾರಿತ್ರ್ಯ ನಿರ್ಮಾಣ, ಯಾವುದೇ ವಿಷಯವನ್ನು ಸರಿಯಾಗಿ ಅರಿಯಬೇಕೇ ಹೊರತು, ಗಿಳಿಪಾಠದ ಪದ್ಧತಿಯಿಂದ ಹೊರಬನ್ನಿರಿ ಎಂದರು.
ಇನ್ಫೋಸಿಸ್ ಹುಬ್ಬಳ್ಳಿ ಶಾಖೆಯ ಸಹ ಉಪಾಧ್ಯಕ್ಷ ಅಲ್ಲಾಬಕ್ಷ ಅಸಾದುಲ್ಲಾ, ಇಜೋನ್ ಎಲೆಕ್ಟ್ರಿಕಲ್ ವೆಹಿಕಲ್ ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕ ಗಣಪತಿ ಸೋಡಿಗದ್ದೆ ಹಾಗೂ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 739ನೇ ಸ್ಥಾನ ಪಡೆದ ಕಾಲೇಜಿನ ಹಳೇ ವಿದ್ಯಾರ್ಥಿ ಬಸವರಾಜ್ ಪಾಟೀಲ ತಮ್ಮ ಅನುಭವ ಹಂಚಿಕೊಂಡರು.ಕೆ.ಎಲ್.ಎಸ್ ಸಂಸ್ಥೆಯ ಅಧ್ಯಕ್ಷ ಪಿ.ಎಸ್. ಸಾವ್ಕಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಎಲ್.ಎಸ್ ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ ಎ.ಕೆ. ಟಗಾರೆ, ಉಪಾಧ್ಯಕ್ಷ ದೀಪಕ್ ಕುಲಕರ್ಣಿ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ ಕುಲಕರ್ಣಿ, ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ, ಕೆ.ಎಲ್.ಎಸ್ ಆಡಳಿತ ಮಂಡಳಿಯ ಎಸ್.ಎಂ. ಕುಲಕರ್ಣಿ, ಎ.ಎ. ಕುಲಕರ್ಣಿ, ಸಂಜೀವ್ ಅಧ್ಯಾಪಕ, ಕರ್ನಾಟಕ ಬ್ಯಾಕ್ ದಾಂಡೇಲಿ ಶಾಖೆಯ ವ್ಯವಸ್ಥಾಪಕ ವೀರೇಂದ್ರ ಶೇಟ್, ಜಯರಾಮ್ ಪ್ರಭು, ಹುಬ್ಬಳ್ಳಿ ಡೊಕೆಟ್ರನ್ ಸಂಸ್ಥಾಪಕ ಅಜಯ್ ಕಬಾಡಿ , ವಿ.ಆರ್.ಡಿ.ಎಂ. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಕೆ.ಎಲ್.ಎಸ್ ಪಿಯು/ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ್ ಪ್ರಭು ಇದ್ದರು. ಕಾರ್ಯಕ್ರಮದಲ್ಲಿ ಇಜೋನ್ ಎಲೆಕ್ಟ್ರಿಕಲ್ ವೆಹಿಕಲ್ ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕ ಗಣಪತಿ ಸೋಡಿಗದ್ದೆ ಹಾಗೂ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 739ನೇ ಸ್ಥಾನ ಪಡೆದ ಕಾಲೇಜಿನ ಹಳೇ ವಿದ್ಯಾರ್ಥಿ ಬಸವರಾಜ್ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕರ್ನಾಟಕ ಬ್ಯಾಂಕಿನವರು ಕಾಲೇಜಿಗೆ ನೀಡಿದ ಡಿಜಿಟಲ್ ಡಿಸ್ಪ್ಲೆ ಸ್ಕೀನ್ ಬೋರ್ಡ್ ಹಾಗೂ ಎನ್.ವಿಡಿಯಾ ಜಟ್ಸ್ನ್ ಓರಿಯನ್ ನ್ಯಾನೋ ನಾವಿನ್ಯತಾ ಕಲಿಕಾ ಕೇಂದ್ರವನ್ನು ಶಾಸಕ ದೇಶಪಾಂಡೆ ಉದ್ಘಾಟಿಸಿದರು.
ಡಾ. ವೆಂಕಟೇಶ್ ಶಂಕರ, ಡಾ. ಪೂರ್ಣಿಮಾ ರಾಯ್ಕರ್, ಡಾ. ನಾಗರಾಜ್ ಭಟ್, ಪ್ರೊ. ರಾಜೇಶ್ವರಿ ಎನ್. ಕಾರ್ಯಕ್ರಮ ಸಂಯೋಜಿಸಿದ್ದರು. ಪ್ರೊ. ಲಕ್ಷ್ಮೀ ಹಟ್ಟಿಹೋಳಿ, ಪ್ರೊ. ಶ್ರೀಗೌರಿ ಕಾರ್ಯಕ್ರಮ ನಿರ್ವಹಿಸಿದರು.