ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯನವರನ್ನು ದುರ್ಬಲಗೊಳಿಸಿ ತೇಜೋವಧೆ ಮಾಡುವ ಕುತಂತ್ರ ಮಾಡಿ, ರಾಜ್ಯಪಾಲರ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೇ ವಿವಿಧ ಸಂಘಟನೆಗಳು ಸೇರಿ ಪ್ರತಿಭಟನೆ ಮಾಡಲು ಮುಂದಾಗುವುದಾಗಿ ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಬೀರೇಗೌಡ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನಾಲ್ಕೈದು ದಶಕಗಳ ರಾಜಕೀಯ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೇ ಸಾರ್ವಜನಿಕ ಬದುಕಿನಲ್ಲಿ ಜನರು ಮೆಚ್ಚುವಂತೆ ಕೆಲಸ ಮಾಡಿದ್ದಾರೆ. ನಡೆ, ನುಡಿಯಲ್ಲಿ ಎಂದು ತಪ್ಪು ಹೆಜ್ಜೆ ಇಟ್ಟವರಲ್ಲ ಇಡಿ ಕರ್ನಾಟಕದಲ್ಲಿ ಶೋಷಿತ ಸಮುದಾಯಗಳ ಪರ, ಧ್ವನಿ ಎತ್ತುವ ಏಕೈಕ ನಾಯಕರೆಂದರೆ ಅದು ಸಿದ್ದರಾಮಯ್ಯ. ಕುತಂತ್ರದಿಂದ, ಮೋಸದ ಮೂಲಕ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯುತ್ನವೇನಾದರೂ ನಡೆದರೆ ಅವರ ಅಭಿಮಾನಿಗಳು ಅವರ ಕುಲಬಾಂಧವರು, ಶೋಷಿತವರ್ಗದವರು, ಹಿಂದುಳಿದ ವರ್ಗದವರು, ಕೈಕಟ್ಟಿ ಮನೆಯಲ್ಲಿ ಕೂರುವುದಿಲ್ಲ. ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲಿ ಹೋರಾಟ, ಚಳುವಳಿ ಪ್ರಾರಂಭಿಸುತ್ತೇವೆ. ರಾಜ್ಯದ ಕುರುಬರು ದಂಗೆ ಏಳಬೇಕಾಗುತ್ತದೆ. ಈ ಮೂಲಕ ಅವರ ವಿರೋಧಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.ಸಿದ್ದರಾಮಯ್ಯವರು ಬಡವರ ಆಶಾಕಿರಣ, ಕುರುಬರ ಮಾಣಿಕ್ಯ, ಶೋಷಿತರ ದೈವ ಅವರಿಗೇನಾದರೂ ಅಧಿಕಾರದಲ್ಲಿ ತೊಂದರೆ ಆದರೆ, ಎಲ್ಲಾ ವರ್ಗದ ಜನರು, ಚಳವಳಿ ಹೋರಾಟ, ಸತ್ಯಾಗ್ರಹ, ಹಲವಾರು ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಲು ಸಿದ್ಧರಿದ್ದೇವೆ. ಈ ನಾಡಿನಲ್ಲಿ ಸೌಲಭ್ಯವಂಚಿತ ಸಮುದಾಯಗಳಿಗೆ ಧ್ವನಿಯಾದ, ಧಣಿಗೆ ಸ್ವಲ್ಪನೋವಾದರು ನಾವುಗಳು ಸಹಿಸುವುದಿಲ್ಲ. ಅವರ ವಿರೋಧಿಗಳು ಈ ದೇಶದ, ರಾಜ್ಯದ ಸಂಪತ್ತನ್ನು ಎಷ್ಟು ಲೂಟಿ ಮಾಡಿದ್ದಾರೆಂದು ಎಲ್ಲರಿಗೂ ತಿಳಿದಿದೆ ವರ್ಷದಿಂದ, ವರ್ಷಕ್ಕೆ ಸಾವಿರಾರು, ನೂರಾರು ಕೋಟಿ ಸಂಪಾದಿಸಿದ್ದು, ಅವರ ಮನೆಯ ಟೆರೆಸ್ ಮೇಲೆ ಬಂಗಾರದ ಗಿಡ ಬೆಳೆದು, ಆಸ್ತಿ, ಹಣ, ಮಾಡಿದ್ದಾರಾ ? ಜನರೇನು ದಡ್ಡರಲ್ಲ. ವಿದ್ಯಾವಂತರು, ಬುದ್ಧಿವಂತರು ಈ ಸಮಾಜದ ಹಾಗೂ ಹೋಗುಗಳ ಬಗ್ಗೆ ತಿಳಿದಿದ್ದಾರೆ. ಜಾತಿಯ ಮುಖವಾಡದಿಂದ ಹೊರಬಂದಾಗ ಮಾತ್ರ ಅರ್ಥವಾಗುತ್ತದೆ ಎಂದು ಕುಟುಕಿದರು.
ಅವರ ಧರ್ಮಪತ್ನಿ ತವರು ಮನೆಯಿಂದ ಬಳುವಳಿಯಾಗಿ ಬಂದ, ಜಮೀನನನ್ನು ಮುಡಾಕ್ಕೆ ಕೊಟ್ಟು ಕಾನೂನು ರೀತಿ ಅವರ ಪಾಲನ್ನು ಪಡೆದಿದ್ದಾರೆ. ಅವರೇನು ಅವರ ವಂಶದವರಿಗೆಲ್ಲ ನಿವೇಶನ ಪಡೆದಿಲ್ಲ. ಕೋಟ್ಯಂತರ ಜನರು ೫೦, ೬೦ವರ್ಷಗಳಿಂದ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರೂ ನಿವೇಶನಗಳು ಉಳ್ಳವರ ಪಾಲಾಗಿವೆ. ನ್ಯಾಯ ಮಾರ್ಗದಲ್ಲಿ ನಡೆಯುವಂತ ಕರ್ನಾಟಕ ಕಂಡ ಧೀಮಂತ ನಾಯಕನಿಗೆ ಹೊಟ್ಟೆಕಿಚ್ಚಿನಿಂದ ಅಸಹನೆಯಿಂದ ಕಾನೂನು ಮೀರಿ, ಪಿತೂರಿ ಮಾಡಿ, ಸಂಚು ರೂಪಿಸುತ್ತಿರುವ ಕುತಂತ್ರಿಗಳ ವಿರುದ್ಧ ಪ್ರತಿಭಟನೆ ಮಾಡಲು ನಾವೆಲ್ಲರೂ ಸಜ್ಜಾಗಿದ್ದೇವೆ ಎಂದು ಹೇಳಿದರು.ಹಿಂದುಳಿದ ನಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ದುರ್ಬಲಗೊಳಿಸುವ ಅವರ ಸುಳ್ಳು ಆರೋಪವನ್ನು ಖಂಡಿಸಿ, ಹಾಲುಮತ ಮಹಾಸಭಾವತಿಯಿಂದ ಪ್ರತಿಭಟನೆಯನ್ನು ಮೇಲಿನ ಹಮ್ಮಿಕೊಳ್ಳಲಾಗುವುದು. ನ್ಯಾಯದ ಮಾರ್ಗದಲ್ಲಿ ನಡೆಯುವಂತ ಕರ್ನಾಟಕ ಕಂಡ ಧೀಮಂತ ನಾಯಕನ ಉಳಿವಿಗಾಗಿ, ಈ ಒಂದು ಹೋರಾಟ. ಇತ್ತೀಚಿಗೆ ಕರ್ನಾಟಕ ರಾಜ್ಯದಲ್ಲಿ ಕೋಮುವಾದಿಗಳು, ಜಾತಿವಾದಿಗಳು, ಪಟ್ಟಭದ್ರ ಹಿತಾಸಕ್ತಿಗಳು, ಹಿಂಬಾಗಿಲಿನಿಂದ ಕುರ್ಚಿಗಾಗಿ ಅಧಿಕಾರದ ಆಸೆಯಿಂದ, ಸಿದ್ಧರಾಮಯ್ಯರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಹುನ್ನಾರ ಮಾಡುತ್ತಿರುವುದು ಜನರಿಗೆ ತಿಳಿದಿರುವ ವಿಷಯ, ಸಿದ್ದರಾಮಯ್ಯನವರು ಸರ್ಕಾರದ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇದೆ. ಅವರ ೪೦ ವರ್ಷದ ರಾಜಕೀಯ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಹಣಕಾಸು ಸಚಿವರಾಗಿ ೧೫ ಬಾರಿ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ತಮ್ಮ ಮೇಲೆ ಬಂದಂತಹ ಆರೋಪಕ್ಕೆ ಸ್ವತಃ ತನಿಖಾ ಆಯೋಗ ರಚಿಸಿದ ದೇಶದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಈ ಬಗ್ಗೆ ಕರ್ನಾಟಕದ ಕುರುಬ ಸಮುದಾಯದ, ಹಲವು ಸಂಘಟನೆಗಳು ಶೋಷಿತ ಸಮುದಾಯಗಳು, ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳು, ಜನಪರ ಸಂಘಟನೆಗಳು, ಪ್ರತಿಭಟನೆ ಮಾಡಲು ಸಜ್ಜಾಗಿದ್ದೇವೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಲುಮತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಪುಟ್ಟರಾಜು, ಉಪಾಧ್ಯಕ್ಷ ಸತೀಶ್ ಬಾಬು, ತಾಲೂಕು ಅಧ್ಯಕ್ಷ ಕೃಷ್ಣೇಗೌಡ ಇತರರು ಉಪಸ್ಥಿತರಿದ್ದರು.